ಕಡೂರು: ತೋಟದಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಸುಮಾರು ₹6.30 ಲಕ್ಷ ಮೌಲ್ಯದ 45 ಗ್ರಾಂ ತೂಕದ ಎರಡು ಎಳೆಯ ಬಂಗಾರದ ಸರವನ್ನು ವ್ಯಕ್ತಿಯೊಬ್ಬ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.4ರಂದು ನಡೆದಿದೆ.
ಕಡೂರು ತಾಲೂಕಿನ ಸಿ.ಜೆ. ನಂಜಮ್ಮ (ಪತಿ ಶಂಕರಲಿಂಗಪ್ಪ) ಅವರು ನೀಡಿರುವ ದೂರಿನ ಆಧಾರದ ಮೇಲೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ನಂಜಮ್ಮ ಅವರು ಸೆ.4ರಂದು ಬೆಳಗ್ಗೆ ಸುಮಾರು 11 ಗಂಟೆಗೆ ತಮ್ಮ ಮನೆಯ ಎರಡು ಹಸುಗಳನ್ನು ಮೇಯಿಸಲು ಗ್ರಾಮದ ಸಮೀಪದ ತೋಟಕ್ಕೆ ತೆರಳಿದ್ದರು. ಗ್ರಾಮದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿರುವ ಮತ್ತಿಘಟ್ಟಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ತಮ್ಮ ತೋಟದಲ್ಲಿ ಹಸುಗಳನ್ನು ಮೇಯಲು ಬಿಟ್ಟು, ತೆಂಗಿನ ಮರದ ನೆರಳಿನಲ್ಲಿ ಕುಳಿತಿದ್ದರು.
ಮಧ್ಯಾಹ್ನ ಸುಮಾರು 1.30ರ ವೇಳೆಗೆ ಕರಿಯನಹಳ್ಳಿ ಗ್ರಾಮದ ಕಡೆಯಿಂದ ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬ ತೋಟದ ಬಳಿ ಬೈಕ್ ನಿಲ್ಲಿಸಿದ್ದ. ಈ ವೇಳೆ ನಂಜಮ್ಮ ಅವರು ಆತನನ್ನು ಮಾತನಾಡಿಸಿ ಸಮಯ ಕೇಳಿದ್ದು, ಆತ 1.30 ಗಂಟೆಯಾಗಿದೆ ಎಂದು ತಿಳಿಸಿ ಮತ್ತಿಘಟ್ಟದ ಕಡೆಗೆ ತೆರಳಿದ್ದ ಎನ್ನಲಾಗಿದೆ.
ಸ್ವಲ್ಪ ಸಮಯದ ಬಳಿಕ ಅದೇ ವ್ಯಕ್ತಿ ಹಿಂದಿನಿಂದ ಬಂದು ನಂಜಮ್ಮ ಅವರ ಭುಜವನ್ನು ಒತ್ತಿಹಿಡಿದು, ಎದ್ದೇಳಲು ಬಿಡದೆ ಕುತ್ತಿಗೆಯಲ್ಲಿದ್ದ ಸುಮಾರು 45 ಗ್ರಾಂ ತೂಕದ ಎರಡು ಎಳೆಯ ಬಂಗಾರದ ಸರವನ್ನು ಕಿತ್ತುಕೊಂಡಿದ್ದಾನೆ. ಈ ವೇಳೆ ನಂಜಮ್ಮ ಅವರು ಕೂಗಾಡಿದರೂ ಆರೋಪಿ ಸರ ಕಿತ್ತುಕೊಂಡು ಅಲ್ಲಿಂದ ಓಡಿ ಹೋಗಿದ್ದಾನೆ.
ನಂತರ ನಂಜಮ್ಮ ಅವರು ಆರೋಪಿಯ ಹಿಂದೆ ಓಡಿದರಾದರೂ ವಯಸ್ಸಾದ ಕಾರಣ ಸ್ವಲ್ಪ ದೂರದಲ್ಲೇ ನಿಲ್ಲಬೇಕಾಯಿತು. ಆರೋಪಿ ಮುಂದೆ ನಿಲ್ಲಿಸಿದ್ದ ತನ್ನ ಬೈಕ್ ಏರಿ ಮತ್ತಿಘಟ್ಟ ಗ್ರಾಮದ ರಸ್ತೆಯ ಕಡೆಗೆ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಯು ಕೋಲು ಮುಖ, ಕಪ್ಪು ಮೈಬಣ್ಣ ಹೊಂದಿದ್ದು, ಕಾಫಿ ಬಣ್ಣದ ಶರ್ಟ್ ಧರಿಸಿದ್ದ ಎಂದು ನಂಜಮ್ಮ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಬಳಿಕ ಮನೆಗೆ ಹಿಂದಿರುಗಿದ ನಂಜಮ್ಮ ಅವರು ತಮ್ಮ ಮಕ್ಕಳಾದ ಸುರೇಶ್ ಹಾಗೂ ಶಿವಕುಮಾರ್ ಅವರಿಗೆ ವಿಷಯ ತಿಳಿಸಿ, ಅವರೊಂದಿಗೆ ಕಡೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕಳುವಾದ ಎರಡು ಎಳೆಯ ಬಂಗಾರದ ಸರದ ಅಂದಾಜು ಮೌಲ್ಯ ₹6,30,000 ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
Gold chain worth Rs 6.30 lakh stolen from woman’s neck in garden
Leave a comment