ಕಡೂರು: ಗ್ರಾಮೀಣ ಭಾಗದ ಕುಗ್ರಾಮಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಗ್ರಾಮಸ್ಥರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಘಟನೆ ಕಡೂರು ತಾಲೂಕಿನ ಕಬ್ಬಳ್ಳಿ ಗೇಟ್ ಬಳಿ ನಡೆದಿದೆ.
ಸಖರಾಯಪಟ್ಟಣ-ಬಾಣಾವರ ಸಂಪರ್ಕಿಸುವ ಪ್ರಮುಖ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದ ಸಾರ್ವಜನಿಕರು, ಕೆಎಸ್ಆರ್ಟಿಸಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬಳ್ಳಿ, ಗುಣಸಾಗರ, ಮಂಗೇನಹಳ್ಳಿ, ಸಿದ್ದಾಪುರ ಹಾಗೂ ಗೊಲ್ಲರಹಟ್ಟಿ ಗ್ರಾಮಗಳಿಗೆ ಸಮರ್ಪಕ ಬಸ್ ಸೌಲಭ್ಯವಿಲ್ಲದೆ ನಿತ್ಯ ನೂರಾರು ಮಂದಿ ಪರದಾಡುವಂತಾಗಿದೆ. ಅದರಲ್ಲೂ ಕಡೂರು ಹಾಗೂ ಚಿಕ್ಕಮಗಳೂರು ಪಟ್ಟಣಗಳಿಗೆ ವಿದ್ಯಾಭ್ಯಾಸಕ್ಕಾಗಿ ತೆರಳುವ ವಿದ್ಯಾರ್ಥಿಗಳು ಪ್ರತಿದಿನ ಸುಮಾರು ಆರು ಕಿ.ಮೀ. ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಸಾರಿಗೆ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿ, ಗಡುವು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಒಂದು ವಾರದ ಹಿಂದೆಯೂ ಇದೇ ಸ್ಥಳದಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದ್ದರು.
ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಕೆಎಸ್ಆರ್ಟಿಸಿ ಅಧಿಕಾರಿಗಳು ಮಂಗಳವಾರದಿಂದ ಬಸ್ ಸಂಚಾರ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ಅಂದು ಪ್ರಾಯೋಗಿಕವಾಗಿ ಬಸ್ ಸಂಚಾರವನ್ನೂ ನಡೆಸಲಾಗಿತ್ತು. ಆದರೆ ನಂತರ ಬಸ್ ಹಾಗೂ ಸಿಬ್ಬಂದಿ ಕೊರತೆಯ ನೆಪವೊಡ್ಡಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಅಧಿಕಾರಿಗಳ ಈ ನಡೆಗೆ ತೀವ್ರ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮತ್ತೊಮ್ಮೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಸಖರಾಯಪಟ್ಟಣ ಪೊಲೀಸರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಸಂಧಾನಕ್ಕೆ ಮುಂದಾದರೂ ಅದು ವಿಫಲವಾಯಿತು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
‘ಬಸ್ ಸೌಲಭ್ಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ’ ಎಂದು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.
Students and villagers take to the road for KSRTC buses
Leave a comment