ಚಿಕ್ಕಮಗಳೂರು: ಮಳೆ ಕೊರತೆಯಿಂದ ಆತಂಕಗೊಂಡಿರುವ ಕಡೂರು ತಾಲೂಕಿನ ಅಯ್ಯನಕೆರೆ ಹಾಗೂ ಮದಗದಕೆರೆ ತಪ್ಪಲಿನ ಗ್ರಾಮಸ್ಥರು ಉತ್ತಮ ಮಳೆಯಾಗಿ ಕೆರೆಗಳು ತುಂಬಲಿ ಎಂಬ ಆಶಯದೊಂದಿಗೆ ವಿಶೇಷ ಪೂಜೆ ನೆರವೇರಿಸಿದರು.
ಸುಮಾರು 1,300 ಹೆಕ್ಟೇರ್ ವಿಸ್ತೀರ್ಣದ ಅಯ್ಯನಕೆರೆ ಹಾಗೂ 800 ಹೆಕ್ಟೇರ್ ವಿಸ್ತೀರ್ಣದ ಮದಗದಕೆರೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುವ ಮಳೆಯನ್ನೇ ಅವಲಂಬಿಸಿವೆ. ಈ ಬಾರಿ ಸಮರ್ಪಕ ಮಳೆಯಾಗದ ಪರಿಣಾಮ ಎರಡೂ ಕೆರೆಗಳು ತುಂಬದಿರುವುದರಿಂದ ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಈ ಹಿನ್ನೆಲೆಯಲ್ಲಿ ಕಡೂರು ತಾಲೂಕಿನ ಹಸ್ತಿನಾಪುರ ಗ್ರಾಮದ ಸುಮಾರು 180 ಮನೆಗಳ ಜನರು ಒಟ್ಟಾಗಿ ಸೇರಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಶಕುನ ರಂಗನಾಥ ಸ್ವಾಮಿಗೆ 101 ಎಡೆ ಹಾಗೂ ಬಾಳೆಹಣ್ಣಿನ ರಸಾಯನ ಸಮರ್ಪಿಸಿ ವಿಶೇಷ ಪೂಜೆ ನಡೆಸಲಾಯಿತು. ಅಲ್ಲದೆ ಸರಪಳಿ ಕೆಂಚರಾಯ ಸ್ವಾಮಿಗೆ ಮೂರು ಕುರಿಗಳನ್ನು ಬಲಿ ನೀಡಿ ಹತ್ತು ಹಳ್ಳಿಗಳ ಗ್ರಾಮಸ್ಥರು ತಮ್ಮ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು.
ಮಡಿವಾಳ ಸಮಾಜದ ವತಿಯಿಂದ ದಾಸಪ್ಪರನ್ನು ಕರೆಸಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ತಾಪಂ ಮಾಜಿ ಅಧ್ಯಕ್ಷ ಆನಂದ್ ನಾಯ್ಕ್ ಹಾಗೂ ಗ್ರಾಮದ ಯುವಕರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು.
ಅಯ್ಯನಕೆರೆ ಹಾಗೂ ಮದಗದಕೆರೆಗಳು ಭರ್ತಿಯಾದರೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಅಗತ್ಯ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಗ್ರಾಮಸ್ಥರು ಆಶಾಭಾವ ವ್ಯಕ್ತಪಡಿಸಿದರು. ಉತ್ತಮ ಮಳೆಯಾಗಿ ಕೆರೆಗಳು ಶೀಘ್ರದಲ್ಲೇ ತುಂಬಲಿ ಎಂಬ ಪ್ರಾರ್ಥನೆಯೊಂದಿಗೆ ಗ್ರಾಮಸ್ಥರು ದೇವರಲ್ಲಿ ಬೇಡಿಕೊಂಡರು.
Special puja at the foothills of Ayyanakere and Madagadakere for rain
Leave a comment