Home namma chikmagalur chikamagalur ಕನಕದಾಸರ ವಿಚಾರಧಾರೆ ಯುವಪೀಳಿಗೆಗೆ ತಲುಪಲಿ
chikamagalurHomeLatest Newsnamma chikmagalur

ಕನಕದಾಸರ ವಿಚಾರಧಾರೆ ಯುವಪೀಳಿಗೆಗೆ ತಲುಪಲಿ

Share
Share

ಚಿಕ್ಕಮಗಳೂರು:  ದಾಸ ಸಾಹಿತ್ಯಕ್ಕೆ ಮಹಾಶಕ್ತಿ ತುಂಬಿದ ಸಂತ ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಅವರು ಸಮಾಜ ಸುಧಾರಕರಾಗಿ, ಕವಿಯಾಗಿ ಇಡೀ ಜಗತ್ತಿಗೆ ಬೆಳಕಾದವರು. ಅವರ ವಿಚಾರಧಾರೆಗಳನ್ನು ಇಂದಿನ ಯುವಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಭಕ್ತಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಿಮ್ಮಪ್ಪ ನಾಯಕರಾಗಿದ್ದ ಅವರು, ಯುದ್ಧದ ಹಿಂಸೆ ಕಂಡು ವೈರಾಗ್ಯ ತಾಳಿ, ತಮಗೆ ಸಿಕ್ಕ ಅಪಾರ ಸಂಪತ್ತನ್ನು ಜನಹಿತಕ್ಕಾಗಿ ಹಾಗೂ ಕಾಗಿನೆಲೆಯ ಆದಿಕೇಶವನ ದೇಗುಲ ನಿರ್ಮಾಣಕ್ಕೆ ಬಳಸಿ ಕನಕನಾಯಕರಾದರು. ಬಳಿಕ ವ್ಯಾಸರಾಯರಿಂದ ದೀಕ್ಷೆ ಪಡೆದು ಹರಿದಾಸರಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದರು ಎಂದು ಸ್ಮರಿಸಿದರು.

೧೨ನೇ ಶತಮಾನದ ಬಸವಣ್ಣನವರು, ೧೫ನೇ ಶತಮಾನದ ಕನಕದಾಸರು ಹಾಗೂ ೧೯ನೇ ಶತಮಾನದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅಂದಿನ ಸಂಪ್ರದಾಯವಾದಿಗಳು ನಿರಂತರವಾಗಿ ತೊಂದರೆ ನೀಡಿದರು. ಉಡುಪಿಯಲ್ಲಿ ಕನಕದಾಸರಿಗೆ ಶ್ರೀಕೃಷ್ಣನ ದರ್ಶನಕ್ಕೆ ಅಡ್ಡಿಪಡಿಸಿದಾಗ, ಭಗವಂತನೇ ಹಿಮ್ಮುಖವಾಗಿ ತಿರುಗಿ ಕಿಂಡಿಯ ಮೂಲಕ ದರ್ಶನ ನೀಡಿದ್ದು ಇತಿಹಾಸ. ಅಂತಹ ಸಂಪ್ರದಾಯವಾದಿಗಳು ಇಂದಿಗೂ ಸಮಾಜದಲ್ಲಿದ್ದಾರೆ. ಆದರೆ, ನಮ್ಮ ಜನರು ಈಗಾಗಲೇ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ. ಪ್ರಪಂಚ ಇರುವವರೆಗೂ ಬಸವಣ್ಣನವರ ವಚನ ಸಾಹಿತ್ಯ, ಕನಕದಾಸರ ದಾಸ ಸಾಹಿತ್ಯ ಮತ್ತು ಅಂಬೇಡ್ಕರ್ ಅವರ ಸಂವಿಧಾನ ಶಾಶ್ವತವಾಗಿ ಉಳಿಯಲಿವೆ ಎಂದು ಅವರು ಅಭಿಪ್ರಾಯಪಟ್ಟರು.

ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕನಕದಾಸರಂತಹ ಮಹಾಪುರುಷರ ವಿಚಾರಧಾರೆಗಳನ್ನು ಎಷ್ಟೇ ಸಂಪ್ರದಾಯವಾದಿಗಳು ತಡೆಯಲು ಪ್ರಯತ್ನಿಸಿದರೂ ಅದು ಅಸಾಧ್ಯ. ಈ ಪ್ರಪಂಚ ಇರುವವರೆಗೂ ಕನಕದಾಸರ ಕೀರ್ತನೆಗಳು ಹಾಗೂ ತತ್ವಗಳು ಅಜರಾಮರವಾಗಿರುತ್ತವೆ. ಜಾತಿ-ಮತಗಳ ಭೇದವಿಲ್ಲದೆ ನಾವೆಲ್ಲರೂ ಒಗ್ಗಟ್ಟಾಗಿ ಮಾನವೀಯ ಮೌಲ್ಯಗಳೊಂದಿಗೆ ಬದುಕಬೇಕು ಎಂದು ತಿಳಿಸಿದರು.

ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್. ಹರೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನಕದಾಸರು ಒಂದು ಜಾತಿಗೆ ಸೀಮಿತವಾದವರಲ್ಲ. ಇಡೀ ಮನುಕುಲಕ್ಕೆ ದಾರಿದೀಪವಾದ ವಿಶ್ವಮಾನವರು. ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯನ್ನು ತಮ್ಮ ಕೀರ್ತನೆಗಳ ಮೂಲಕ ತೀವ್ರವಾಗಿ ಖಂಡಿಸಿ, ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದರು ಎಂದು ಹೇಳಿದರು.

೧೬ನೇ ಶತಮಾನದಲ್ಲಿ ಸಮಾಜದಲ್ಲಿ ತಾಂಡವವಾಡುತ್ತಿದ್ದ ಜಾತಿ ಪದ್ಧತಿಯ ವಿರುದ್ಧ ಕನಕದಾಸರು ಧ್ವನಿ ಎತ್ತಿದರು. ‘ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ’ ಎಂದು ಇಡೀ ಸಮಾಜವನ್ನು ಪ್ರಶ್ನಿಸಿದರು. ಉಡುಪಿಯ ಶ್ರೀಕೃಷ್ಣ ದೇಗುಲದಲ್ಲಿ ಪ್ರವೇಶ ನಿರಾಕರಿಸಿದಾಗ, ದೇಗುಲದ ಹಿಂಭಾಗದಲ್ಲಿ ನಿಂತು ಭಕ್ತಿಯಿಂದ ಹಾಡಿದಾಗ ಶ್ರೀಕೃಷ್ಣನೇ ಪಶ್ಚಿಮಕ್ಕೆ ತಿರುಗಿ ಕಿಂಡಿಯ ಮೂಲಕ ದರ್ಶನ ನೀಡಿದನು. ಇದು ಅವರ ಭಕ್ತಿಗಿದ್ದ ಶಕ್ತಿಗೆ ಸಾಕ್ಷಿ ಎಂದರು.

ತಿಮ್ಮಪ್ಪ ನಾಯಕರಾಗಿದ್ದ ಅವರು ಯುದ್ಧವೊಂದರಲ್ಲಿ ತೀವ್ರವಾಗಿ ಗಾಯಗೊಂಡ ಬಳಿಕ ವೈರಾಗ್ಯ ತಾಳಿ, ತಮ್ಮ ಸಂಪತ್ತನ್ನೆಲ್ಲ ಬಡವರಿಗೆ ದಾನ ಮಾಡಿದರು. ನಂತರ ವ್ಯಾಸರಾಯರ ಶಿಷ್ಯರಾಗಿ ಹರಿದಾಸ ದೀಕ್ಷೆ ಪಡೆದು ಕನಕದಾಸರಾದರು. ಮೋಹನ ತರಂಗಿಣಿ, ನಳಚರಿತೆ, ಹರಿಭಕ್ತಿಸಾರ ಹಾಗೂ ಶ್ರೀಮಂತರು ಮತ್ತು ಬಡವರ ನಡುವಿನ ಸಂಬಂಧವನ್ನು ಸಾರುವ ’ರಾಮಧಾನ್ಯ ಚರಿತೆ’ಯಂತಹ ಅತ್ಯುತ್ತಮ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಕನಕದಾಸರು ಹುಟ್ಟಿನ ಕಾರಣಕ್ಕೆ ಶ್ರೇಷ್ಠರಾದವರಲ್ಲ. ಬದಲಾಗಿ ತಮ್ಮ ಆದರ್ಶ ಬದುಕಿನ ಕಾರಣಕ್ಕಾಗಿ ಶ್ರೇಷ್ಠರಾದವರು. ಬಂಗಾರ ಎಲ್ಲಿದ್ದರೂ ತನ್ನ ಬೆಲೆಯನ್ನು ಕಳೆದುಕೊಳ್ಳದಂತೆ, ಕನಕದಾಸರ ತತ್ವ ಮತ್ತು ಮೌಲ್ಯಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಹೇಳಿದರು.

ಪಾಳೆಯಗಾರ ತಿಮ್ಮಪ್ಪ ನಾಯಕನಾಗಿದ್ದವರು ವೈರಾಗ್ಯ ಮೂರ್ತಿಯಾಗಿ, ಹರಿಭಕ್ತರಾಗಿ ಕನಕದಾಸರಾದರು. ಅವರು ಸಮಾಜಕ್ಕೆ ಮೌಲ್ಯವನ್ನು ತಂದುಕೊಟ್ಟರೇ ಹೊರತು, ಎಂದಿಗೂ ಮೌಲ್ಯ ಕಳೆದುಕೊಂಡವರಲ್ಲ. ಅವರ ಬದುಕು ಇಡೀ ಸಮಾಜಕ್ಕೆ ಒಂದು ದೊಡ್ಡ ನಿದರ್ಶನ ಎಂದು ಬಣ್ಣಿಸಿದರು.

ಕನಕದಾಸರು ತಮ್ಮ ಮುಂಡಿಗೆಗಳ ಮೂಲಕ ಪುರಾಣ ಮತ್ತು ಐತಿಹ್ಯಗಳನ್ನು ಅತ್ಯಂತ ಸರಳವಾಗಿ ಸಾಮಾನ್ಯ ಜನರಿಗೆ ತಲುಪಿಸಿದರು. ಪುಟ್ಟದಾಸ ನಾನಲ್ಲ, ದಿಟ್ಟದಾಸ ನಾನಲ್ಲ, ಸಿಟ್ಟುದಾಸ ನಾನಲ್ಲ, ಸುಟ್ಟದಾಸ ನಾನಲ್ಲ, ಸುಡುಗಾಡು ದಾಸ ನಾನಲ್ಲ’ ಎಂಬ ಸಾಲುಗಳ ಮೂಲಕವೇ ಪ್ರಹ್ಲಾದ, ದುರ್ವಾಸ, ಹನುಮಂತ ಹಾಗೂ ಸತ್ಯ ಹರಿಶ್ಚಂದ್ರನಂತಹ ಮಹಾನ್ ಪಾತ್ರಗಳ ಕಥೆಯನ್ನು ಕಟ್ಟಿಕೊಟ್ಟರು ಎಂದರು.

ಕನಕದಾಸರ ‘ರಾಮಧಾನ್ಯ ಚರಿತ್ರೆ’ ಕೃತಿ ಉಲ್ಲೇಖಿಸಿದ ಅವರು, ಅಕ್ಕಿ ಮತ್ತು ರಾಗಿಯ ನಡುವೆ ಯಾರು ಶ್ರೇಷ್ಠ ಎಂಬ ಸಂಘರ್ಷ ಏರ್ಪಟ್ಟಾಗ, ಆರು ತಿಂಗಳ ಕಾಲ ಬಂದಿಖಾನೆಯಲ್ಲಿಟ್ಟರೂ ಕೆಡದೆ ಗಟ್ಟಿಯಾಗಿ ಉಳಿದ ರಾಗಿಯೇ ಶ್ರೇಷ್ಠ ಎಂಬುದನ್ನು ಕನಕದಾಸರು ತೋರಿಸಿಕೊಟ್ಟರು. ಆ ಮೂಲಕ ಶ್ರಮಿಕ ವರ್ಗದ ಆಹಾರಕ್ಕೆ ಮತ್ತು ಸಾಮಾಜಿಕ ಸಮಾನತೆಗೆ ದೊಡ್ಡ ಗೌರವ ತಂದುಕೊಟ್ಟರು. ಮನುಷ್ಯ ಹುಟ್ಟು, ಶ್ರೀಮಂತಿಕೆ ಅಥವಾ ಅಧಿಕಾರದಿಂದ ಶ್ರೇಷ್ಠನಾಗಲು ಸಾಧ್ಯವಿಲ್ಲ. ಕೇವಲ ಸದ್ಗುಣಗಳಿಂದ ಮಾತ್ರ ಶ್ರೇಷ್ಠತೆ ಗಳಿಸಲು ಸಾಧ್ಯ ಎಂಬುದನ್ನು ಭಕ್ತಶ್ರೇಷ್ಠ ಕನಕದಾಸರು ತಮ್ಮ ‘ರಾಮಧಾನ್ಯ ಚರಿತೆ’ಯ ಮೂಲಕ ಸಮಾಜಕ್ಕೆ ಸರಳವಾಗಿ ಸಾರಿದ್ದಾರೆ ಎಂದು ಹೇಳಿದರು.

ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಕೇವಲ ಗ್ರಂಥ ಭಂಡಾರಗಳಷ್ಟೇ ಅಲ್ಲದೆ, ಜನಪದ, ಗಾದೆಗಳು, ವಚನಗಳು ಹಾಗೂ ದಾಸರ ಪದಗಳ ಕೊಡುಗೆ ಅಪಾರವಾಗಿದೆ. ದಾಸರ ಪ್ರತಿಯೊಂದು ಪದವೂ ಜನಮಾನಸದಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವ ಹಾಗೂ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡಿದೆ ಎಂದರು.

ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಭಕ್ತಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಆಚರಣೆಯು ಕೇವಲ ಮೆರವಣಿಗೆ, ಡಿಜೆ ಹಾಗೂ ನೃತ್ಯಕ್ಕೆ ಸೀಮಿತವಾಗದೆ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮತ್ತು ಜಾಗೃತಿ ಮೂಡಿಸುವ ವೇದಿಕೆಯಾಗಬೇಕು ಎಂದು ಹೇಳಿದರು.

ಕನಕದಾಸರು ಕೇವಲ ಭಕ್ತ ಕವಿಗಳಲ್ಲ, ಅವರು ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವಾಹಕರು. ‘ಕುಲ ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಅವರ ವಚನ ಇಂದಿಗೂ ಪ್ರಸ್ತುತವಾಗಿದೆ. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಸಹೋದರತ್ವದಿಂದ ಬದುಕಬೇಕು. ಮನುಷ್ಯನ ಶ್ರೇಷ್ಠತೆ ಇರುವುದು ಜಾತಿಯಿಂದಲ್ಲ, ಆತನ ಗುಣ ಮತ್ತು ನಡತೆಯಿಂದ ಎಂಬುದನ್ನು ಕನಕದಾಸರು ಸಾರಿದ್ದಾರೆ ಎಂದರು.

ಸಮಾಜದಲ್ಲಿ ಮಹಿಳೆಯರು ಸೇರಿದಂತೆ ಯಾರಿಗೇ ಅನ್ಯಾಯವಾದರೂ ಅದರ ವಿರುದ್ಧ ಧ್ವನಿ ಎತ್ತುವ ಜಾಗೃತಿ ನಮ್ಮಲ್ಲಿ ಮೂಡಬೇಕು. ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಜಯಂತಿ ಆಚರಣೆಯಲ್ಲಿ ಶಿಸ್ತು ಮತ್ತು ಗಾಂಭೀರ್ಯ ಇರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ಸಂತ ಕನಕದಾಸರು ಶತಮಾನಗಳ ಹಿಂದೆಯೇ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕುರಿತು ಪ್ರತಿಪಾದಿಸಿದ್ದು, ಆ ಆಶಯಗಳು ಇಂದಿನ ಸಂವಿಧಾನದಲ್ಲೂ ಪ್ರತಿಫಲಿಸುತ್ತಿವೆ ಎಂದು ಹೇಳಿದರು.

ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಮೈಸೂರಿನ ಪ್ರೊ.ಕಾಳೇಗೌಡ ನಾಗವಾರ ಅವರು, ಕನಕದಾಸರ ಕುರಿತು ಉಪನ್ಯಾಸ ನೀಡಿದರು. ನಗರದ ತಾಲ್ಲೂಕು ಕಚೇರಿಯಿಂದ ಕುವೆಂಪು ಕಲಾ ಮಂದಿರದವರೆಗೆ ವಿವಿಧ ಕಲಾ ತಂಡಗಳೊಂದಿಗೆ ಭಕ್ತಶೇಷ್ಠ ಕನಕ ದಾಸರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೀನಾಕ್ಷಿ ಆರ್ಯ, ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿ ಜಿತೇಂದರ್ ಕುಮಾರ್ ದಯ್ಮಾ, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜೇಗೌಡ, ನಗರ ಸಭೆ ಅಧ್ಯಕ್ಷೆ ಭವ್ಯ ಮಂಜುನಾಥ್,  ರಾಜ್ಯ ಕುರುಬ ಸಮಾಜದ ನಿರ್ದೇಶಕ ಡಿ.ಸಿ. ಪುಟ್ಟೇಗೌಡ, ಕುರುಬ ಸಂಘದ ಜಿಲ್ಲಾಧ್ಯಕ್ಷ ಶಾಂತೇಗೌಡ, ತಾಲೂಕು ಅಧ್ಯಕ್ಷ ರಾಜು ಸೇರಿದಂತೆ ವಿವಿಧ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು  ಉಪಸ್ಥಿತರಿದ್ದರು.

May the philosophy of Kanakadasa reach the younger generation.

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ಜಿಪಂನ 36 ಕ್ಷೇತ್ರಗಳಿಗೆ ಅಂತಿಮ ಮೀಸಲಾತಿ ಪ್ರಕಟ

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ 36 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ನವೆಂಬರ್ 23ರಂದು ಹೊರಡಿಸಿರುವ ಕರ್ನಾಟಕ ರಾಜಪತ್ರದ ಅಧಿಸೂಚನೆಯಲ್ಲಿ...

ಕನ್ನಡ ಸಾಹಿತ್ಯ ಪರಿಷತ್ ಘಟಕಗಳ ನಿರ್ವಹಣೆಗೆ ಆಡಳಿತಾಧಿಕಾರಿ ನೇಮಕ

ಕನ್ನಡ,ಕನ್ನಡ ಬನ್ನಿ ನಮ್ಮ ಸಂಗಡ ಎನ್ನುವ ಬದಲಿಗೆ ಕನ್ನಡ, ಕನ್ನಡ ನಮಗೆ ದೇಣಿಗೆ ನಿಮಗೆ ಬೇಕಾದ ಪ್ರಶಸ್ತಿಗಳು ಎನ್ನುವೇ ಅಂತಕ್ಕೆ ಸಾಹಿತ್ಯ ಪರಿಷತ್ ಗೆ ವಕ್ಕರಿಸಿರುವ ಕೆಲವರಿಗೆ ಊಟ,ತಿಂಡಿ,ನಿದ್ದೆ ಬರುವುದು ಕಡು...

Related Articles

ಸಚಿವರ ಸಭೆ ಬಹಿಷ್ಕರಿಸಲು ಸಿ.ಟಿ. ರವಿ ನಿರ್ಧಾರ

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿಗೆ ಆಗಮಿಸಿರುವ ಕಾಡಾನೆಗಳನ್ನು ಭದ್ರಾ...

ಅನ್ನದಾತರ “ಕಿವಿಗೆ “ಹೂವು “ಶಾಸಕಿ ನಯನ ಹೈ ಡ್ರಾಮಾ.

ಮೂಡಿಗೆರೆ :  ಇಲ್ಲಿನ ಕಾಫಿ ಬೆಳೆಗಾರರು, ರಹಿತರು, ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಂಡು ಪ್ರತಿ ವರ್ಷ...

ಆನೆ ಹಾವಳಿಗೆ ಬೇಸತ್ತ ರೈತ-ಪ್ರತಿಭಟನೆ ಸ್ಥಳದಲ್ಲೇ ವಿಷ ಸೇವಿಸಲು ಯತ್ನ

ಚಿಕ್ಕಮಗಳೂರು: ಕಾಡಾನೆಗಳ ಹಾವಳಿಯಿಂದ ತೋಟ ಹಾಗೂ ಬದುಕು ಕಳೆದುಕೊಂಡ ರೈತನೊಬ್ಬ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲೇ ವಿಷ...

ಹೈಡ್ರಾಮಾಕ್ಕೆ ತಾತ್ಕಾಲಿಕ ತೆರೆ-ತವರು ಸೇರಿದ 21 ಗಜಪಡೆ

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಕಾಡಾನೆಗಳನ್ನು ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರ ಕಾಫಿನಾಡಿನಲ್ಲಿ ಭಾರಿ...