Home namma chikmagalur chikamagalur ಹೈಡ್ರಾಮಾಕ್ಕೆ ತಾತ್ಕಾಲಿಕ ತೆರೆ-ತವರು ಸೇರಿದ 21 ಗಜಪಡೆ
chikamagalurHomeLatest Newsnamma chikmagalur

ಹೈಡ್ರಾಮಾಕ್ಕೆ ತಾತ್ಕಾಲಿಕ ತೆರೆ-ತವರು ಸೇರಿದ 21 ಗಜಪಡೆ

Share
Share

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಕಾಡಾನೆಗಳನ್ನು ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರ ಕಾಫಿನಾಡಿನಲ್ಲಿ ಭಾರಿ ರಾಜಕೀಯ ಹಾಗೂ ಸಾರ್ವಜನಿಕ ಸಂಘರ್ಷಕ್ಕೆ ಕಾರಣವಾಗಿತ್ತು. ರೈತರ ತೀವ್ರ ಪ್ರತಿಭಟನೆ, ಮೂಡಿಗೆರೆ ಬಂದ್ ಹಾಗೂ ಸ್ವಪಕ್ಷದ ಸರ್ಕಾರದ ವಿರುದ್ಧವೇ ಮೂವರು ಶಾಸಕರು ರಾಜೀನಾಮೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸರ್ಕಾರ ‘ಆಪರೇಷನ್ ಗಜ’ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್ ಹಾಕಿದೆ. ಇದರ ನಡುವೆಯೇ ಮೂಡಿಗೆರೆ ತಾಲೂಕಿನಲ್ಲಿ ಬೀಡುಬಿಟ್ಟಿದ್ದ 39 ಕಾಡಾನೆಗಳ ಪೈಕಿ 21 ಆನೆಗಳು ಮತ್ತೆ ಹಾಸನ ಜಿಲ್ಲೆಯ ಬೇಲೂರು ಅರಣ್ಯ ವ್ಯಾಪ್ತಿಗೆ ಮರಳಿರುವುದು ಸ್ಥಳೀಯ ರೈತರಿಗೆ ಕೊಂಚ ನೆಮ್ಮದಿ ತಂದಿದೆ.

ಹಾಸನ ಜಿಲ್ಲೆಯ ಕಾಡಾನೆಗಳನ್ನು ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಕಾಫಿನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗಾಗಲೇ ಜಿಲ್ಲೆಯ ಮೂಡಿಗೆರೆ, ಎನ್.ಆರ್.ಪುರ ಸೇರಿದಂತೆ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಬೆಳೆ ನಷ್ಟ ಹಾಗೂ ಮಾನವ-ಆನೆ ಸಂಘರ್ಷದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರು ಹಾಸನದ ಆನೆಗಳನ್ನು ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯಕ್ಕೆ ಓಡಿಸುವುದಾಗಿ ನೀಡಿದ್ದ ಹೇಳಿಕೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.

ಅರಣ್ಯ ಇಲಾಖೆ ‘ಆಪರೇಷನ್ ಗಜ’ ಹೆಸರಿನಲ್ಲಿ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದ್ದಂತೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ಮೂಡಿಗೆರೆ ಬಂದ್‌ಗೆ ಕರೆ ನೀಡಿದ್ದರು. ನೂರಾರು ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿ, ಈಗಾಗಲೇ ಆನೆಗಳ ಹಾವಳಿಯಿಂದ ನಲುಗಿರುವ ಜಿಲ್ಲೆಗೆ ಮತ್ತಷ್ಟು ಆನೆಗಳನ್ನು ಸ್ಥಳಾಂತರಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಯಿತು.

ಇನ್ನು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದರು. ಜನರ ಜೀವ ಹಾಗೂ ರೈತರ ಬೆಳೆಗಳಿಗೆ ರಕ್ಷಣೆ ನೀಡಲು ಸಾಧ್ಯವಾಗದಿದ್ದರೆ ಅಧಿಕಾರದಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದ್ದರು. ಇವರಿಗೆ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹಾಗೂ ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಕೂಡ ಬೆಂಬಲ ಸೂಚಿಸಿದ್ದರು. ಮೂವರು ಶಾಸಕರ ರಾಜೀನಾಮೆ ಎಚ್ಚರಿಕೆ ಸರ್ಕಾರಕ್ಕೆ ರಾಜಕೀಯವಾಗಿ ಮುಜುಗರ ಉಂಟುಮಾಡಿತ್ತು.

ಬೆಳೆ ನಾಶದಿಂದ ರೈತರಿಗೆ ಲಕ್ಷಾಂತರ ರೂ. ನಷ್ಟ

ಮತ್ತೊಂದೆಡೆ, ಈಗಾಗಲೇ ತಾಲೂಕಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಎರಡು ವರ್ಷಗಳ ಕಾಲ ಕಷ್ಟಪಟ್ಟು ಬೆಳೆದ ಭತ್ತದ ಗದ್ದೆಗಳು ಹಾಗೂ ಕಾಫಿ ತೋಟಗಳಿಗೆ ನುಗ್ಗಿರುವ ಗಜಪಡೆ ಬೆಳೆಗಳನ್ನು ತುಳಿದು ನಾಶಪಡಿಸಿದೆ. ಕೈಗೆ ಬಂದ ಬೆಳೆ ಕಳೆದುಕೊಂಡ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಜೀವನ ನಿರ್ವಹಣೆಯೇ ಸವಾಲಾಗಿದೆ.

ತಾಲೂಕಿನಲ್ಲಿ ಬೀಡುಬಿಟ್ಟಿದ್ದ ಒಟ್ಟು 39 ಕಾಡಾನೆಗಳ ಪೈಕಿ 21 ಆನೆಗಳು ಬೇಲೂರು ಅರಣ್ಯ ವ್ಯಾಪ್ತಿಗೆ ಮರಳಿವೆ. ಆದರೆ ಉಳಿದ ಆನೆಗಳ ಹಾವಳಿ ಇನ್ನೂ ಮುಂದುವರಿದಿದೆ. ವಿಶೇಷವಾಗಿ ಮಾಕೋನಹಳ್ಳಿ ಭಾಗದ ರೈತರು ನಿರಂತರ ಬೆಳೆ ನಷ್ಟದಿಂದ ತೀವ್ರ ಆಕ್ರೋಶಗೊಂಡಿದ್ದು, ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯಕ್ಕೆ ಸರ್ಕಾರ ಆಪರೇಷನ್ ಗಜ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಮೂಲಕ ರಾಜಕೀಯ ಬಿಕ್ಕಟ್ಟಿಗೆ ವಿರಾಮ ನೀಡಿದೆ. ಆದರೆ ಕಾಫಿನಾಡಿನಲ್ಲಿ ಈಗಾಗಲೇ ಬೀಡುಬಿಟ್ಟಿರುವ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು, ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವುದು ಹಾಗೂ ಮಾನವ-ಆನೆ ಸಂಘರ್ಷ ತಡೆಗಟ್ಟಲು ಪರಿಣಾಮಕಾರಿ ಕ್ರಮ ಕೈಗೊಳ್ಳುವುದು ಸರ್ಕಾರದ ಮುಂದಿರುವ ಪ್ರಮುಖ ಸವಾಲುಗಳಾಗಿವೆ.

21 ಆನೆಗಳು ತವರು ಅರಣ್ಯಕ್ಕೆ ಮರಳಿರುವುದು ತಾತ್ಕಾಲಿಕ ನೆಮ್ಮದಿ ನೀಡಿದೆಯಾದರೂ, ಉಳಿದ ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ಯಾವಾಗ ಎಂಬುದು ರೈತರ ಮುಂದಿರುವ ಪ್ರಶ್ನೆಯಾಗಿದೆ.

Temporary End to High Drama: 21-Member Squad Returns Home

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ಜಿಪಂನ 36 ಕ್ಷೇತ್ರಗಳಿಗೆ ಅಂತಿಮ ಮೀಸಲಾತಿ ಪ್ರಕಟ

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ 36 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ನವೆಂಬರ್ 23ರಂದು ಹೊರಡಿಸಿರುವ ಕರ್ನಾಟಕ ರಾಜಪತ್ರದ ಅಧಿಸೂಚನೆಯಲ್ಲಿ...

ಕನ್ನಡ ಸಾಹಿತ್ಯ ಪರಿಷತ್ ಘಟಕಗಳ ನಿರ್ವಹಣೆಗೆ ಆಡಳಿತಾಧಿಕಾರಿ ನೇಮಕ

ಕನ್ನಡ,ಕನ್ನಡ ಬನ್ನಿ ನಮ್ಮ ಸಂಗಡ ಎನ್ನುವ ಬದಲಿಗೆ ಕನ್ನಡ, ಕನ್ನಡ ನಮಗೆ ದೇಣಿಗೆ ನಿಮಗೆ ಬೇಕಾದ ಪ್ರಶಸ್ತಿಗಳು ಎನ್ನುವೇ ಅಂತಕ್ಕೆ ಸಾಹಿತ್ಯ ಪರಿಷತ್ ಗೆ ವಕ್ಕರಿಸಿರುವ ಕೆಲವರಿಗೆ ಊಟ,ತಿಂಡಿ,ನಿದ್ದೆ ಬರುವುದು ಕಡು...

Related Articles

ಸಚಿವರ ಸಭೆ ಬಹಿಷ್ಕರಿಸಲು ಸಿ.ಟಿ. ರವಿ ನಿರ್ಧಾರ

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿಗೆ ಆಗಮಿಸಿರುವ ಕಾಡಾನೆಗಳನ್ನು ಭದ್ರಾ...

ಅನ್ನದಾತರ “ಕಿವಿಗೆ “ಹೂವು “ಶಾಸಕಿ ನಯನ ಹೈ ಡ್ರಾಮಾ.

ಮೂಡಿಗೆರೆ :  ಇಲ್ಲಿನ ಕಾಫಿ ಬೆಳೆಗಾರರು, ರಹಿತರು, ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಂಡು ಪ್ರತಿ ವರ್ಷ...

ಆನೆ ಹಾವಳಿಗೆ ಬೇಸತ್ತ ರೈತ-ಪ್ರತಿಭಟನೆ ಸ್ಥಳದಲ್ಲೇ ವಿಷ ಸೇವಿಸಲು ಯತ್ನ

ಚಿಕ್ಕಮಗಳೂರು: ಕಾಡಾನೆಗಳ ಹಾವಳಿಯಿಂದ ತೋಟ ಹಾಗೂ ಬದುಕು ಕಳೆದುಕೊಂಡ ರೈತನೊಬ್ಬ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲೇ ವಿಷ...

ಕಾಡಾನೆಗಳ ದಾಳಿಯ ಹಾನಿಯ ಪರಿಹಾರಕ್ಕಾಗಿ ರೈತರ ಹೋರಾಟ

ಮೂಡಿಗೆರೆ: ಬೇಲೂರು ಭಾಗದಿಂದ ಭದ್ರಾ ಅಭಯಾರಣ್ಯದತ್ತ ಕಾಡಾನೆಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಮಲೆನಾಡಿನ ರೈತರನ್ನು ಸಂಕಷ್ಟಕ್ಕೆ ದೂಡಿದೆ....