ಚಿಕ್ಕಮಗಳೂರು: ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಸೆ.21, 22 ಮತ್ತು 23ರಂದು ಮೂರು ದಿನಗಳ ವಿಶೇಷ ಅಧಿವೇಶನ ಕರೆದಿರುವುದನ್ನು ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಸ್ವಾಗತಿಸಿದೆ. ಈ ಅಧಿವೇಶನದಲ್ಲಿ ಮಲೆನಾಡಿನ ಎಲ್ಲ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಪಕ್ಷಭೇದ ಮರೆತು ಮಲೆನಾಡಿನ ಜನರ ಸಮಸ್ಯೆಗಳ ಕುರಿತು ನಿಖರವಾಗಿ ಹಾಗೂ ದೃಢವಾಗಿ ಧ್ವನಿ ಎತ್ತಬೇಕು ಎಂದು ಸಮಿತಿ ಅಧ್ಯಕ್ಷ ಎಸ್. ವಿಜಯ್ ಕುಮಾರ್ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ಅಧಿವೇಶನಕ್ಕೂ ಮುನ್ನ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಹೋರಾಟಗಾರರೊಂದಿಗೆ ಸಭೆ ನಡೆಸಿ, ಕಸ್ತೂರಿರಂಗನ್ ವರದಿಯಲ್ಲಿರುವ ನ್ಯೂನತೆಗಳ ಕುರಿತು ನಿರ್ದಿಷ್ಟ ವಿಚಾರಗಳನ್ನು ಸಂಗ್ರಹಿಸಿ, ಅಧಿವೇಶನದಲ್ಲಿ ಒಕ್ಕೊರಲಿನಿಂದ ಮಂಡಿಸಬೇಕು ಎಂದರು.
ಮಲೆನಾಡಿನ ರೈತರು ಅರಣ್ಯ ಸಂರಕ್ಷಣೆ ಹಾಗೂ ಪರಿಸರ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಬೋಳುಗುಡ್ಡಗಳಲ್ಲಿ ಗಿಡಗಳನ್ನು ನೆಟ್ಟು ಕೃಷಿ ಮಾಡುತ್ತಿರುವುದರಿಂದ ಹಸಿರು ಹೊದಿಕೆ ಹೆಚ್ಚಿದ್ದು, ಮಳೆ, ನದಿ-ತೊರೆಗಳ ಹರಿವು ಹಾಗೂ ಪರಿಸರ ಸಮತೋಲನಕ್ಕೆ ಕೊಡುಗೆ ನೀಡುತ್ತಿದ್ದಾರೆ. ಲಕ್ಷಾಂತರ ಮರಗಳನ್ನು ಬೆಳೆಸಿ ಶುದ್ಧ ಗಾಳಿ ಮತ್ತು ಆಮ್ಲಜನಕ ಒದಗಿಸುವ ಮಲೆನಾಡಿನ ಜನರ ಕೊಡುಗೆಯನ್ನು ವಿಧಾನಸಭೆಯಲ್ಲಿ ಸಮರ್ಥವಾಗಿ ಪ್ರಸ್ತಾಪಿಸಬೇಕು ಎಂದು ಹೇಳಿದರು.
ಜಾಗತಿಕ ತಾಪಮಾನ ಏರಿಕೆಗೆ ಯುದ್ಧ, ಹವಾನಿಯಂತ್ರಿತ ವ್ಯವಸ್ಥೆಗಳು, ಕಚೇರಿಗಳು, ವಾಹನಗಳು ಹಾಗೂ ಕೈಗಾರಿಕೆಗಳಿಂದ ಹೆಚ್ಚುತ್ತಿರುವ ಉಷ್ಣಾಂಶ ಸೇರಿದಂತೆ ಹಲವು ಕಾರಣಗಳಿವೆ. ಪರಿಸರ ಸಂರಕ್ಷಣೆಯ ಹೊಣೆಯನ್ನು ಕೇವಲ ಮಲೆನಾಡಿನ ರೈತರ ಮೇಲೆ ಹೊರಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕೇರಳ ಮಾದರಿಯಲ್ಲಿ ಭೂವಿಭಜನೆಗೆ ಆಗ್ರಹ
ಕೇರಳ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವೇ ಭೂವಿಭಜನೆ ನಡೆಸಿ, ಭೌತಿಕ ಸರ್ವೆ ಮೂಲಕ ಕೃತಕ ಹಾಗೂ ಸ್ವಾಭಾವಿಕ ಅರಣ್ಯಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸಬೇಕು. ಗ್ರಾಮ ಮತ್ತು ಅರಣ್ಯದ ಗಡಿಗಳನ್ನು ಗುರುತಿಸಿ, ಕೃಷಿಭೂಮಿ, ಗೋಮಾಳ, ಶಾಲೆ, ಆಟದ ಮೈದಾನ, ಸ್ಮಶಾನ ಹಾಗೂ ಇತರ ಸಾರ್ವಜನಿಕ ಉದ್ದೇಶದ ಭೂಮಿಗಳನ್ನು ಕಸ್ತೂರಿರಂಗನ್ ವರದಿಯ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಸಮಿತಿ ಆಗ್ರಹಿಸಿದೆ.
ನೈಜ ಅರಣ್ಯ ಮತ್ತು ಉದ್ದೇಶಿತ ಅರಣ್ಯ ಪ್ರದೇಶಗಳನ್ನು ಮಾತ್ರ ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸಿ, ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಬಫರ್ ಜೋನ್ ಅನ್ನು *‘ಶೂನ್ಯ ಕಿ.ಮೀ.’*ಗೆ ನಿಗದಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ.
ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಚುನಾಯಿತ ಪ್ರತಿನಿಧಿಗಳು ಒಗ್ಗಟ್ಟಿನಿಂದ ಈ ವಿಚಾರವನ್ನು ಚರ್ಚಿಸಿ, ಮಲೆನಾಡಿನ ಜನರ ಹಿತ ಕಾಪಾಡುವ ರೀತಿಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ವಿಜಯ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕರಾದ ಕೆ.ಕೆ. ರಘು, ವಾಸು ಪೂಜಾರಿ, ಪ್ರಕಾಶ್, ಹರೀಶ್, ನಾಗೇಶ್, ಮೋಹನ್ ಹಾಗೂ ಮಲ್ಲಪ್ಪ ಉಪಸ್ಥಿತರಿದ್ದರು.
Urges to forget party differences and discuss the problems of the Malnadu region in the special session
Leave a comment