ಚಿಕ್ಕಮಗಳೂರು: ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡುತ್ತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಚಿಕ್ಕಮಗಳೂರು ನಗರದ ದಂಟರಮಕ್ಕಿ ನಿವಾಸಿ ಸಂತೋಷ (25) ಎಂದು ಗುರುತಿಸಲಾಗಿದೆ. ಇವರು ಗಾರೆ ಕೆಲಸ ಮಾಡಿಕೊಂಡಿದ್ದರು.
ಸೆ.13ರಂದು ಬೆಳಿಗ್ಗೆ ಸುಮಾರು 7 ಗಂಟೆಗೆ ಸಂತೋಷ ಅವರು ಕೆಲಸದ ನಿಮಿತ್ತ ಮಳಲೂರು ಗ್ರಾಮದಿಂದ ಗೌಡನಹಳ್ಳಿಯಲ್ಲಿರುವ ಮನೆಗೆ KA-18-V-3519 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಮಳಲೂರು–ಗೌಡನಹಳ್ಳಿ ಟಾರು ರಸ್ತೆಯಲ್ಲಿ ಇಷ್ಟ್ ಬಾರ್ನಿಂದ ಸುಮಾರು 100 ಮೀಟರ್ ದೂರದಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಸಂತೋಷ ಅವರ ತಲೆ ಹಾಗೂ ಮುಖಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಅಪಘಾತವನ್ನು ಗಮನಿಸಿದ ಆರದವಳ್ಳಿ ಗ್ರಾಮದ ರವಿ ಮತ್ತು ಸಾಗರ ಅವರು ತಕ್ಷಣ ಯಾವುದೋ ವಾಹನದಲ್ಲಿ ಗಾಯಾಳುವನ್ನು ಚಿಕ್ಕಮಗಳೂರಿನ ಎಂ.ಜಿ. ಆಸ್ಪತ್ರೆಗೆ ದಾಖಲಿಸಿದ್ದರು.
ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಸಂತೋಷ ಅವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 11 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು, ಸೆ.24ರಂದು ಬೆಳಿಗ್ಗೆ 8.11ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರ ಸಂಬಂಧಿ ಯೋಗೇಶ್ ಅವರು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸಂತೋಷ ಅವರ ತಂದೆ ಪ್ರಭಾಕರ ಅವರು ಆಸ್ಪತ್ರೆಯಲ್ಲಿ ಮಗನ ಆರೈಕೆಯಲ್ಲಿ ತೊಡಗಿದ್ದ ಕಾರಣ ದೂರು ನೀಡಲು ವಿಳಂಬವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Bike crashes into electric pole: Injured youth dies
Leave a comment