ಚಿಕ್ಕಮಗಳೂರು : ವರ್ತಮಾನದ ರಾಜಕೀಯ ಸಾಮಾಜಿಕ ಸಾಂಸ್ಕೃತಿಕ ವಿದ್ಯಮಾನಗಳು ಹೊಸತಲೆಮಾರಿನ ಯುವ ಸಮುದಾಯಕ್ಕೆ ಸ್ಪೂರ್ತಿದಾಯಕವಾಗಿಲ್ಲ. ದೇಶದ ನಾಲ್ಕು ದಿಕ್ಕುಗಳಿಂದಲೂ ಕೂಡ ಯುವ ಸಮುದಾಯ ಒಂದು ರೀತಿಯ ಕ್ರೌರ್ಯಕ್ಕೆ ಬಲಿಯಾಗಿ ಬೆಳೆಯುತ್ತಿದೆ.
ದೇಶಿ ಸಂಸ್ಕೃತಿಯ ಮೇಲೆ ಪಶ್ಚಿಮಾತ್ಯ ಸಂಸ್ಕೃತಿಗಳು ಒತ್ತುವರಿ ಮಾಡುತ್ತಿವೆ. ರಾಜಕೀಯ ಅಧಿಕಾರಕ್ಕಾಗಿ ಇಡೀ ಯುವ ಸಮುದಾಯವನ್ನು ಜಾತಿ ಮತದ ಧರ್ಮದ ಹೆಸರಿನಲ್ಲಿ ಸಂಮೋಹನಗೊಳಿಸಿ ಶ್ರೇಷ್ಠತೆಯ ವ್ಯಸನಕ್ಕೆ ಒಳಗಾಗುವಂತೆ ಮಾಡುವ ಮೂಲಕ ಇದೇ ಬದುಕಿನ ಪರಮ ಸತ್ಯ ಎಂದು ಬಿಂಬಿಸುತ್ತಿದ್ದಾರೆ. ಈ ಎಲ್ಲ ವ್ಯಸನಗಳ ರೋಗದಿಂದ ಬಿಡುಗಡೆ ಹೊಂದಬೇಕಾದರೆ, ನಮ್ಮನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡು ಶ್ರೇಷ್ಠ ಜೀವನಕ್ಕೆ ಮುಕ್ತವಾಗಿ ತೆರೆದುಕೊಳ್ಳಬೇಕಾದರೆ, ನೆಲ ಮೂಲದ ಕಲೆ ಸಾಹಿತ್ಯ ಸಂಸ್ಕೃತಿ ಅರಿತು ರೂಡಿಸಿಕೊಂಡು ಅದನ್ನು ನಮ್ಮದಾಗಿಸಿಕೊಳ್ಳುವುದು ಅವಶ್ಯಕವಾಗಿದೆ.
ಕಲೆ ಸಾಹಿತ್ಯ ಸಂಸ್ಕೃತಿಯನ್ನು ನಮ್ಮದಾಗಿ ಧಕ್ಕಿಸಿಕೊಂಡರೆ ಸಮಾಜದ ಮಧ್ಯೆ ಒಳ್ಳೆಯ ಸಂವಹನಕಾರರಾಗಿ ಬೆಳೆಯಬಹುದು. ಇಂತಹ ಸಂವಹನದ ಕಲೆಯನ್ನು ಯುವ ಜನಾಂಗ ರೂಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ, ಕಲೆ ಸಾಹಿತ್ಯ ಸಂಸ್ಕೃತಿಯನ್ನು ಮಕ್ಕಳಿಗೆ ಬಾಲ್ಯದಲ್ಲೇ ಪರಿಚಯಿಸುವುದು ನಾಗರೀಕ ಸಮಾಜದ ಜವಾಬ್ದಾರಿ ಕೂಡ ಆಗಿದೆ
ವಿಶ್ವದಲ್ಲಿ ಅತಿ ಹೆಚ್ಚು ಯುವಜನತೆ ಹೊಂದಿರುವುದು ನಮ್ಮ ಭಾರತ. ಒಂದು ದೇಶ ಎಷ್ಟು? ಶ್ರೀಮಂತವಾಗಿದೆ ಎಂದು ಅಳೆಯುವುದು ಅ ದೇಶದ ಹಣದಿಂದಲ್ಲ, ಆದೇಶದಲ್ಲಿ ಕಲೆ ಸಾಹಿತ್ಯ ಸಂಸ್ಕೃತಿ ಯಾವ ಮಟ್ಟದಲ್ಲಿ ಇದೆ ಎಂದು ಅರಿಯುವುದರ ಮೂಲಕ.
ಯಾವುದೇ ದೇಶದ ಯುವ ಸಮುದಾಯ ಆ ದೇಶದ ಒಂದು ಪ್ರಬಲ ಶಕ್ತಿಯಾಗಿರುತ್ತದೆ, ದೇಶವನ್ನು ಕಟ್ಟುವ ಭವಿಷ್ಯದ ವಾರಸುದಾರರಾಗಿರುತ್ತಾರೆ, ಇಂತಹ ಯುವ ಸಮುದಾಯವನ್ನು ಒಂದು ಸೃಜನಶೀಲತೆಯೊಂದಿಗೆ ಬೆಳೆಸಬೇಕು, ದೇಶವೊಂದರ ಸೃಜನಶೀಲತೆ ಬತ್ತಿ ಹೋದರೆ ಅದರ ದುಷ್ಪರಿಣಾಮ ವಿಜ್ಞಾನದ ಮೇಲೆ ಆಗುತ್ತದೆ.
ಕಾರಣ, ಯಾವುದೇ ಕಲೆ ಸಾಹಿತ್ಯ ಸಂಸ್ಕೃತಿ ಆವಿಷ್ಕಾರವಾಗಿರುವುದು ವಿಜ್ಞಾನದ ಮೂಲಕವೆ.
ಮನುಷ್ಯ ಜನಾಂಗದ ವಿಕಾಸದ ಹಾದಿಯನ್ನು ನೋಡಿದರೆ ಅನ್ನ ಬಟ್ಟೆ ವಸತಿಗಾಗಿ ಮಾತ್ರ ಸೀಮಿತವಾಗಿ ಯೋಚನೆ ಮಾಡದೆ, ಇಲ್ಲಿಂದ ಮುಂದೆಯೂ ಮನದಲ್ಲಿ ಯೋಚನೆಮಾಡತೊಡಗಿದ್ದನ್ನು ಕಾಣಬಹುದು. ಇಂತಹ ಯೋಚನೆಯ ಪರಿಣಾಮವೇ ಕಲೆ ಸಾಹಿತ್ಯ ಸಂಸ್ಕೃತಿ ಅರಳಿ ನಿಲ್ಲಲು ಸಾಧ್ಯವಾಗಿದೆ. ಈ ಕಲೆಯೇ ನಮಗೆ ಎಲ್ಲವನ್ನೂ ಸ್ವೀಕರಿಸುವ, ವೈವಿಧ್ಯತೆಯಲ್ಲಿ ಏಕತೆಯನ್ನು ಒಪ್ಪಿಕೊಳ್ಳುವ, ಭ್ರಾತೃತ್ವವದ ಹಾದಿಯಲ್ಲಿ ಸಾಗುವಂತಹ ಮನೋಭಾವ ನಮ್ಮದಾಗಲು ಮುಖ್ಯ ಪ್ರೇರಣೆಯಾಗಿದೆ.
ಯುವಜನೋತ್ಸವಗಳಲ್ಲಿ ಕೇವಲ ಸ್ಪರ್ಧೆಗಾಗಿ ಸ್ಪರ್ಧೆ ಆಗದೆ ,ಕಲೆ ಸಾಹಿತ್ಯ ಸಂಸ್ಕೃತಿಯ ನಿಜವಾದ ಹಿರಿಮೆ ಗರಿಮೆಯನ್ನು ಕಲಾವಿದರಿಗೆ ತಿಳಿಸುವ ಮೂಲಕ ಭಾರತದ ಬಹುತ್ವದ ಬಹುರೂಪಿತನವನ್ನು ಉಳಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಕಲಾವಿದರು ಸಂಕಲ್ಪ ಮತ್ತು ಪ್ರತಿಜ್ಞೆ ಮಾಡಿ ಭವ್ಯ ಭಾರತದತ್ತ ಹೆಜ್ಜೆ ಹಾಕೋಣ.
•••••••••••••••••••••••✒️
ವರದಿ
ಡಿ.ಎಂ.ಮಂಜುನಾಥಸ್ವಾಮಿ
Leave a comment