ಚಿಕ್ಕಮಗಳೂರು: ಕರ್ನಾಟಕ ಸರ್ಕಾರದ ಸಾರಿಗೆ ಸಚಿವರಾದ ಶ್ರೀ ಬೈರತಿ ಸುರೇಶ್ ಅವರ ನೇತೃತ್ವದಲ್ಲಿ ಜುಲೈ 27ರಿಂದ 29ರವರೆಗೆ ಬೆಂಗಳೂರಿನ ದೇವಸಂದ್ರದಲ್ಲಿ ನಡೆದ ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಮಹಿಳಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 16 ಪ್ರತಿಷ್ಠಿತ ಜಿಲ್ಲಾ ತಂಡಗಳು ಈ ನಾಕ್‌ಔಟ್ ಮಾದರಿಯ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಮಹಿಳಾ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಚಿಕ್ಕಮಗಳೂರು ತಂಡ ಸೆಮಿಫೈನಲ್‌ನಲ್ಲಿ ಬೆಂಗಳೂರು ಫ್ರೆಂಡ್ಸ್ ತಂಡವನ್ನು ರೋಚಕ ಹಣಾಹಣಿಯಲ್ಲಿ ಮಣಿಸಿ ಫೈನಲ್‌ಗೆ ಪ್ರವೇಶಿಸಿತು.
ಸೆಮಿಫೈನಲ್ ಪಂದ್ಯವು 18–18 ಅಂಕಗಳ ಸಮಬಲದಲ್ಲಿ ಅಂತ್ಯಗೊಂಡಿತು. ಬಳಿಕ ನಡೆದ ‘ಬೆಸ್ಟ್-5 ರೈಡ್’ ಹಂತವೂ ಸಮಬಲದಲ್ಲೇ ಮುಕ್ತಾಯವಾಯಿತು. ಅಂತಿಮವಾಗಿ ನಡೆದ ಗೋಲ್ಡನ್ ರೈಡ್‌ನಲ್ಲಿ ಒಂದು ಅಂಕದ ಅಂತರದಿಂದ ಜಯಗಳಿಸಿದ ಚಿಕ್ಕಮಗಳೂರು ತಂಡ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.
ಫೈನಲ್ ಪಂದ್ಯದಲ್ಲಿ ಪ್ರತಿಷ್ಠಿತ ಎಸ್‌ಡಿಎಂ ಉಜಿರೆ ತಂಡವನ್ನು ಎದುರಿಸಿದ ಚಿಕ್ಕಮಗಳೂರು ಮಹಿಳಾ ತಂಡ ಆರಂಭದಿಂದಲೇ ಪ್ರಾಬಲ್ಯ ಮೆರೆದಿದ್ದು, 10 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ರಾಜ್ಯ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.
ತಂಡದ ಈ ಸಾಧನೆಯಿಂದ ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿ ತಂದಿರುವ ಮಹಿಳಾ ಕಬಡ್ಡಿ ಆಟಗಾರ್ತಿಯರಿಗೆ ಜಿಲ್ಲೆಯ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿಯೂ ಇದೇ ಸಾಧನೆಯನ್ನು ಮುಂದುವರಿಸಲಿ ಎಂದು ಶುಭ ಹಾರೈಸಿದ್ದಾರೆ.
Chikmagalur women’s team wins state-level kabaddi championship
Leave a comment