ಚಿಕ್ಕಮಗಳೂರು: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕ್ಷೀಣಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗುವ ಭೀತಿ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಜಲನೀತಿ ಅನ್ವಯ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲು ನಿರ್ಧರಿಸಲಾಗಿದ್ದು, ಪ್ರಸ್ತುತ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕಾಯ್ದಿರಿಸಿಕೊಂಡು ಬಳಸುವಂತೆ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿ ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಎಲ್-ನಿನೊ ಪರಿಣಾಮದಿಂದಾಗಿ ಮಳೆ ಮತ್ತಷ್ಟು ಕೊರತೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ರಾಜ್ಯದ ಹಲವು ಕಡೆ ಬರ ಪರಿಸ್ಥಿತಿ ತಲೆದೋರುವ ಲಕ್ಷಣಗಳು ಕಾಣಿಸುತ್ತಿರುವುದರಿಂದ “ಜಲಾಶಯಗಳ ನೀರನ್ನು ನಂಬಿಕೊಂಡು ಯಾವ ರೈತರೂ ಬೆಳೆ ಹಾಕಬೇಡಿ” ಎಂದು ಮುಖ್ಯಮಂತ್ರಿಗಳು ಈಗಾಗಲೇ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ಕುಡಿಯುವ ನೀರಿನ ಯೋಜನೆಯ ಸಮಿತಿಯ ವ್ಯಾಪ್ತಿಗೆ ಬರುವ ಕೃಷ್ಣರಾಜಸಾಗರ, ಕಬಿನಿ, ಹಾರಂಗಿ, ಹೇಮಾವತಿ, ಭದ್ರಾ, ನುಗು, ತಾರಕ, ಸುವರ್ಣಾವತಿ, ಚಿಕ್ಕಿಹೊಳೆ, ಗುಂಡಾಲ್, ಉಡುತೊರಹಳ್ಳ, ವಾಟೆಹೊಳೆ ಮತ್ತು ಯಗಚಿ ಜಲಾಶಯಗಳಲ್ಲಿ ಇರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಸೂಚಿಸಲಾಗಿದೆ.
ಆದ್ದರಿಂದ ರೈತರು ಜಲಾಶಯದ ನೀರನ್ನು ಅವಲಂಬಿಸುವ ಬೆಳೆಗಳನ್ನು ಬೆಳೆಯದೆ, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕೃಷಿ ಇಲಾಖೆ ಅಧಿಕಾರಿಗಳು ನೀಡುವ ಸಲಹೆಯಂತೆ ಮಳೆ ಆಶ್ರಿತ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ಮನವಿ ಮಾಡಲಾಗಿದೆ.
Use of reservoir water for drinking water
Leave a comment