ಚಿಕ್ಕಮಗಳೂರು: ಬರಗಾಲದ ಸಂದರ್ಭದಲ್ಲಿ ಕೊಳವೆಬಾವಿ ಕೊರೆಯಲು ಬೇಕಾಬಿಟ್ಟಿ ದರ ನಿಗದಿ ಮಾಡಲು ಅವಕಾಶ ನೀಡಬಾರದು. ನಿಯಮಾವಳಿ ರೂಪಿಸಿ ನಿಯಂತ್ರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಈ ಬಗ್ಗೆ ಧ್ವನಿ ಎತ್ತಿದ ಕಡೂರು ಶಾಸಕ ಕೆ.ಎಸ್.ಆನಂದ್, ಜಿಲ್ಲೆಯ ಹಲವು ಬಹುತೇಕ ಎಲ್ಲಾ ತಾಲ್ಲೂಕುಗಳಲ್ಲಿ ಬರ ಆವರಿಸಿದೆ. ತೋಟ ಉಳಿಸಿಕೊಳ್ಳಲು ರೈತರು ಸಾಲ ಮಾಡಿ ಕೊಳವೆಬಾವಿ ಕೊರೆಸಲು ಮುಂದಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಕೊಳವೆಬಾವಿ ಕೊರೆಯಲು ಹೆಚ್ಚು ದರ ನಿಗದಿ ಮಾಡಿ ರೈತರಿಂದ ಹಗಲು ದರೋಡೆ ಮಾಡಲಾಗುತ್ತಿದೆ. ಒಂದು ಅಡಿಗೆ ₹105 ಇದ್ದರೆ, ಕೆಲವೆಡೆ ₹130 ದರ ನಿಗದಿ ಮಾಡಿಕೊಳ್ಳಲಾಗಿದೆ.100 ಕೊರದ ಬಳಿಕ ಅಡಿಗೆ ₹5 ಹೆಚ್ಚಿಗೆ ನೀಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಬೋರ್ವೆಲ್ ಕೊರೆಯುವ ಅಂಗಡಿ ಮಾಲೀಕರು ಬೇಕಾಬಿಟ್ಟಿ ದರ ನಿಗದಿ ಮಾಡುತ್ತಿರುವ ಬಗ್ಗೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆ ನಿಗಾ ವಹಿಸಬೇಕು. ಬರದ ಸಂದರ್ಭದಲ್ಲಿ ರೈತರನ್ನು ಹಗಲು ದರೋಡೆ ಮಾಡುವುದು ಸರಿಯಲ್ಲ. ಕೂಡಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ದರ ನಿಗದಿ ಮಾಡಿ ಆದೇಶ ಹೊರಡಿಸಬೇಕು ಎಂದು ಸೂಚನೆ ನೀಡಿದರು.
ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ‘ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲೇ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಇನ್ನು ಬೇಸಿಗೆ ನಿಭಾಯಿಸುವುದು ಕಷ್ಟವಾಗಲಿದೆ. ಈಗಲೇ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್ ನೀರಿಗೆ ಸರ್ಕಾರ ₹900 ನಿಗದಿ ಮಾಡಿದ್ದು, ಟ್ಯಾಂಕರ್ ಮಾಲೀಕರು ನೀರು ಪೂರೈಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ದರ ಹೆಚ್ಚಿಸಬೇಕು ಎಂದು ಹೇಳಿದರು.
ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ‘ರಾಜ್ಯಕ್ಕೆ ಒಂದೇ ದರ ನಿಗದಿ ಮಾಡಿದೆ. ಹೀಗಾಗಿ ಒಂದು ಜಿಲ್ಲೆಗೆ ಪ್ರತ್ಯೇಕ ದರ ನಿಗದಿ ಮಾಡುವುದು ಕಷ್ಟ. ಈ ಕುರಿತು ಜಿಲ್ಲಾಧಿಕಾರಿ ಪ್ರತ್ಯೇಕ ವರದಿ ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ‘ಐಪಿ ಸೆಟ್ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಆಗಾಗ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ವೋಲ್ವೇಜ್ ಏರುಪೇರಾಗುತ್ತಿದೆ. ಮೋಟರ್ ಹಾಗೂ ಕೇಬಲ್ ಸುಟ್ಟು ಹೋಗುತ್ತಿವೆ. ಒಮ್ಮೆ ಕೇಬಲ್ ಸುಟ್ಟರೆ ಕನಿಷ್ಠ ₹15 ಸಾವಿರ ಬೇಕಾಗುತ್ತದೆ. ಬರಗಾಲದ ಕಷ್ಟದಲ್ಲಿ ರೈತರಿಗೆ ತೊಂದರೆ ಮೇಲೆ ತೊಂದರೆ ನೀಡಿದಂತೆ ಆಗಲಿದೆ. ಆದ್ದರಿಂದ ದಿನಕ್ಕೆ 5 ಗಂಟೆ ವಿದ್ಯುತ್ ನೀಡಿದರೂ ನಿರಂತರ ಪೂರೈಕೆ ಮಾಡಬೇಕು’ ಎಂದು ಹೇಳಿದರು.
ಮೆಸ್ಕಾಂ ಸೂಪರಿಂಟೆಂಡೆಂಟ್ ಎಂಜಿನಿಯರ್ ಎಂ.ಎಸ್. ಮಂಜುನಾಥ್ ಮಾತನಾಡಿ, ಕೆಲವು ಕಡೆ ಆಗಾಗ ಸಮಸ್ಯೆ ಉದ್ಭವವಾಗುತ್ತಿದೆ. ಈ ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯರಾದ ಗಾಯತ್ರಿ ಶಾಂತೇಗೌಡ, ಡಾ.ಧನಂಜಯ ಸರ್ಜಿ, ಆರತಿ ಕೃಷ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದಸ್ವಾಮಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಮ ಪ್ರಸಾತ್ ಮನೋಹರ್, ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದರ್ ಕುಮಾರ್ ದಯಮಾ ಉಪಸ್ಥಿತರಿದ್ದರು.
Arbitrary rates for borewell drilling should not be allowed.
Leave a comment