ಚಿಕ್ಕಮಗಳೂರು: ಭಾರತೀಯ ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಮಹತ್ವವನ್ನು ವಿದ್ಯಾರ್ಥಿಗಳು, ಯುವಜನರು ಮತ್ತು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಭಾರತೀಯ ಬೌದ್ಧ ಮಹಾಸಭಾದ ಚಿಕ್ಕಮಗಳೂರು ಜಿಲ್ಲಾ ಶಾಖೆಯ ವತಿಯಿಂದ ನವೆಂಬರ್ 26ರಿಂದ ಜನವರಿ 26ರವರೆಗೆ ಜಿಲ್ಲೆಯಾದ್ಯಂತ 60 ದಿನಗಳ ಸಂವಿಧಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಆರ್. ತಿಳಿಸಿದರು.
ನಗರದ ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ದಿನಾಚರಣೆಯ ಅಂಗವಾಗಿ ನವೆಂಬರ್ 26ರಂದು ಬೆಳಿಗ್ಗೆ 11.30ಕ್ಕೆ ನಗರದ ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಇದೇ ಸಂದರ್ಭದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಐತಿಹಾಸಿಕ ಭಾಷಣವನ್ನು ಒಳಗೊಂಡಿರುವ ‘ನವಭಾರತದ ದಿಕ್ಕೂಚಿ’ ಪುಸ್ತಕ ಬಿಡುಗಡೆ ಹಾಗೂ ದಿವಂಗತ ಡಾ. ಸುಂದರೇಶ್ ಎಸ್. ಅವರಿಗೆ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಸಂವಿಧಾನ ಸಮರ್ಪಣೆಗೆ ಮುನ್ನ 1949ರ ನವೆಂಬರ್ 25ರಂದು ಸಂವಿಧಾನ ರಚನಾ ಸಭೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಮಾಡಿದ ಐತಿಹಾಸಿಕ ಸಮಾರೋಪ ಭಾಷಣವು ಇಂದಿಗೂ ಭಾರತೀಯ ಪ್ರಜಾಪ್ರಭುತ್ವಕ್ಕೆ ದಾರಿದೀಪವಾಗಿದೆ. ರಾಜಕೀಯ ಪ್ರಜಾಪ್ರಭುತ್ವದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವೂ ಸ್ಥಾಪನೆಯಾಗಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವದ ಅಡಿಪಾಯ ದುರ್ಬಲವಾಗುತ್ತದೆ ಎಂಬ ಅಂಬೇಡ್ಕರ್ ಅವರ ಎಚ್ಚರಿಕೆ ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದೆ ಎಂದರು.
ಈ ಐತಿಹಾಸಿಕ ಭಾಷಣದ ಮಹತ್ವ, ಸಂವಿಧಾನ ರಚನೆಯ ಹಿನ್ನೆಲೆ, ಪ್ರಜಾಪ್ರಭುತ್ವದ ಭವಿಷ್ಯ ಹಾಗೂ ಯುವಪೀಳಿಗೆಯ ಜವಾಬ್ದಾರಿಯನ್ನು ಒಳಗೊಂಡ ಸುಮಾರು 44 ಪುಟಗಳ ‘ನವಭಾರತದ ದಿಕ್ಕೂಚಿ’ ಪುಸ್ತಕವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಿದ್ಧಪಡಿಸಲಾಗಿದೆ. ವಕೀಲ ಅನಿಲ್ ಕುಮಾರ್ ಆರ್. ಅವರು ಪುಸ್ತಕವನ್ನು ಸಂಪಾದಿಸಿದ್ದು, ಸಂವಿಧಾನ ಜಾಗೃತಿಯ ಸಂಕಲ್ಪ, ನಮ್ಮ ಕನಸಿನ ಭಾರತ ಹಾಗೂ ನಮ್ಮ ಕೈಯಲ್ಲಿರುವ ನಾಳೆ ಎಂಬ ಆಶಯಗಳನ್ನು ಪುಸ್ತಕ ಒಳಗೊಂಡಿದೆ. ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ಸಂವಿಧಾನದ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
60 ದಿನಗಳ ಅಭಿಯಾನದ ಅವಧಿಯಲ್ಲಿ ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. 50 ಅಂಕಗಳ ಸಂವಿಧಾನ ಅರಿವು ಪರೀಕ್ಷೆ, ಬೀದಿ ನಾಟಕಗಳು ಹಾಗೂ ಸಾರ್ವಜನಿಕ ಸಂವಾದಗಳನ್ನು ನಡೆಸಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಸಂವಿಧಾನದ ಆಶಯಗಳ ಕುರಿತು ಜಾಗೃತಿ ಮೂಡಿಸಲಾಗುವುದು. ಸಂವಿಧಾನದ ಪ್ರಸ್ತಾವನೆ, ಮೂಲಭೂತ ಹಕ್ಕುಗಳು, ಕರ್ತವ್ಯಗಳು, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.
ತಮ್ಮ ಶೈಕ್ಷಣಿಕ ಬದುಕಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಪರಿಚಯಿಸಿ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಹಾಗೂ ಮಾರ್ಗದರ್ಶನ ನೀಡಿದ್ದ ಗುರುಗಳಾದ ದಿವಂಗತ ಡಾ. ಸುಂದರೇಶ್ ಎಸ್. ಅವರಿಗೆ ‘ನವಭಾರತದ ದಿಕ್ಕೂಚಿ’ ಪುಸ್ತಕವನ್ನು ಗೌರವಪೂರ್ವಕವಾಗಿ ಅರ್ಪಿಸಲಾಗುತ್ತಿದೆ. ನವೆಂಬರ್ 26ರಂದು ನಡೆಯುವ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಸೇರಿದಂತೆ ಡಾ. ಸುಂದರೇಶ್ ಅವರ ಕುಟುಂಬಸ್ಥರು, ಶಿಷ್ಯಂದಿರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಅಭಿಯಾನ ಯಾವುದೇ ರಾಜಕೀಯ ಪಕ್ಷದ ಪರವಾದ ಕಾರ್ಯಕ್ರಮವಲ್ಲ. ಸಂವಿಧಾನಾತ್ಮಕ ಮೌಲ್ಯಗಳನ್ನು ಜನಜೀವನದಲ್ಲಿ ಬೇರೂರಿಸುವ ಜನಪರ ಪ್ರಯತ್ನವಾಗಿದೆ. ಪಕ್ಷಕ್ಕಿಂತ ದೇಶ ಮುಖ್ಯ, ವ್ಯಕ್ತಿಗಿಂತ ಸಂವಿಧಾನದ ಆಶಯಗಳು ಮುಖ್ಯ ಎಂಬ ನಿಲುವಿನೊಂದಿಗೆ ಸಂವಿಧಾನವನ್ನು ಓದೋಣ, ಪ್ರಜಾಪ್ರಭುತ್ವವನ್ನು ಅರಿಯೋಣ ಹಾಗೂ ಸಮಾನತೆಯ ಭಾರತವನ್ನು ನಿರ್ಮಿಸೋಣ ಎಂಬ ಸಂದೇಶವನ್ನು ಜನರಿಗೆ ತಲುಪಿಸಲಾಗುವುದು ಎಂದರು.
ಅಭಿಯಾನಕ್ಕೆ ಜಿಲ್ಲಾಡಳಿತ, ವಿದ್ಯಾರ್ಥಿಗಳು, ಶಿಕ್ಷಕರು, ಸರ್ಕಾರಿ ನೌಕರರು, ಯುವಜನರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಕಾಶ್, ರಮೇಶ್, ದಿಲೀಪ್, ರವಿ ಹಾಗೂ ಹುಣಸಮಕ್ಕಿ ಲಕ್ಷ್ಮಣ್ ಉಪಸ್ಥಿತರಿದ್ದರು.
60-day Constitution Awareness Campaign across the district starting November 26
Leave a comment