ಎನ್.ಆರ್.ಪುರ: ಭದ್ರಾ ಅಭಯಾರಣ್ಯಕ್ಕೆ ಹಾಸನ ಜಿಲ್ಲೆಯ ಕಾಡಾನೆಗಳನ್ನು ಸ್ಥಳಾಂತರಿಸುವ ವಿಚಾರವಾಗಿ ಚರ್ಚೆ, ಆತಂಕ ಮತ್ತು ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ, ಕಾಡಾನೆ ದಾಳಿಗೆ ಮತ್ತೊಬ್ಬ ರೈತ ಬಲಿಯಾಗಿದ್ದಾನೆ.
ತಾಲೂಕಿನ ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆನ್ನಂಗಿ ಗ್ರಾಮದ ರೈತ ಕೃಷ್ಣಮೂರ್ತಿ (54) ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಬುಧವಾರ ಸಂಜೆ ಸುಮಾರು 5 ಗಂಟೆಗೆ ಮೇಯಲು ಬಿಟ್ಟಿದ್ದ ಮನೆಯ ಹಸುಗಳನ್ನು ಹುಡುಕಿಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ಎದುರಾದ ಕಾಡಾನೆಯೊಂದು ದಾಳಿ ನಡೆಸಿದೆ.
ದಾಳಿಯ ತೀವ್ರತೆಗೆ ಕೃಷ್ಣಮೂರ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರೈತ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
ದಾಳಿಗೆ ರೈತ ಶವವಿಟ್ಟು ಪ್ರತಿಭಟನೆ: ಭದ್ರಾ ಅಭಯಾರಣ್ಯಕ್ಕೆ ಹಾಸನ ಜಿಲ್ಲೆಯ ಕಾಡಾನೆಗಳನ್ನು ಸ್ಥಳಾಂತರಿಸುವ ವಿಚಾರವಾಗಿ ಆತಂಕ ಮತ್ತು ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ತಾಲೂಕಿನ ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆನ್ನಂಗಿಯಲ್ಲಿ ಕಾಡಾನೆ ದಾಳಿಗೆ ರೈತ ಕೃಷ್ಣಮೂರ್ತಿ ಮೃತಪಟ್ಟಿರುವ ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಮೃತ ಕೃಷ್ಣಮೂರ್ತಿ ಅವರ ಶವವನ್ನು ಆಂಬುಲೆನ್ಸ್‌ನಲ್ಲಿ ಇರಿಸಿ ಎನ್.ಆರ್.ಪುರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ಮುಂದಾದಾಗ ಸ್ಥಳಕ್ಕೆ ಜಮಾಯಿಸಿದ ಸ್ಥಳೀಯರು ಹಾಗೂ ರೈತಪರ ಸಂಘಟನೆಗಳ ಕಾರ್ಯಕರ್ತರು ಅರಣ್ಯ ಇಲಾಖೆ ಮತ್ತು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮೂಡುಬಾಗಿಲು ಸಮೀಪ ಆಂಬುಲೆನ್ಸ್ ಹಾಗೂ ಅರಣ್ಯ ಇಲಾಖೆಯ ವಾಹನವನ್ನು ತಡೆದ ಪ್ರತಿಭಟನಾಕಾರರು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ನಡುವೆ ಗಂಟೆಗಟ್ಟಲೆ ಮಾತಿನ ಚಕಮಕಿ ನಡೆಯಿತು.
ನಂತರ ಮೃತದೇಹವನ್ನು ಹದಿನಾಲ್ಕನೇ ಮೈಲಿಕಲ್ಲು ಬಳಿ ಹಿಂದಕ್ಕೆ ಕೊಂಡೊಯ್ಯಲಾಯಿತು. ಬಿಜೆಪಿ ಕಾರ್ಯಕರ್ತರು ಹಾಗೂ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ ಆಗಮಿಸುತ್ತಿದ್ದಂತೆ ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದ ಅವರು, ರೈಲ್ವೆ ಬ್ಯಾರಿಕೇಡ್ ಎಲ್ಲಿ ನಿರ್ಮಿಸಿದ್ದೀರಿ? ಆನೆಗಳ ಹಾವಳಿ ತಡೆಯಲು ಕೈಗೊಂಡಿರುವ ಕ್ರಮಗಳೇನು? ಎಂದು ಶಾಸಕರನ್ನು ಪ್ರಶ್ನಿಸಿದರು.
ಕಾಡಾನೆ ದಾಳಿಯಿಂದ ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದರೂ ಸರ್ಕಾರ ಮತ್ತು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಯನ್ನು ಖಂಡಿಸಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಗುರುವಾರ ಎನ್.ಆರ್.ಪುರ ಬಂದ್‌ಗೆ ಕರೆ ನೀಡಿದ್ದು, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದೆ.
ರೈಲ್ವೆ ಬ್ಯಾರಿಕೇಡ್: ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಜೀವರಾಜ್, ಕಾಡಾನೆಗಳ ಹಾವಳಿ ತಡೆಗಟ್ಟಲು ಭದ್ರಾ ನದಿ ದಾಟಿ ಆನೆಗಳು ಗ್ರಾಮಗಳಿಗೆ ಪ್ರವೇಶಿಸದಂತೆ ವೈಜ್ಞಾನಿಕ ರೀತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಬೇಕು ಎಂದು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಸರ್ಕಾರ ಮತ್ತು ಜನಪ್ರತಿನಿಧಿಗಳು ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರು ಟೆಂಟಿಕಲ್ ಬೇಲಿ ನಿರ್ಮಿಸುವುದಾಗಿ ಹೇಳುತ್ತಿದ್ದಾರೆ. ಅನುದಾನ ಬಿಡುಗಡೆಯಾಗುತ್ತದೆ ಎಂಬ ಭರವಸೆ ನೀಡಲಾಗುತ್ತಿದ್ದರೂ ಸಮರ್ಪಕವಾಗಿ ಬೇಲಿ ನಿರ್ಮಾಣವಾಗುತ್ತಿಲ್ಲ. ಕಳೆದ ಎರಡು ದಿನಗಳಿಂದ ಹಾಸನದ ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಬಾರದು ಎಂದು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೂ ಇದೇ ಆತಂಕ ಕಾರಣವಾಗಿದೆ ಎಂದು ಹೇಳಿದರು.
ಈಗಾಗಲೇ ಭದ್ರಾ ಅಭಯಾರಣ್ಯದಲ್ಲಿರುವ ಕಾಡಾನೆಗಳ ನಿರ್ವಹಣೆ ಮತ್ತು ಅವುಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವುದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಹಾಸನ ಜಿಲ್ಲೆಯ 56 ಆನೆಗಳನ್ನು ಇಲ್ಲಿಗೆ ಸ್ಥಳಾಂತರಿಸಿದರೆ ಮತ್ತಷ್ಟು ಸಮಸ್ಯೆಗಳು ಎದುರಾಗಲಿವೆ. ಶಾಸಕರ ಅಭಿವೃದ್ಧಿ ಭಾಷಣಗಳ ನಡುವೆಯೇ ರೈತರ ಹೆಣಗಳು ಬೀಳುತ್ತಿರುವುದು ದುರಂತ ಎಂದು ಜೀವರಾಜ್ ಟೀಕಿಸಿದರು.
ಹೆನ್ನಂಗಿ ಗ್ರಾಮದ ಬಡ ರೈತ ಕೃಷ್ಣಮೂರ್ತಿ ಕಾಡಾನೆ ದಾಳಿಗೆ ಬಲಿಯಾಗಿರುವುದು ತೀವ್ರ ನೋವು ತಂದಿದೆ. ಸರ್ಕಾರದಿಂದ ಮೃತರ ಕುಟುಂಬಕ್ಕೆ ₹20 ಲಕ್ಷ ಪರಿಹಾರ ನೀಡಿದರೂ ಅದರಿಂದ ಕುಟುಂಬದ ಮುಂದಿನ ಜೀವನ ನಿರ್ವಹಣೆ ಸುಲಭವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಆದ್ದರಿಂದ ಸರ್ಕಾರ ಕೇವಲ ಪರಿಹಾರ ನೀಡಿ ಕೈತೊಳೆದುಕೊಳ್ಳದೆ, ಮೃತರ ಕುಟುಂಬದ ಜೀವನಕ್ಕೆ ಭದ್ರತೆ ಒದಗಿಸಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ಅಥವಾ ಅರಣ್ಯ ಇಲಾಖೆಯಲ್ಲಿಯೇ ಸೂಕ್ತ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ಕಾಡಾನೆಗಳ ಹಾವಳಿಗೆ ನಿರಂತರವಾಗಿ ರೈತರು ಬಲಿಯಾಗುತ್ತಿರುವ ಘಟನೆಗಳು ಮಲೆನಾಡಿನ ಜನರಲ್ಲಿ ಆತಂಕ ಹೆಚ್ಚಿಸಿವೆ. ಪರಿಹಾರ ನೀಡುವುದರ ಜೊತೆಗೆ ಶಾಶ್ವತ ತಡೆಗೋಡೆ, ಪರಿಣಾಮಕಾರಿ ಆನೆ ನಿರ್ವಹಣೆ ಹಾಗೂ ರೈತರ ಜೀವ ರಕ್ಷಣೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಮತ್ತೆ ಮುನ್ನೆಲೆಗೆ ಬಂದಿದೆ.
Farmer dies after being attacked by wild elephant while searching for his cow
Leave a comment