ಕಡೂರು: ರಸ್ತೆಗೆ ದಿಢೀರನೆ ಅಡ್ಡಬಂದ ಹಸುವನ್ನು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ, ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿರುವ ದಾರುಣ ಘಟನೆ ಕಡೂರು-ಬೆಲಗೂರು ರಸ್ತೆಯಲ್ಲಿ ಸಂಭವಿಸಿದೆ.
ಉಡೆಗೆರೆ ಗ್ರಾಮದ ನಿವಾಸಿ ಶಾರದಮ್ಮ ಎಂಬುವವರೇ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮಚ್ಚರಿ ಗ್ರಾಮದಲ್ಲಿದ್ದ ಕವಿತಾ ಎಂಬುವವರ ಮನೆಯಿಂದ ಉಡೆಗೆರೆ ಗ್ರಾಮಕ್ಕೆ ತೆರಳಲು ಶಾರದಮ್ಮ ಅವರು ತಮ್ಮ ಸಂಬಂಧಿ ಮಹಾಂತೇಶ್ ಎಂಬುವವರ ಹೀರೊ ಪ್ಯಾಶನ್ ಪ್ರೋ ಬೈಕ್ (KA-66-Q-9644) ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಏಕಾಏಕಿ ಹಸುವೊಂದು ಅಡ್ಡ ಬಂದಿದ್ದು, ಅದನ್ನು ತಪ್ಪಿಸುವ ಯತ್ನದಲ್ಲಿ ಬೈಕ್ ಪಲ್ಟಿಯಾಗಿದೆ ಎನ್ನಲಾಗಿದೆ.
ಈ ಭೀಕರ ಅಪಘಾತದಿಂದಾಗಿ ಶಾರದಮ್ಮ ಅವರ ತಲೆಗೆ ಬಲವಾದ ಪೆಟ್ಟು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತಕ್ಷಣವೇ ಸಾರ್ವಜನಿಕರ ನೆರವಿನಿಂದ ಅವರನ್ನು ಅಂಬ್ಯುಲೆನ್ಸ್ ಮೂಲಕ ಕಡೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಘಟನೆಯಲ್ಲಿ ಚಾಲಕ ಮಹಾಂತೇಶ್ ಅವರ ಬಲಕೈಗೂ ಗಾಯಗಳಾಗಿವೆ.
Woman dies after losing control of bike
Leave a comment