ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಸ್ತಬ್ಧವಾಗುತ್ತಿದ್ದಂತೆ ಸರ್ಕಾರ ಅಲ್ಲಿನ ಕುಗ್ರಾಮಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಕ್ಸಲ್ ಪೀಡಿತ ಪ್ರದೇಶಗಳ ಸರ್ವತೋಮುಖ ಪ್ರಗತಿಗಾಗಿ ಮಂಜೂರಾಗಿದ್ದ ವಿಶೇಷ ಅಭಿವೃದ್ಧಿ ಯೋಜನೆಗಳನ್ನು ಪ್ರಭಾವಿಗಳ ಒತ್ತಡಕ್ಕೆ ಮಣಿದು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಸ್ಥಳೀಯ ಗಿರಿಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಮಗೆ ಸಿಗಬೇಕಾದ ಹಕ್ಕಿನಿಂದ ವಂಚಿತರಾಗುತ್ತಿರುವ ಮಲೆನಾಡಿನ ಗ್ರಾಮಸ್ಥರು, ಮಳೆಗಾಲ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಅನಿವಾರ್ಯವಾಗಿ ಮತ್ತೆ ಅಪಾಯಕಾರಿ ಕಾಲುಸಂಕಗಳನ್ನೇ ಆಶ್ರಯಿಸುವಂತಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬಲೇಕುಡಿ, ಕೆರೆಕಟ್ಟೆ, ಹುಲುಗಾರು ಬೈಲು, ಮುಂಡಗಾರು ಹಾಗೂ ಉಂಬಳಗೆರೆ ಸೇರಿದಂತೆ ಹಲವು ಗ್ರಾಮಗಳ ಜನತೆ ಸೂಕ್ತ ರಸ್ತೆ ಮತ್ತು ಸೇತುವೆಗಳಿಲ್ಲದೆ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶರಣಾಗಿದ್ದ ನಕ್ಸಲ್ ನಾಯಕಿ ಮುಂಡಗಾರು ಲತಾ ಅವರ ಸ್ವಗ್ರಾಮವೂ ಸೇರಿದಂತೆ ಹಲವು ಗಿರಿಜನ ಪ್ರದೇಶಗಳ ಸ್ಥಿತಿ ಇಂದು ಅತ್ಯಂತ ಶೋಚನೀಯವಾಗಿದೆ. ಮಳೆಗಾಲದಲ್ಲಿ ಹಳ್ಳ-ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುವುದರಿಂದ, ಅನಿವಾರ್ಯವಾಗಿ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಶ್ರಮದಾನದ ಮೂಲಕ ಮರ ಹಾಗೂ ಹಗ್ಗಗಳನ್ನು ಬಳಸಿ ತಾವೇ ಕಾಲುಸಂಕಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ನಕ್ಸಲರು ಶರಣಾಗತಿಯ ಹಾದಿ ಹಿಡಿಯುತ್ತಿದ್ದಂತೆ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರ ಒಟ್ಟು ಹತ್ತು ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿತ್ತು. ಇದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಪ್ರಗತಿಗಾಗಿಯೇ ಏಳು ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟು, ಅದರ ಅಡಿಯಲ್ಲಿ ಒಟ್ಟು 14 ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು.
ಆದರೆ, ಈಗ ನಕ್ಸಲ್ ಬಾಧೆಯೂ ಇರದ ಮತ್ತು ಗಿರಿಜನರೇ ಇಲ್ಲದ ಬೇರೆ ಪ್ರಭಾವಿ ಪ್ರದೇಶಗಳಿಗೆ ಈ ಅನುದಾನ ಹಾಗೂ ಯೋಜನೆಗಳನ್ನು ಶಿಫ್ಟ್ ಮಾಡಲು ಸರ್ಕಾರ ಮುಂದಾಗಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
ಒಟ್ಟಿನಲ್ಲಿ, ನಕ್ಸಲ್ ನಿಗ್ರಹದ ನಂತರ ಮಲೆನಾಡಿನ ಗಿರಿಜನರ ಬದುಕು ಮತ್ತೆ ಮೊದಲಿನಂತಾಗಿದ್ದು, ಸರ್ಕಾರದ ವಿಶೇಷ ಪ್ಯಾಕೇಜ್ ಕೇವಲ ಕಾಗದಕ್ಕಷ್ಟೇ ಸೀಮಿತವಾದಂತಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ, ತಕ್ಷಣವೇ ಮೂಲ ಯೋಜನೆಗಳ ಪ್ರಕಾರ ಕಾಮಗಾರಿ ನಡೆಸಿ ತಮಗೆ ನ್ಯಾಯ ಒದಗಿಸಬೇಕು ಎನ್ನುವುದೇ ಇಲ್ಲಿನ ಗ್ರಾಮಸ್ಥರ ಆಕ್ರೋಶಭರಿತ ಒತ್ತಾಯವಾಗಿದೆ.
Villagers in the mountains once again resort to dangerous footpaths
Leave a comment