ಚಿಕ್ಕಮಗಳೂರು: ನಿಮ್ಮ ಆರೋಗ್ಯವನ್ನು ಪಣಕ್ಕಿಟ್ಟು ನಗರವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರ ಕಷ್ಟ-ಸುಖಗಳನ್ನು ನಾನು ಹತ್ತಿರದಿಂದ ಬಲ್ಲೆ. ನಿಮ್ಮ ಕುಟುಂಬಗಳ ನೆಮ್ಮದಿಗಾಗಿ ಜಾರಿಗೆ ತಂದಿರುವ ಈ ಆರೋಗ್ಯ ವಿಮೆ ಯೋಜನೆಯನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳಿ ಅಶೋಕ ಸಾಲಪ್ಪ ಕರೆ ನೀಡಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ನೇರ ಪಾವತಿ ಪೌರಕಾರ್ಮಿಕರ ವಿಶೇಷ ಆರೋಗ್ಯ ತಪಾಸಣಾ ಶಿಬಿರ, ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಆರೋಗ್ಯ ವಿಮೆ ಕಾರ್ಡ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಪೌರಕಾರ್ಮಿಕರ ಕಾಲೋನಿಯಲ್ಲೇ ಹುಟ್ಟಿ ಬೆಳೆದವನು. ನನ್ನ ತಾಯಿ ಬೆಂಗಳೂರು ಮಹಾ ನಗರಪಾಲಿಕೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು. ನನ್ನ ತಂದೆ ಎಂ.ಎಲ್.ಎ ಆಗಿದ್ದ ಕಾಲದಲ್ಲೂ ನನ್ನ ತಾಯಿ ಕಸ ಗುಡಿಸುವ ಕೆಲಸವನ್ನು ನಿಲ್ಲಿಸಿರಲಿಲ್ಲ. ಇಂತಹ ಪರಿಸರದಿಂದ ಬಂದ ನನಗೆ ನಿಮ್ಮ ನೋವು, ಕಷ್ಟಗಳು ಚೆನ್ನಾಗಿ ಗೊತ್ತು ಎಂದರು.
ಪೌರಕಾರ್ಮಿಕರು ನಿವೃತ್ತಿಯ ವಯಸ್ಸಿಗೆ ಬಂದಾಗ ಹತ್ತಾರು ಕಾಯಿಲೆಗಳಿಗೆ ತುತ್ತಾಗುತ್ತಾರೆ. ನಿವೃತ್ತಿಯ ನಂತರ ಸಿಗುವ ಗ್ರಾಚ್ಯುಯಿಟಿ, ಪೆನ್ಷನ್ ಹಣವೆಲ್ಲಾ ಆಸ್ಪತ್ರೆಯ ಬಿಲ್ ಪಾವತಿಸಲೇ ಮುಗಿದುಹೋಗುತ್ತದೆ. ಇದನ್ನು ತಪ್ಪಿಸಲು ನಾವು ೫ ಲಕ್ಷ ಮೌಲ್ಯದ ವಿಶೇಷ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಇದು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇದ್ದಂತೆಯೇ ಸರಿ. ತುರ್ತು ಸಂದರ್ಭದಲ್ಲಿ ಯಾರ ಮುಂದೆಯೂ ಕೈಚಾಚದೆ, ಧೈರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು ಎಂದು ಯೋಜನೆಯ ಮಹತ್ವವನ್ನು ವಿವರಿಸಿದರು.
ಯೋಜನೆಯ ಹಿಂದಿನ ಸವಾಲುಗಳನ್ನು ಹಂಚಿಕೊಂಡ ಅಧ್ಯಕ್ಷರು, ಪೌರಕಾರ್ಮಿಕರು ಪ್ರತಿದಿನ ಕಸ, ಕೊಳಚೆಗಳ ನಡುವೆ ಕೆಲಸ ಮಾಡುವುದರಿಂದ ಅವರಿಗೆ ಕಾಯಿಲೆ ಬರುವ ಸಾಧ್ಯತೆ ಹೆಚ್ಚು. ಹೀಗಾಗಿ ನಮಗೆ ಕ್ಲೈಮ್ (ನಷ್ಟ ಪರಿಹಾರ) ನೀಡಲು ಹೆಚ್ಚು ಖರ್ಚಾಗುತ್ತದೆ ಎಂದು ಹೆದರಿ ಯಾವುದೇ ವಿಮಾ ಕಂಪನಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಮುಂದೆ ಬರುತ್ತಿರಲಿಲ್ಲ. ಒಂದು ಮತ್ತು ಎರಡನೇ ಬಾರಿ ಟೆಂಡರ್ ಕರೆದಾಗಲೂ ಯಾರೂ ಬರಲಿಲ್ಲ. ಕೊನೆಗೆ ನಾವೇ ವಿಶೇಷ ಆಸಕ್ತಿ ವಹಿಸಿ, ಸರ್ಕಾರಿ ವಿಮಾ ಕಂಪನಿಗಳೊಂದಿಗೆ ಮಾತನಾಡಿ ಈ ಯೋಜನೆಯನ್ನು ಯಶಸ್ವಿಯಾಗಿ ಸಾಕಾರಗೊಳಿಸಿದ್ದೇವೆ. ಸದ್ಯ ಇಡೀ ರಾಜ್ಯದಲ್ಲಿ ಪ್ರಥಮ ಹಂತವಾಗಿ ೫,೭೪೪ ಪೌರಕಾರ್ಮಿಕರಿಗೆ ಈ ವಿಮಾ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಪೌರಕಾರ್ಮಿಕರು ಮತ್ತು ಸಫಾಯಿ ಕರ್ಮಚಾರಿಗಳ ಮಕ್ಕಳು ಕೇವಲ ಕಸ ಗುಡಿಸಲು ಅಥವಾ ಶೌಚಾಲಯ ಸ್ವಚ್ಛಗೊಳಿಸಲು ಸೀಮಿತವಾಗಬಾರದು. ಅವರು ಅತ್ಯುನ್ನತ ಶಿಕ್ಷಣ ಪಡೆದು ರಾಜಕೀಯ ರಂಗ ಪ್ರವೇಶಿಸಬೇಕು ಮತ್ತು ತಮಗಾಗಿ ತಾವೇ ಶಾಸನ ರೂಪಿಸುವ ಅಧಿಕಾರ ಹಿಡಿಯಬೇಕು ಎಂದು ಹೇಳಿದರು.
ಯಾವಾಗ ನಿಮ್ಮ ಕೈಗೆ ಅಧಿಕಾರ ಸಿಗುತ್ತದೆಯೋ, ಆಗ ಮಾತ್ರ ನಿಮ್ಮ ಸಮಾಜದ ಉದ್ಧಾರಕ್ಕೆ ಬೇಕಾದ ಶಾಸನಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಆದ್ದರಿಂದ ನಿಮ್ಮ ಮಕ್ಕಳನ್ನು ಬರೀ ಇಂಜಿನಿಯರ್, ಡಾಕ್ಟರ್ ಮಾಡುವುದಷ್ಟೇ ಅಲ್ಲ, ಅವರಲ್ಲಿ ರಾಜಕೀಯ ಪ್ರಜ್ಞೆಯನ್ನು ಮೂಡಿಸಿ ಚುನಾವಣಾ ರಾಜಕೀಯಕ್ಕೆ ತರಬೇಕು. ಹಣವಿಲ್ಲದಿದ್ದರೂ ಪರವಾಗಿಲ್ಲ, ಮನೆಮನೆಗೆ ಹೋಗಿ ಮತ ಕೇಳಿ ಗೆದ್ದು ಬರಬೇಕು ಎಂದು ಪೌರಕಾರ್ಮಿಕ ಪೋಷಕರಲ್ಲಿ ಮನವಿ ಮಾಡಿದರು.
ನಿಮ್ಮ ಕುಟುಂಬಗಳು ಶಾಶ್ವತವಾಗಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಎಂಟು-ಒಂಬತ್ತು ಬೃಹತ್ ಕಲ್ಯಾಣ ಯೋಜನೆಗಳನ್ನು ನಿಗಮದಿಂದ ಸಿದ್ಧಪಡಿಸಿದ್ದೇವೆ. ಈ ನೂತನ ಯೋಜನೆಗಳಿಗೆ ಅನುಮೋದನೆ ಪಡೆದುಕೊಳ್ಳುವ ನಿಟ್ಟಿನಲ್ಲಿ ನಾಳೆ ಗುರುವಾರ ಮಧ್ಯಾಹ್ನ ೩ ಗಂಟೆಗೆ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಹತ್ವದ ಸಭೆ ಆಯೋಜಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮ್ಯಾನುವಲ್ ಸ್ಕ್ಯಾವೆಂಜರ್‍ಗಳ ಸ್ಥಿತಿಗತಿ ಅತ್ಯಂತ ಶೋಚನೀಯವಾಗಿದ್ದು, ಈ ಬಗ್ಗೆ ನ್ಯಾಷನಲ್ ಲಾ ಸ್ಕೂಲ್ ನಡೆಸಿದ ಸಮೀಕ್ಷೆಯನ್ವಯ ರಾಜ್ಯದಲ್ಲಿ ಸುಮಾರು ೫,೫೦೦ ಮ್ಯಾನುವಲ್ ಸ್ಕ್ಯಾವೆಂಜರ್‍ಗಳನ್ನು ಗುರುತಿಸಲಾಗಿದೆ. ಇವರ ಬದುಕು ಹಸನು ಮಾಡಲು ಮತ್ತು ಸೂಕ್ತ ಪುನರ್ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಖಾಯಂ ಪ್ರಕ್ರಿಯೆ ಮತ್ತು ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಿಗೆ ವಿಮೆ: ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಈಗಾಗಲೇ ರಾಜ್ಯದಲ್ಲಿ ೨೦,೦೦೦ ಪೌರಕಾರ್ಮಿಕರನ್ನು ಕಾಯಂ ಮಾಡಲಾಗಿದೆ. ಇನ್ನುಳಿದ ೫,೦೦೦ ಜನರನ್ನು ಶೀಘ್ರದಲ್ಲೇ ಕಾಯಂ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದೇನೆ. ಮ್ಯಾನುಯಲ್ ಸ್ಕ್ಯಾವೆಂಜರ್ಸ್ಗಳಿಗೂ ಕೂಡ ಆರೋಗ್ಯ ವಿಮೆ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ಅವರೆಲ್ಲರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.
ಆರೋಗ್ಯವೇ ಮಹಾಭಾಗ್ಯ. ನೀವು ಆರೋಗ್ಯವಾಗಿದ್ದರೆ ಮಾತ್ರ ನಿಮ್ಮ ಮಕ್ಕಳನ್ನು ಉನ್ನತ ಮಟ್ಟಕ್ಕೆ ಬೆಳೆಸಲು ಸಾಧ್ಯ. ಆದ್ದರಿಂದ ಕುಡಿತ ಸೇರಿದಂತೆ ಇತರ ಕೆಟ್ಟ ಚಟಗಳಿಂದ ದಯವಿಟ್ಟು ದೂರವಿರಿ. ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂಬುದನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್ ಮಾತನಾಡಿ, ಪೌರಕಾರ್ಮಿಕರ ಆರೋಗ್ಯ ರಕ್ಷಣೆ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಹಾಗೂ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅರ್ಹರು ಇದರ ಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪೌರಕಾರ್ಮಿಕರ ಆರೋಗ್ಯವೇ ನಮ್ಮ ಮೊದಲ ಆದ್ಯತೆಯಾಗಿದೆ. ಇಂದು ವಿತರಣೆ ಮಾಡಲಾಗಿರುವ ಆರೋಗ್ಯ ವಿಮೆ ಕಾರ್ಡ್ಗಳು ಒಂದು ವರ್ಷದ ಅವಧಿಗೆ ಚಾಲ್ತಿಯಲ್ಲಿರಲಿದ್ದು, ಪೌರಕಾರ್ಮಿಕರು ಹಾಗೂ ಅವರ ಕುಟುಂಬದವರು ಇದರ ಮೂಲಕ ಅಗತ್ಯ ಆರೋಗ್ಯ ತಪಾಸಣೆ ಹಾಗೂ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ವಿಮಾ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿದ್ದರೆ ಸ್ಥಳೀಯ ಪೌರಾಯುಕ್ತರು, ಯೋಜನಾ ನಿರ್ದೇಶಕರು, ಜಿಲ್ಲಾ ವ್ಯವಸ್ಥಾಪಕರು ಅಥವಾ ನಿಗಮದ ಅಧಿಕಾರಿಗಳ ತಂಡವನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದರು.
ಪೌರಕಾರ್ಮಿಕರು ಹಾಗೂ ಅವರ ಅವಲಂಬಿತರ ಸ್ವಾವಲಂಬಿ ಜೀವನಕ್ಕಾಗಿ ನಿಗಮದಲ್ಲಿ ಹಲವು ಯೋಜನೆಗಳಿವೆ. ಆಸಕ್ತರು ಸ್ವತಂತ್ರವಾಗಿ ಉದ್ಯೋಗ ಕೈಗೊಳ್ಳಲು ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಬ್ಯಾಂಕ್ಗಳ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನ ಒದಗಿಸುವ ಯೋಜನೆ ಹಾಗೂ ಮಹಿಳೆಯರು ಒಗ್ಗೂಡಿ ಕಟ್ಟಿಕೊಂಡಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಬಲ ತುಂಬುವ ಯೋಜನೆಗಳು ಚಾಲ್ತಿಯಲ್ಲಿವೆ. ಪೌರಕಾರ್ಮಿಕ ವೃತ್ತಿಯಿಂದ ಹೊರಬಂದು ಪರ್ಯಾಯ ಉದ್ಯೋಗ ಮಾಡಲು ಇಚ್ಛಿಸುವವರಿಗೆ ಸರಕು ಸಾಗಣೆ ವಾಹನ ಮತ್ತು ಪ್ರಯಾಣಿಕರ ವಾಹನ ಖರೀದಿಸಲು ಧನಸಹಾಯ ನೀಡಲು ನಿಗಮದಲ್ಲಿ ಅವಕಾಶವಿದೆ ಎಂದು ತಿಳಿಸಿದರು.
೨೦೨೬-೨೭ನೇ ಸಾಲಿನ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಮುಂದಿನ ತಿಂಗಳು ಅರ್ಜಿ ಆಹ್ವಾನಿಸಲಾಗುವುದು. ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯಲ್ಲಿ ‘ಸೇವಾ ಸಿಂಧು’ ತಂತ್ರಾಂಶದ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಪಾರದರ್ಶಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಿದ್ದು, ಆಯ್ಕೆಯಾದ ಫಲಾನುಭವಿಗಳಿಗೆ ಡಿಬಿಟಿ ಮೂಲಕ ನೇರವಾಗಿ ಸೌಲಭ್ಯ ತಲುಪಿಸಲಾಗುವುದು ಎಂದರು.
ಯೋಜನೆಗಳ ಮಾಹಿತಿ ಇಲ್ಲವೇ ಅರ್ಜಿ ಸಲ್ಲಿಸುವಲ್ಲಿ ಸಮಸ್ಯೆ ಎದುರಾದಲ್ಲಿ ಪೌರಾಯುಕ್ತರು, ಕಂದಾಯ ನಿರೀಕ್ಷಕರು ಮತ್ತು ಆರೋಗ್ಯ ನಿರೀಕ್ಷಕರನ್ನು ಸಂಪರ್ಕಿಸಿದರೆ ಅವರು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದು ಮಂಜುನಾಥ್ ತಿಳಿಸಿದರು. ನಗರಸಭೆಯ ಪೌರಾಯುಕ್ತ ಬಿ.ಸಿ.ಬಸವರಾಜು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಗಮದ ನಿಕಟಪೂರ್ವ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪೌರ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಭವ್ಯ ಮಂಜುನಾಥ್, ಉಪಾಧ್ಯಕ್ಷೆ ಲಲಿತ ರವಿನಾಯ್ಕ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗೋಪಾಲ್ ಜಾಧವ್ ಉಪಸ್ಥಿತರಿದ್ದರು.
Government committed to health security of civil servants
Leave a comment