ಚಿಕ್ಕಮಗಳೂರು: ರೈಲ್ವೆ ಕಾಮಗಾರಿಗಾಗಿ ರೈತರ ಜಮೀನು ಹಾಗೂ ವಾಸದ ಮನೆಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಪರಿಹಾರ ನೀಡುವವರೆಗೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮುಖಂಡ ಗುರುಶಾಂತಪ್ಪ ಮಾತನಾಡಿ, ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಹೋಬಳಿಯ ಗಂಜಲಗೋಡು ಗ್ರಾಮದ ಸರ್ಕಾರಿ ಜಾಗದ ಸರ್ವೆ ನಂ. 8 ಮತ್ತು 9ರಲ್ಲಿ ಹಲವು ರೈತರು 1980ರಿಂದಲೂ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. 1991-92ರಲ್ಲಿ ಫಾರಂ ನಂ. 50-52 ಹಾಗೂ 53ರ ಅಡಿಯಲ್ಲಿ ಜಮೀನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. 1994-95ರಲ್ಲಿ ಸರ್ಕಾರದಿಂದ ಸರ್ವೆ ನಡೆಸಿ ಕೃಷಿ ಮಾಡುತ್ತಿದ್ದ ಜಮೀನನ್ನು ಅನಧಿಕೃತ ಸಾಗುವಳಿ ಸಮಿತಿ ಮಂಜೂರು ಮಾಡಿತ್ತು ಎಂದು ತಿಳಿಸಿದರು.
ಆದರೆ ಇದುವರೆಗೂ ಹಲವು ರೈತರ ಹೆಸರಿಗೆ ಪಹಣಿ ಹಾಗೂ ಖಾತೆ ದಾಖಲಾಗಿಲ್ಲ. 2004-05ರಲ್ಲಿ ಚಿಕ್ಕಮಗಳೂರು–ಸಕಲೇಶಪುರ ರೈಲ್ವೆ ಕಾಮಗಾರಿಗಾಗಿ ಜಮೀನು ಸರ್ವೆ ನಡೆಸಿ, ರೈತರು ಕೃಷಿ ಮಾಡುತ್ತಿದ್ದ ಜಮೀನನ್ನು ಕಾಮಗಾರಿ ವ್ಯಾಪ್ತಿಗೆ ಸೇರಿಸಲಾಗಿದೆ. ರೈತರ ಹೆಸರುಗಳನ್ನು ದಾಖಲಿಸಿಕೊಂಡಿದ್ದರೂ, ಜಮೀನು ಬಳಸಿಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುತ್ತಿಲ್ಲ ಎಂದು ಆರೋಪಿಸಿದರು.
ಅದೇ ರೀತಿ 1995-96ರಲ್ಲಿ ಸರ್ವೆ ನಂ. 8ರಲ್ಲಿ ದಿವಂಗತ ತಮ್ಮಣ್ಣಗೌಡ ಬಿನ್ ದಿವಂಗತ ಲಕ್ಷ್ಮಣಗೌಡ ಹಾಗೂ ಕೆಂಚೇಗೌಡ ಬಿನ್ ದಿವಂಗತ ಕೃಷ್ಣಗೌಡ ಅವರು ನಿರ್ಮಿಸಿಕೊಂಡಿದ್ದ ವಾಸದ ಮನೆಗಳೂ ರೈಲ್ವೆ ಕಾಮಗಾರಿ ವ್ಯಾಪ್ತಿಗೆ ಒಳಪಡುತ್ತಿವೆ. ಮನೆಗಳನ್ನು ಕಳೆದುಕೊಳ್ಳುವ ಕುಟುಂಬಗಳಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕೆಲವು ರೈತರು 1991-92ರಲ್ಲಿ ಫಾರಂ ನಂ. 50-52 ಹಾಗೂ 53ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, 2017ರಲ್ಲಿ ಅವರ ಹೆಸರಿನಲ್ಲಿ ಪಹಣಿ ದಾಖಲಿಸಿ ಖಾತೆ ಮಾಡಿಕೊಡಲಾಗಿದೆ. ಆದರೆ ಇದೇ ರೀತಿಯ ಪರಿಸ್ಥಿತಿಯಲ್ಲಿರುವ ಅಸಹಾಯಕ ರೈತರಿಗೆ ಅನ್ಯಾಯವಾಗಿದೆ. ಅಧಿಕಾರಿಗಳು ಮಾಡಿದ ತಪ್ಪಿಗೆ ರೈತರು ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗುರುಶಾಂತಪ್ಪ ಹೇಳಿದರು.
ಜಮೀನು ಕಳೆದುಕೊಂಡಿರುವ ಎಲ್ಲ ರೈತರನ್ನು ಪರಿಹಾರದ ವ್ಯಾಪ್ತಿಗೆ ಸೇರಿಸಿ, ರೈಲ್ವೆ ಕಾಮಗಾರಿಗೆ ಬಳಸಿಕೊಂಡಿರುವ ಜಮೀನು ಹಾಗೂ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ಈ ವಿಚಾರದಲ್ಲಿ ಚಿಕ್ಕಮಗಳೂರು ಮತ್ತು ಮೂಡಿಗೆರೆ ಕ್ಷೇತ್ರದ ಜನಪ್ರತಿನಿಧಿಗಳು ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.
ಪರಿಹಾರ ವಿಳಂಬವಾದರೆ ತಾಲ್ಲೂಕು ಕಚೇರಿಯಲ್ಲಿ ಪ್ರತಿಭಟನೆ
ಸಂತ್ರಸ್ತ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದರೆ ರೈತ ಸಂಘದ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗುರುಶಾಂತಪ್ಪ ಎಚ್ಚರಿಸಿದರು. ಪರಿಹಾರ ನೀಡುವವರೆಗೆ ರೈಲ್ವೆ ಕಾಮಗಾರಿಯನ್ನು ಮುಂದುವರಿಸಬಾರದು. ರೈತರ ಹಕ್ಕು ಹಾಗೂ ನ್ಯಾಯಸಮ್ಮತ ಪರಿಹಾರಕ್ಕಾಗಿ ಸಂಘ ಹೋರಾಟ ನಡೆಸಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ, ವಸಂತೇಗೌಡ, ಸುನೀಲ್ ಕುಮಾರ್, ಶಿವಣ್ಣ, ರಾದಮ್ಮ ಹಾಗೂ ಪರ್ವತೇಗೌಡ ಉಪಸ್ಥಿತರಿದ್ದರು.
Farmers’ association demands compensation for use of land for railway work
Leave a comment