ಚಿಕ್ಕಮಗಳೂರು: ಜಿಲ್ಲೆಯ ಪ್ರಕೃತಿ ಸೌಂದರ್ಯವನ್ನು ಸವಿಯಲು ಹೊಸ ವರ್ಷದ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ.
2026ರ ಹೊಸ ವರ್ಷದ ಸ್ವಾಗತದ ವೇಳೆ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಅವರು ಪ್ರಮುಖ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ.
ಈ ನಿರ್ಬಂಧಿತ ಆದೇಶವು 2025ರ ಡಿಸೆಂಬರ್ 31ರ ಸಂಜೆ 6:00 ಗಂಟೆಯಿಂದ ಪ್ರಾರಂಭವಾಗಿ 2026ರ ಜನವರಿ 1ರ ಬೆಳಿಗ್ಗೆ 6:00 ಗಂಟೆಯವರೆಗೆ ಜಾರಿಯಲ್ಲಿರಲಿದೆ.
ಜಿಲ್ಲಾಡಳಿತದ ಈ ನಿರ್ಧಾರದಿಂದಾಗಿ ಕಾಫಿನಾಡಿನ ಪ್ರಮುಖ ಆಕರ್ಷಣೆಗಳಾದ ಮುಳ್ಳಯ್ಯನಗಿರಿ, ಸೀತಾಲಯ್ಯನಗಿರಿ, ಮಾಣಿಕ್ಯಧಾರಾ, ಹಾಗೂ ಝರಿ ಜಲಪಾತಗಳಿಗೆ ಪ್ರವಾಸಿಗರು ಭೇಟಿ ನೀಡುವಂತಿಲ್ಲ.
ಇದರೊಂದಿಗೆ ಹೊನ್ನಮ್ಮನಹಳ್ಳ, ಗಾಳಿಕೆರೆ, ಹಿರೇಕೊಳಲೆ ಕೆರೆ, ಎತ್ತಿನಭುಜ, ದೇವರಮನೆ, ರಾಣಿಝರಿ ಮತ್ತು ಬಳ್ಳಾಳರಾಯನ ದುರ್ಗದಂತಹ ಪ್ರಸಿದ್ಧ ತಾಣಗಳಿಗೂ ಪ್ರವಾಸಿಗರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಸ್ತಾವನೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಕ್ಯಾತನಮಕ್ಕಿ, ರುದ್ರವಾದ, ಬಂಡಾಜೆ ಫಾಲ್ಸ್ ಸೇರಿದಂತೆ ಕಡೂರು ಮತ್ತು ತರೀಕೆರೆ ತಾಲ್ಲೂಕಿನ ಅಯ್ಯನಕೆರೆ, ಕೆಮ್ಮಣ್ಣುಗುಂಡಿ ಹಾಗೂ ಹೆಬ್ಬೆ ಫಾಲ್ಸ್ಗಳಿಗೂ ಈ ನಿಷೇಧ ಅನ್ವಯಿಸುತ್ತದೆ.
ಆದರೆ, ಈಗಾಗಲೇ ಆನ್‌ಲೈನ್ ಮೂಲಕ ಅಧಿಕೃತವಾಗಿ ಹೋಂ ಸ್ಟೇ ಅಥವಾ ರೆಸಾರ್ಟ್‌ಗಳನ್ನು ಕಾಯ್ದಿರಿಸಿರುವ ಪ್ರವಾಸಿಗರಿಗೆ ಮಾತ್ರ ಅಯಾ ಸ್ಥಳಗಳಿಗೆ ತೆರಳಲು ವಿನಾಯಿತಿ ನೀಡಲಾಗಿದ್ದು, ಇತರೆ ಯಾವುದೇ ಪ್ರವಾಸಿಗರಿಗೆ ಜಾವರೈನ್ ಚೆಕ್ ಪೋಸ್ಟ್‌ನಿಂದ ಮೇಲ್ಬಾಗಕ್ಕೆ ತೆರಳಲು ಅವಕಾಶವಿರುವುದಿಲ್ಲ ಎಂದು ಜಿಲ್ಲಾಡಳಿತವು ಸ್ಪಷ್ಟವಾದ ಸೂಚನೆ ನೀಡಿದೆ.
District administration imposes several conditions for New Year celebrations
Leave a comment