ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗಕ್ಕೆ ಅಟ್ಟಿರುವ ಕ್ರಮಕ್ಕೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರದ ಕ್ರಮದಿಂದ ಜನರ ಜೀವಕ್ಕೆ ಅಪಾಯ ಎದುರಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಜನರ ಹಿತ ಕಾಪಾಡಲು ಅಗತ್ಯವಿದ್ದರೆ ರಾಜೀನಾಮೆ ನೀಡುವುದಕ್ಕೂ ಸಿದ್ಧ ಎಂದು ಚಿಕ್ಕಮಗಳೂರು ಶಾಸಕ ತಮ್ಮಯ್ಯ, ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹಾಗೂ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರು ಜಿಲ್ಲೆಯಲ್ಲಿ ಮಾನವ–ಕಾಡುಪ್ರಾಣಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ 16 ಮಂದಿ ಮೃತಪಟ್ಟಿದ್ದಾರೆ. ಒಟ್ಟು 58 ಕಾಡಾನೆಗಳ ಪೈಕಿ ಎರಡು ಆನೆಗಳನ್ನು ಸೆರೆ ಹಿಡಿಯಲಾಗಿದ್ದು, ಉಳಿದ 56 ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ, ಚಿಕ್ಕಮಗಳೂರು ಜಿಲ್ಲೆಗೆ ಆನೆಗಳನ್ನು ಕಳುಹಿಸಬಾರದು ಎಂದು ಶಾಸಕರು ಈಗಾಗಲೇ ಸರ್ಕಾರಕ್ಕೆ ಪತ್ರ ನೀಡಿದ್ದರು.
ಆದರೂ ತಮ್ಮ ಗಮನಕ್ಕೆ ಬಾರದಂತೆ ಬೇಲೂರು ಭಾಗದಿಂದ ಆನೆಗಳನ್ನು ಚಿಕ್ಕಮಗಳೂರು ಜಿಲ್ಲೆಯತ್ತ ಓಡಿಸಲಾಗಿದೆ ಎಂದು ಶಾಸಕರು ಆರೋಪಿಸಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಆನೆಗಳನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುತ್ತೋಡಿ ಭಾಗದಲ್ಲೇ 450ಕ್ಕೂ ಹೆಚ್ಚು ಆನೆಗಳಿದ್ದು, ಮತ್ತಷ್ಟು ಆನೆಗಳನ್ನು ಈ ಭಾಗಕ್ಕೆ ಓಡಿಸುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಕಾಡಾನೆಗಳು ಸಹಜವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸುವುದಕ್ಕೆ ವಿರೋಧವಿಲ್ಲ. ಆದರೆ, ಬಲವಂತವಾಗಿ ಆನೆಗಳನ್ನು ಓಡಿಸಿ ಜನವಸತಿ ಪ್ರದೇಶಗಳಿಗೆ ತರುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.
“ಬೇಲೂರಿನಲ್ಲಿ ಎರಡು ಮಂದಿ ಮೃತಪಟ್ಟಿದ್ದಾರೆ ಎಂಬ ಕಾರಣಕ್ಕೆ ಆನೆಗಳನ್ನು ಚಿಕ್ಕಮಗಳೂರು ಭಾಗಕ್ಕೆ ಓಡಿಸುವುದು ಸರಿಯಲ್ಲ. ಅಲ್ಲಿನ ಸಚಿವರು ಹೇಳಿದರೆಂದು ನಮ್ಮ ಜಿಲ್ಲೆಗೆ ಆನೆಗಳನ್ನು ಕಳುಹಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ನಮಗೆ ಜನರ ಜೀವ ಮುಖ್ಯ. ಜನರ ಕಣ್ಣೀರು ನೋಡಲು ಸಾಧ್ಯವಿಲ್ಲ. ಸರ್ಕಾರ ನೀಡುವ 20 ಲಕ್ಷ ರೂ. ಪರಿಹಾರದಿಂದ ಕಳೆದುಹೋದ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ,” ಎಂದು ರಾಜೇಗೌಡ ತಿಳಿಸಿದ್ದಾರೆ.
ಕಾಡಾನೆಗಳನ್ನು ಓಡಿಸುವುದನ್ನು ತಡೆಯಲು ಮೂರು ಸಾವಿರಕ್ಕೂ ಹೆಚ್ಚು ಜನರು ಸಿದ್ಧರಿದ್ದಾರೆ. ಈಗಾಗಲೇ ಆನೆಗಳನ್ನು ಭದ್ರಾ ಅಭಯಾರಣ್ಯದತ್ತ ಡ್ರೈವ್ ಮಾಡುವ ಕಾರ್ಯವನ್ನು ನಿಲ್ಲಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜನರ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಕಾಡಾನೆ ಸ್ಥಳಾಂತರದ ನಿರ್ಧಾರವನ್ನು ಕೈಬಿಡಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.
MLA strongly opposes relocation of wild elephant threatens to resign
Leave a comment