ಅಜ್ಜಂಪುರ: ಯಾವುದೇ ಪರವಾನಗಿ ಅಥವಾ ದಾಖಲೆಗಳಿಲ್ಲದೆ ಪಡಿತರ ಅಕ್ಕಿಯನ್ನು ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಅಜ್ಜಂಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಗಸ್ಟ್ 31ರಂದು ಅಜ್ಜಂಪುರ ಪಟ್ಟಣದ ಮಸೀದಿ ರಸ್ತೆಯ ಮುಂಭಾಗ ಗೀತಾ ರಸ್ತೆ–ಟಿಬಿ ರಸ್ತೆ ಸೇರುವ ಸ್ಥಳದಲ್ಲಿ ಕೆಎ-50-ಎ-5037 ನೋಂದಣಿಯ ಟಾಟಾ ಕ್ಸೀನಾನ್ ಪಿಕಪ್ ವಾಹನದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಅಧಿಕಾರಿಗಳಿಗೆ ದೊರೆತಿತ್ತು.
ಮಾಹಿತಿ ಆಧರಿಸಿ ತಹಶೀಲ್ದಾರ್ ಅವರ ನಿರ್ದೇಶನದಂತೆ ಆಹಾರ ಶಾಖೆಯ ಅಧಿಕಾರಿ ಹಾಗೂ ಅಜ್ಜಂಪುರ ಠಾಣೆ ಪಿಎಸ್‌ಐ ಗಜೇಂದ್ರ ಎಂ. ನೇತೃತ್ವದ ತಂಡ ಪಂಚರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಈ ವೇಳೆ ವಾಹನದಲ್ಲಿ ಸುಮಾರು 50 ಕೆ.ಜಿ. ತೂಕದ 85 ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ಕಿ ತುಂಬಿರುವುದು ಪತ್ತೆಯಾಗಿದೆ.
ಅಕ್ಕಿಯ ದಾಸ್ತಾನಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದಾಗ ಚಾಲಕ ಯಾವುದೇ ದಾಖಲೆಗಳನ್ನು ಹಾಜರುಪಡಿಸಿಲ್ಲ. ಚೀಲಗಳಲ್ಲಿದ್ದ ಅಕ್ಕಿಯನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಸಾರ್ವಜನಿಕ ವಿತರಣಾ ಪದ್ಧತಿ (ಪಿಡಿಎಸ್) ಅಡಿ ವಿತರಿಸುವ ಪಡಿತರ ಅಕ್ಕಿಯಂತೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಚರ ಸಮ್ಮುಖದಲ್ಲಿ ಅಕ್ಕಿಯ ಮಾದರಿಯನ್ನು ಸಂಗ್ರಹಿಸಿ ಸೀಲ್ ಮಾಡಲಾಗಿದ್ದು, ವಾಹನ ಸಹಿತ ಅಕ್ಕಿಯ ದಾಸ್ತಾನನ್ನು ವಶಕ್ಕೆ ಪಡೆಯಲಾಗಿದೆ. ಅಜ್ಜಂಪುರ ವೇಬ್ರಿಡ್ಜ್‌ನಲ್ಲಿ ವಾಹನ ಸೇರಿದಂತೆ ಒಟ್ಟು ತೂಕ 6,740 ಕೆ.ಜಿ. ಎಂದು ದಾಖಲಾಗಿದೆ.
ವಾಹನ ಚಾಲಕನನ್ನು ನುಗ್ಗೆಹಳ್ಳಿ ಗ್ರಾಮದ ಎಸ್.ಎ. ರಬ್ಬಿ (43) ಎಂದು ಗುರುತಿಸಲಾಗಿದೆ. ಯಾವುದೇ ಪರವಾನಗಿ ಇಲ್ಲದೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಈ ಸಂಬಂಧ ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7ರ ಅಡಿ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಮೊ.ನಂ. 228/2026ರಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Illegal transportation of 85 bags of ration rice detected in Ajjampura
Leave a comment