ಚಿಕ್ಕಮಗಳೂರು: ಹೊಸದಾಗಿ ನಿರ್ಮಿಸಲಾಗಿದ್ದ 66/11 ಕೆ.ವಿ. ವಿದ್ಯುತ್ ಉಪಕೇಂದ್ರದಲ್ಲಿನ ಟ್ರಾನ್ಸ್ಫಾರ್ಮರ್ಗೆ ತುಂಬಿಸಲಾಗಿದ್ದ ಸುಮಾರು 12,400 ಲೀಟರ್, ₹31 ಲಕ್ಷ ಮೌಲ್ಯದ ಟ್ರಾನ್ಸ್ಫಾರ್ಮರ್ ಆಯಿಲ್ ಕಳವಾಗಿರುವ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಣದಾಳು ಗ್ರಾಮದಲ್ಲಿ ನಡೆದಿದೆ.
ಈ ಕುರಿತು ಗಾಣದಾಳು 66/11 ಕೆ.ವಿ. ಸಬ್ಸ್ಟೇಷನ್ನ ಸೈಟ್ ಇಂಜಿನಿಯರ್ ಪ್ರಜ್ವಲ್ ಪಿ. ಅವರು ಸೆ.30ರಂದು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಲಕ್ಯಾ ಹೋಬಳಿಯ ಗಾಣದಾಳು ಗ್ರಾಮದಲ್ಲಿ ಹೊಸ 66/11 ಕೆ.ವಿ. ಸಬ್ಸ್ಟೇಷನ್ ನಿರ್ಮಾಣ ಕಾಮಗಾರಿಯನ್ನು 2023ರ ಡಿಸೆಂಬರ್ನಿಂದ ಕೈಗೆತ್ತಿಕೊಳ್ಳಲಾಗಿತ್ತು.
ಆಗಸ್ಟ್ 2026ರ ಮೊದಲ ವಾರದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಉಪಕೇಂದ್ರದಲ್ಲಿ ಎರಡು ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಿ, ತಲಾ 12,400 ಲೀಟರ್ ಆಯಿಲ್ ತುಂಬಿಸಲಾಗಿತ್ತು. ಆ.16ರಂದು ಪರಿಶೀಲಿಸಿದಾಗ ಎರಡೂ ಟ್ರಾನ್ಸ್ಫಾರ್ಮರ್ಗಳಲ್ಲಿ ಆಯಿಲ್ ಇರುವುದು ದೃಢಪಟ್ಟಿತ್ತು.
ಸೆ.30ರಂದು ಸಬ್ಸ್ಟೇಷನ್ ಉದ್ಘಾಟನೆ ಹಿನ್ನೆಲೆಯಲ್ಲಿ ಸೈಟ್ ಇಂಜಿನಿಯರ್, ಟ್ರಾನ್ಸ್ಫಾರ್ಮರ್ ತಯಾರಿಕಾ ಕಂಪನಿಯ ತಂತ್ರಜ್ಞರು ಹಾಗೂ ಇತರರು ಬೆಳಗ್ಗೆ 9.30ರ ಸುಮಾರಿಗೆ ಟ್ರಾನ್ಸ್ಫಾರ್ಮರ್ಗಳನ್ನು ಪರಿಶೀಲಿಸಿದಾಗ, ಒಂದು ಟ್ರಾನ್ಸ್ಫಾರ್ಮರ್ನಲ್ಲಿದ್ದ ಆಯಿಲ್ ಸಂಪೂರ್ಣವಾಗಿ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ದೂರುದಾರರ ಕಂಪನಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದ ಹಾಸನ ಜಿಲ್ಲೆ ಬೇಲೂರು ತಾಲೂಕಿನ ರಾಜನಸಿರಿಯೂರು ಗ್ರಾಮದ ಆಕಾಶ್ ಎಂಬಾತ ಹಾಸನದ ಆಲೂರು 66/11 ಕೆ.ವಿ. ಹಳೆಯ ಸಬ್ಸ್ಟೇಷನ್ನಲ್ಲಿ ಟವರ್ ಸೈಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಗಾಣದಾಳು ಸಬ್ಸ್ಟೇಷನ್ಗೂ ಆಗಾಗ್ಗೆ ಬಂದು ಹೋಗುತ್ತಿದ್ದ ಈತನನ್ನು ಕೆಲಸಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಕಾರಣಕ್ಕೆ ಸೆ.8ರಂದು ಕೆಲಸದಿಂದ ತೆಗೆದುಹಾಕಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೆ.21ರಂದು ಆಕಾಶ್ ತನ್ನ ಮೊಬೈಲ್ನಿಂದ ಕರೆ ಮಾಡಿ, ಸ್ನೇಹಿತನಿಗೆ ಟ್ರಾನ್ಸ್ಫಾರ್ಮರ್ ಆಯಿಲ್ ಬೇಕಾಗಿದೆ, ಕೊಡಬಹುದೇ ಎಂದು ಕೇಳಿದ್ದ. ಆದರೆ ತಾನು ಆಯಿಲ್ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಕರೆ ಕಡಿತಗೊಳಿಸಿದ್ದಾಗಿ ಪ್ರಜ್ವಲ್ ದೂರಿನಲ್ಲಿ ತಿಳಿಸಿದ್ದಾರೆ.
ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ ಆಯಿಲ್ ಅನ್ನು ಬೇರೆಯವರಿಗೆ ಮಾರಾಟ ಮಾಡುವ ಉದ್ದೇಶದಿಂದ ಆಕಾಶ್ ಕಳ್ಳತನ ಮಾಡಿರಬಹುದು ಎಂಬ ಅನುಮಾನವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆ.17ರಿಂದ ಸೆ.30ರ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ₹31 ಲಕ್ಷ ಮೌಲ್ಯದ 12,400 ಲೀಟರ್ ಟ್ರಾನ್ಸ್ಫಾರ್ಮರ್ ಆಯಿಲ್ ನಾಪತ್ತೆಯಾಗಿದೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Transformer oil worth ₹31 lakh stolen from MESCOM substation
Leave a comment