ಚಿಕ್ಕಮಗಳೂರು: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಪ್ರಯಾಣಿಕರ ನೂಕುನುಗ್ಗಲಿನ ಸಂದರ್ಭ ಮಹಿಳೆಯೊಬ್ಬರ ಗಮನ ಬೇರೆಡೆ ಸೆಳೆದು ಸುಮಾರು 5.14 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರ ಕಳವು ಮಾಡಿರುವ ಘಟನೆ ನಡೆದಿದೆ.
ನಗರದ ಮೂಕ್ತಿಹಳ್ಳಿ ಸಮೀಪದ ಶಿರುಗುಂದ ಗ್ರಾಮದ ನಿವಾಸಿ ಅಶ್ವಿನಿ ಎಂಬುವರು ಕಳ್ಳತನಕ್ಕೊಳಗಾದವರು. ಅವರು ಆಗಸ್ಟ್ 29ರಂದು ತಮ್ಮ ತಾಯಿ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ನಲ್ಲಿರುವ ನಾದಿನಿಯ ಮನೆಗೆ ಶ್ರಾವಣ ಪೂಜೆಗೆಂದು ಬಂದಿದ್ದರು.
ಪೂಜೆ ಹಾಗೂ ಊಟ ಮುಗಿಸಿದ ಬಳಿಕ ಪತಿ ಮತ್ತು ಮಗುವಿನೊಂದಿಗೆ ರಿಟ್ಜ್ ಕಾರಿನಲ್ಲಿ ಆಲ್ದೂರಿಗೆ ವಾಪಸ್ ತೆರಳಲು ಹೊರಟಿದ್ದರು. ಪತಿಗೆ ತುರ್ತು ಕರ್ತವ್ಯದ ನಿಮಿತ್ತ ಕಚೇರಿಗೆ ತೆರಳಬೇಕಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಅಶ್ವಿನಿ ಮತ್ತು ಮಗುವನ್ನು ಬಿಟ್ಟು ತೆರಳಿದ್ದರು.
ಆಲ್ದೂರಿಗೆ ತೆರಳುವ ನೇರ ಬಸ್ಗಾಗಿ ಕಾಯುತ್ತಿದ್ದ ವೇಳೆ ಸುಮಾರು ಸಂಜೆ 4.30ಕ್ಕೆ ಶೃಂಗೇರಿ ಮಾರ್ಗವಾಗಿ ಬಂದ ಕೆಎ-18-ಎಫ್-1005 ಸಂಖ್ಯೆಯ ಬಸ್ ನಿಲ್ದಾಣಕ್ಕೆ ಬಂದಿದೆ. ಬಸ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದ ಹಿನ್ನೆಲೆಯಲ್ಲಿ ಬಸ್ ಹತ್ತುವಾಗ ಭಾರಿ ನೂಕುನುಗ್ಗಲು ಉಂಟಾಗಿದೆ. ಇದೇ ವೇಳೆ ಯಾರೋ ಕಳ್ಳರು ತನ್ನ ಅರಿವಿಗೆ ಬಾರದಂತೆ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಳವು ಮಾಡಿದ್ದಾರೆ ಎಂದು ಅಶ್ವಿನಿ ದೂರಿನಲ್ಲಿ ತಿಳಿಸಿದ್ದಾರೆ.
ಆಲ್ದೂರಿನಲ್ಲಿ ಮನೆಗೆ ತೆರಳಿ ವಿಶ್ರಾಂತಿ ಪಡೆದ ಬಳಿಕ ಮಾಂಗಲ್ಯ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಎಲ್ಲೆಡೆ ಹುಡುಕಾಡಿದರೂ ಸರ ಪತ್ತೆಯಾಗಿಲ್ಲ. ನಂತರ ಆಗಸ್ಟ್ 30ರಂದು ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ತಾವು ಓಡಾಡಿದ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೂ ಸರದ ಸುಳಿವು ದೊರೆತಿಲ್ಲ.
ಕಳುವಾಗಿರುವ ಮಾಂಗಲ್ಯ ಸರ ಹಾಗೂ ಚಿನ್ನದ ಆಭರಣಗಳ ಒಟ್ಟು ತೂಕ 33 ಗ್ರಾಂ ಇದ್ದು, ಅಂದಾಜು ₹5.14 ಲಕ್ಷ ಮೌಲ್ಯ ಹೊಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಅಶ್ವಿನಿ ಅವರು ಆಗಸ್ಟ್ 31ರಂದು ಸಂಜೆ 5.30ಕ್ಕೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಥಮ ವರದಿ ದಾಖಲಿಸಿಕೊಂಡು ಕಳ್ಳತನವಾಗಿರುವ ಚಿನ್ನಾಭರಣ ಹಾಗೂ ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
Mangalya necklace worth Rs. 5.14 lakh stolen
Leave a comment