ಚಿಕ್ಕಮಗಳೂರು: ನಗರದಲ್ಲಿ ಜು.೫ ರಂದು ನಡೆದ ನಗರಸಭೆಯ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ನ ವಿಕೃತ ಮೈತ್ರಿಯನ್ನು ದಲಿತ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಒಕ್ಕೂಟದ ಮುಖಂಡ ದಂಟರಮಕ್ಕಿ ಶ್ರೀನಿವಾಸ್, ಸಂವಿಧಾನ ಜಾರಿಯಾದಾಗಿನಿಂದ ಈವರೆಗೆ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ಬಡವರು, ಜಾತ್ಯಾತೀತ ಜನಪರ ಸಿದ್ಧಾಂತ ಇರುವ ಪಕ್ಷಗಳನ್ನು ಬೆಂಬಲಿಸುತ್ತ ಬಂದಿದೆ ಎಂದು ಹೇಳಿದರು.
ಕರ್ನಾಟಕದ ಎಲ್ಲಾ ಚುನಾವಣೆಗಳಲ್ಲಿ ದಲಿತ ಸಂಘಟನೆಗಳ ಐಕ್ಯತಾ ಚಾಲನಾ ಸಮಿತಿ ತೀರ್ಮಾನದಂತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಾಗಿದ್ದು, ಜನರಿಗೋಸ್ಕರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ತನ್ನ ಸಿದ್ಧಾಂತದಂತೆ ನಡೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ನಗರಸಭಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸರಳವಾಗಿ ಅಧಿಕಾರ ಹಿಡಿಯುವ ಎಲ್ಲಾ ಸಾಧ್ಯತೆಗಳಿದ್ದರೂ ಕಾಂಗ್ರೆಸ್ ಮುಖಂಡರು ಬಿಜೆಪಿ-ಜೆಡಿಎಸ್ ಅಭ್ಯರ್ಥಿಗೆ ಅವಿರೋಧ ಆಯ್ಕೆಗೆ ಸಹಕರಿಸಿರುವುದು ಮತದಾರರಿಗೆ ಮಾಡಿದ ಅನ್ಯಾಯ ಎಂದು ದೂರಿದರು.
ಹಾಲಿ ಆಯ್ಕೆಯಾಗಿರುವ ಅಲ್ಪಸಂಖ್ಯಾತ ಸದಸ್ಯರಿಗೆ ಸ್ಪಷ್ಟ ಸಿದ್ಧಾಂತದಿಂದ ಇದರ ನೈತಿಕ ಹೊಣೆ ಹೊತ್ತು ನಗರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಮುಂದಿನ ಚುನಾವಣೆಗಳಲ್ಲಿ ಈ ಮೂರು ಪಕ್ಷಗಳನ್ನು ಬಿಟ್ಟು ಜನರಿಗಾಗಿ ಸೇವೆ ಮಾಡುವ ವ್ಯಕ್ತಿಯನ್ನು ಆಯ್ಕೆ ಮಾಡುವ ಜೊತೆಗೆ ಪರ್ಯಾಯ ರಾಜಕಾರಣ ಮಾಡುವ ಅಗತ್ಯ ಇದೆ ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಸಂವಿಧಾನ ಸಂರಕ್ಷಣಾ ವೇದಿಕೆಯ ಕೃಷ್ಣಮೂರ್ತಿ, ಛಲವಾದಿ ಸಂಘದ ರಘು, ಮುಖಂಡರಾದ ಪುಟ್ಟಸ್ವಾಮಿ, ಶೇಖರ್ ಉಪಸ್ಥಿತರಿದ್ದರು.
A perverse alliance of three parties in the municipal council
Leave a comment