ಚಿಕ್ಕಮಗಳೂರು: ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಹುದ್ದೆಯ ಕನಸು ಹೊತ್ತು ಕಠಿಣ ಅಭ್ಯಾಸದಲ್ಲಿ ತೊಡಗಿದ್ದ 24 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ನಗರದ ವಿಜಯಪುರ ಬಡಾವಣೆಯ ಆಂಜನೇಯ ಸ್ವಾಮಿ ದೇವಾಲಯದ ರಸ್ತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಪ್ರಜ್ವಲ್ ಎಂಬ ಯುವಕನೇ ಶವವಾಗಿ ಪತ್ತೆಯಾದ ದುರ್ದೈವಿ. ಎಂಬಿಎ ವ್ಯಾಸಂಗ ಮುಗಿಸಿದ್ದ ಈತ, ಪಿಎಸ್‌ಐ ಪರೀಕ್ಷೆಯ ಸಿದ್ಧತೆಗಾಗಿ ಪ್ರತ್ಯೇಕ ಕೊಠಡಿ ಪಡೆದು ತೀವು ಅಭ್ಯಾಸದಲ್ಲಿ ತೊಡಗಿಕೊಂಡಿದ್ದ ಎಂದು ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 7ರ ರಾತ್ರಿ ಹೊರಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಯುವಕ, ಮರುದಿನ ಬೆಳಿಗ್ಗೆ, ಎಷ್ಟು ಬಾರಿ ಬಾಗಿಲು ಬಡಿದರೂ ತೆರೆಯದೇ ಇದ್ದಾಗ ಅನುಮಾನಗೊಂಡ ತಾಯಿ ಹಾಗೂ ಸ್ನೇಹಿತರು ಬಾಗಿಲು ಮುರಿದು ಒಳನುಗ್ಗಿದ್ದಾರೆ.
ಆ ವೇಳೆ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಯಾವುದೋ ವೈಯಕ್ತಿಕ ಕಾರಣದಿಂದ ಮನನೊಂದು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಈ ಸಂಬಂಧ ಬಸವನಹಳ್ಳಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.
Youth commits suicide by hanging
Leave a comment