ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಆಡಳಿತದ ಸಾರಥಿ ಬದಲಾಗಿದ್ದು, ರಾಜ್ಯ ಸರ್ಕಾರವು ಐಎಎಸ್ ಅಧಿಕಾರಿಗಳ ವರ್ಗಾವಣೆಯ ಮಹತ್ವದ ಅದೇಶ ಹೊರಡಿಸಿದೆ. ಜಿಲ್ಲೆಯ ಹಾಲಿ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಅವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರಿನ ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸೊಸೈಟಿಯ ಒಂಬುಡ್ಸ್ ಮನ್ ಹುದ್ದೆಗೆ ಸ್ಥಾನಪಲ್ಲಟ ಮಾಡಲಾಗಿದ್ದು, ಡಿಪಿಎಆರ್ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಕಳೆದ ಜನವರಿ ತಿಂಗಳಷ್ಟೇ ಮೀನಾ ನಾಗರಾಜ್ ಅವರಿಂದ ತೆರವಾದ ಸ್ಥಾನಕ್ಕೆ ಹೊಸ ಡಿಸಿಯಾಗಿ ಅಧಿಕಾರ ವಹಿಸಿಕೊಂಡಿದ್ದ 2016ರ ಬ್ಯಾಚ್‌ನ ಐಎಎಸ್ ಅಧಿಕಾರಿ ಎನ್.ಎಂ. ನಾಗರಾಜ್ ಅವರ ಈ ದಿಢೀರ್ ವರ್ಗಾವಣೆಯು ಸಾಕಷ್ಟು ರಾಜಕೀಯ ಹಾಗೂ ಆಡಳಿತಾತ್ಮಕ ಚರ್ಚೆಗಳಿಗೆ ವೇದಿಕೆ ಒದಗಿಸಿದೆ.
ಇನ್ನು ತೆರವಾದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹುದ್ದೆಗೆ ನೂತನ ಸಾರಥಿಯಾಗಿ ಭನ್ವರ್ ಸಿಂಗ್ ಮೀನಾ ಅವರನ್ನು ನೇಮಕ ಮಾಡಲಾಗಿದೆ. ಸದ್ಯ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ಕಾರ್ಯನಿರ್ವಹಿಸುತ್ತಿರುವ 2017ರ ಬ್ಯಾಚ್ ನ ಐಎಎಸ್ ಅಧಿಕಾರಿ ಭನ್ವರ್ ಸಿಂಗ್ ಮೀನಾ ಅವರಿಗೆ ತಕ್ಷಣವೇ ಚಿಕ್ಕಮಗಳೂರಿನ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.
ಶೃಂಗೇರಿ ಕ್ಷೇತ್ರದ ಮರು ಮತಗಳ ಎಣಿಕೆ ಪ್ರಕರಣದಲ್ಲಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ನಾಗರಾಜ್ ಕೇವಲ ಆರು ತಿಂಗಳು ಮಾತ್ರ ಜಿಲ್ಲಾಧಿಕಾರಿ ಯಾಗಿದ್ದರು.
Bhanwar Singh Meena appointed as new District Collector for the district
Leave a comment