Home namma chikmagalur chikamagalur ಸಿ.ಎಸ್. ಸುಮಿತ್ರಾಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ವಿಶೇಷ ಪ್ರಶಸ್ತಿ
chikamagalurHomeLatest Newsnamma chikmagalur

ಸಿ.ಎಸ್. ಸುಮಿತ್ರಾಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ವಿಶೇಷ ಪ್ರಶಸ್ತಿ

Share
Share

ಚಿಕ್ಕಮಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಗಳನ್ನು ಉಳಿಸಿ, ಅವುಗಳನ್ನು ಮಾದರಿ ಶಾಲೆಗಳನ್ನಾಗಿ ರೂಪಿಸುವಲ್ಲಿ ನಿರಂತರವಾಗಿ ಶ್ರಮಿಸಿರುವ ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕಿ ಸಿ.ಎಸ್. ಸುಮಿತ್ರ ಅವರ ಸೇವೆಯನ್ನು ಗುರುತಿಸಿ ಈ ಬಾರಿಯ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಯಲ್ಲಿ ವಿಶೇಷ ಪುರಸ್ಕಾರ ನೀಡಲಾಗಿದೆ.

1996-97ರ ಅವಧಿಯಲ್ಲಿ ಚಿಕ್ಕಮಗಳೂರು ತಾಲೂಕಿನ ಗಾಳಿಪೇಟೆ ಸರ್ಕಾರಿ ಶಾಲೆ ಸ್ವಂತ ನಿವೇಶನ ಹಾಗೂ ಕಟ್ಟಡವಿಲ್ಲದೆ, ಕೇವಲ ಏಳು ವಿದ್ಯಾರ್ಥಿಗಳನ್ನು ಹೊಂದಿ ಮುಚ್ಚುವ ಸ್ಥಿತಿಯಲ್ಲಿತ್ತು. ಕನ್ನಡ ಮಾಧ್ಯಮದ ಈ ಶಾಲೆಯಲ್ಲಿ ತಮಿಳು ಶಾಲೆಯ ಒಂದು ಕೊಠಡಿಯಲ್ಲಿ ತರಗತಿಗಳು ನಡೆಯುತ್ತಿದ್ದವು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಶಾಲೆಗೆ ಜೀವ ತುಂಬಲು ಮುಂದಾದ ಸುಮಿತ್ರ ಅವರು ಗ್ರಾಮಸ್ಥರು, ದಾನಿಗಳು, ಪೋಷಕರು, ಸಹೋದ್ಯೋಗಿಗಳು ಹಾಗೂ ಶಿಕ್ಷಣ ಇಲಾಖೆಯ ಸಹಕಾರ ಪಡೆದು ಸ್ವಂತ ಕಟ್ಟಡ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಶಾಲೆಯ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಮನೆಮನೆಗೆ ತೆರಳಿ ಪೋಷಕರನ್ನು ಸಂಪರ್ಕಿಸುವುದರ ಜತೆಗೆ, ಗಾಳಿಪೇಟೆಯ ಸುತ್ತಮುತ್ತಲಿನ ಮೂರು-ನಾಲ್ಕು ಕಿ.ಮೀ. ವ್ಯಾಪ್ತಿಯ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮಕ್ಕಳನ್ನೂ ಶಾಲೆಗೆ ಕರೆತಂದರು. ಪರಿಣಾಮವಾಗಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿ ಶಾಲೆ ತಾಲೂಕಿನಲ್ಲಿ ಮಾದರಿ ಶಾಲೆಯಾಗಿ ಗುರುತಿಸಿಕೊಳ್ಳುವಂತಾಯಿತು. ಈ ಕಾರ್ಯದಲ್ಲಿ ಸಹಶಿಕ್ಷಕರಾದ ಅರ್ಜು ಮಂದ ಅಲ್ಮಾಸ್ ಅವರು ಸಹ ಹೆಗಲುಕೊಟ್ಟು ನಿಂತರು.

ತಮ್ಮ ಕಾರ್ಯಕ್ಷಮತೆಯಿಂದ ಬಡ್ತಿ ಪಡೆದು ಮುಖ್ಯ ಶಿಕ್ಷಕಿಯಾಗಿ ಪದೋನ್ನತಿ ಹೊಂದಿದ ಸುಮಿತ್ರ ಅವರು ಚಿಕ್ಕಮಗಳೂರು ತಾಲೂಕಿನ ರಾಮದೇವರಹಳ್ಳಿ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದರು. ವಿದ್ಯಾರ್ಥಿಗಳ ಕೊರತೆಯಿಂದಾಗಿ ಆ ಶಾಲೆಯ ಉಳಿವಿಗೂ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಸಹೋದ್ಯೋಗಿಗಳೊಂದಿಗೆ ಅಕ್ಕಪಕ್ಕದ ನಾಲ್ಕೈದು ಗ್ರಾಮಗಳಿಗೆ ತೆರಳಿ ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತಂದರು. ಆಕರ್ಷಕ ಬೋಧನಾ ವಿಧಾನ, ಆಟೋಟ, ಗುಣಮಟ್ಟದ ಬಿಸಿಯೂಟ ಹಾಗೂ ಉತ್ತಮ ಶೈಕ್ಷಣಿಕ ವಾತಾವರಣದ ಮೂಲಕ ಪೋಷಕರಲ್ಲಿ ಶಾಲೆಯ ಬಗ್ಗೆ ವಿಶ್ವಾಸ ಮೂಡಿಸಿದರು.

ರಾಮದೇವರಹಳ್ಳಿ ಶಾಲೆಯಲ್ಲಿ ಮೊದಲ ಬಾರಿಗೆ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿಯನ್ನು ಸಹೋದ್ಯೋಗಿಗಳು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಯಶಸ್ವಿಯಾಗಿ ಆಯೋಜಿಸಿದರು. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜತೆಗೆ ಕ್ರೀಡೆ ಮತ್ತು ವಿವಿಧ ಸಹಪಠ್ಯ ಚಟುವಟಿಕೆಗಳಲ್ಲಿ ಸಾಧನೆ ಮಾಡಲು ಪೂರಕ ವಾತಾವರಣ ನಿರ್ಮಿಸಿದರು.

138 ವರ್ಷಗಳ ಶಾಲೆಗೆ ಹೊಸ ರೂಪ

ನಂತರ ಅಂಬಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ವರ್ಗಾವಣೆಗೊಂಡ ಸುಮಿತ್ರ ಅವರು, ಕನ್ನಡದ ಹೆಸರಾಂತ ಸಾಹಿತಿ ಎ.ಆರ್. ಕೃಷ್ಣಶಾಸ್ತ್ರಿ ಅವರು ಓದಿದ ಶಾಲೆ ಎಂಬ ಹೆಮ್ಮೆಯಿರುವ 138 ವರ್ಷಗಳಷ್ಟು ಹಳೆಯ ಶಾಲೆಗೆ ಹೊಸ ರೂಪ ನೀಡುವಲ್ಲಿ ಯಶಸ್ವಿಯಾದರು.

ಸಹೋದ್ಯೋಗಿಗಳು, ಗ್ರಾಮಸ್ಥರು ಹಾಗೂ ಶಿಕ್ಷಣ ಇಲಾಖೆಯ ಸಹಕಾರ ಪಡೆದು ಇಲಾಖೆಯಿಂದ ₹50 ಲಕ್ಷ ಅನುದಾನ ತಂದು ಐದು ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಿದರು. ಆರು ಹಳೆಯ ಕೊಠಡಿಗಳನ್ನು ದುರಸ್ತಿಗೊಳಿಸಿ ಟೈಲ್ಸ್ ಅಳವಡಿಸಿ, ಸುಣ್ಣ-ಬಣ್ಣ ಮಾಡಿಸಿ ಶಾಲೆಗೆ ಹೊಸ ಕಳೆ ತಂದರು.

ವಿಶಾಲ ಆಟದ ಮೈದಾನ ಹೊಂದಿರುವ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ಸಹಕಾರದಿಂದ ಸುಮಾರು ₹7 ಲಕ್ಷ ವೆಚ್ಚದಲ್ಲಿ ವಾಲಿಬಾಲ್, ಥ್ರೋಬಾಲ್, ಕಬಡ್ಡಿ ಹಾಗೂ ಖೋ-ಖೋ ಅಂಕಣಗಳನ್ನು ನಿರ್ಮಿಸಲಾಗಿದೆ.

ದಾನಿಗಳು, ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಶಾಲೆಗೆ ಅಗತ್ಯವಾದ ಹಲವು ಸೌಲಭ್ಯಗಳನ್ನು ಕೊಡುಗೆಯಾಗಿ ಪಡೆಯಲಾಗಿದೆ. ಸರ್ವೋದಯ ಸೇವಾ ಸಂಸ್ಥೆಯಿಂದ ಸುಮಾರು ₹1 ಲಕ್ಷ ಮೌಲ್ಯದ ವಿದ್ಯಾರ್ಥಿಗಳ ಪೀಠೋಪಕರಣ, ವಿವಿಧ ದಾನಿಗಳಿಂದ ₹20 ಸಾವಿರ ಮೌಲ್ಯದ ಕಚೇರಿ ಪೀಠೋಪಕರಣ, ಬೆಂಗಳೂರಿನ ಪ್ರಯೋಗ ಸಂಸ್ಥೆಯಿಂದ ಸುಮಾರು ₹3.5 ಲಕ್ಷ ಮೌಲ್ಯದ ವಿಜ್ಞಾನ ಪ್ರಯೋಗಾಲಯ, ಬೆಂಗಳೂರಿನ ದಾನಿಗಳಿಂದ ₹60 ಸಾವಿರ ಮೌಲ್ಯದ ಕುಡಿಯುವ ನೀರಿನ ಫಿಲ್ಟರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಶಾಲೆಗೆ ಒದಗಿಸಲಾಗಿದೆ.

ಬೆಂಗಳೂರಿನ ಇಡಿಆರ್‌ಟಿ ಸಂಸ್ಥೆಯಿಂದ ಪ್ರತಿವರ್ಷ ಸುಮಾರು ₹30 ಸಾವಿರ ಮೌಲ್ಯದ ಕಲಿಕಾ ಸಾಮಗ್ರಿಗಳನ್ನು ಪಡೆಯಲಾಗುತ್ತಿದ್ದು, ಚಿಕ್ಕಮಗಳೂರಿನ ಎಸ್‌ಕೆಟಿಎಂಟಿ ಸ್ಟೀಲ್ ಸಂಸ್ಥೆಯಿಂದ ₹20 ಸಾವಿರ ಮೌಲ್ಯದ ಕಲಿಕಾ ಸಾಮಗ್ರಿಗಳು ಹಾಗೂ ₹10 ಸಾವಿರ ಮೌಲ್ಯದ ಕ್ರೀಡಾ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ ವಿದ್ಯಾರ್ಥಿಗಳ ಬಿಸಿಯೂಟಕ್ಕಾಗಿ 150 ತಟ್ಟೆಗಳನ್ನು ಸಹ ಪಡೆಯಲಾಗಿದೆ.

ತಂತ್ರಜ್ಞಾನ ಆಧಾರಿತ ಕಲಿಕೆಗೆ ಆದ್ಯತೆ

ವಿದ್ಯಾರ್ಥಿಗಳು ಸಂತೋಷದಿಂದ ಕಲಿಯುವ ವಾತಾವರಣ ನಿರ್ಮಿಸುವ ಉದ್ದೇಶದಿಂದ ಎಲ್ಲ ತರಗತಿ ಕೊಠಡಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿ ಫ್ಯಾನ್ ಅಳವಡಿಸಲಾಗಿದೆ. ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ದಾನಿಗಳ ಸಹಕಾರದಿಂದ ತರಗತಿಗೊಂದು ಟಿವಿ ಅಳವಡಿಸಲಾಗಿದ್ದು, ವ್ಯಾಕರಣ, ಪ್ರಯೋಗಗಳು ಹಾಗೂ ಇಂಗ್ಲಿಷ್ ಭಾಷೆಯ ನವೀನ ಕಲಿಕೆಗೆ ಅವುಗಳನ್ನು ಬಳಸಲಾಗುತ್ತಿದೆ. ಪ್ರತಿಯೊಂದು ತರಗತಿ ಕೊಠಡಿಗೂ ಅಲ್ಮೆರಾ ಹಾಗೂ ರ‍್ಯಾಕ್‌ಗಳನ್ನು ದಾನಿಗಳ ನೆರವಿನಿಂದ ಒದಗಿಸಲಾಗಿದೆ.

ಶಾಲೆಯು ಅತ್ಯುತ್ತಮ ಸಹಶಿಕ್ಷಕರ ತಂಡವನ್ನು ಹೊಂದಿದ್ದು, ಪಠ್ಯದ ಜತೆಗೆ ಕ್ರೀಡೆ, ಪ್ರತಿಭಾ ಕಾರಂಜಿ, ಹೊರಸಂಚಾರ, ಶೈಕ್ಷಣಿಕ ಪ್ರವಾಸ, ಇಕೋ ಕ್ಲಬ್, ಇನ್ಸ್‌ಪೈರ್ ಅವಾರ್ಡ್, ಶಾಲಾ ಮಂತ್ರಿಮಂಡಲ, ಸ್ಕೌಟ್ಸ್‌ ಮತ್ತು ಗೈಡ್ಸ್‌, ಗಣಿತ ಕ್ಲಬ್, ವಿಜ್ಞಾನ ಕ್ಲಬ್ ಸೇರಿದಂತೆ ವಿವಿಧ ಸಹಪಠ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪೂರಕ ವಾತಾವರಣ ನಿರ್ಮಿಸಲಾಗಿದೆ.

ಅಡುಗೆ ಸಿಬ್ಬಂದಿಯ ಸಹಕಾರದಿಂದ ಶಾಲೆಯಲ್ಲಿ ಶುಚಿ-ರುಚಿಯಾದ ಬಿಸಿಯೂಟವನ್ನು ಮಕ್ಕಳಿಗೆ ಸಮರ್ಪಕವಾಗಿ ಒದಗಿಸಲಾಗುತ್ತಿದೆ. ಕಳೆದ ಸಾಲಿನಿಂದ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನೂ ಆರಂಭಿಸಲಾಗಿದ್ದು, ಇದೀಗ ಒಂದರಿಂದ ಏಳನೇ ತರಗತಿಯವರೆಗೆ ಒಟ್ಟು 135 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

31 ವರ್ಷಗಳ ಶೈಕ್ಷಣಿಕ ಸೇವೆ

ಯಗಟಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದು ವರ್ಷ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಸುಮಿತ್ರ ಅವರು, ಹಿರೇಗರ್ಜೆ ಸೇರಿದಂತೆ ವಿವಿಧ ಶಾಲೆಗಳಲ್ಲಿ ಪ್ರಭಾರಿ ಮುಖ್ಯ ಶಿಕ್ಷಕಿಯಾಗಿ 16 ವರ್ಷ ಹಾಗೂ ಬಡ್ತಿ ಪಡೆದ ಮುಖ್ಯ ಶಿಕ್ಷಕಿಯಾಗಿ 15 ವರ್ಷ ಸೇವೆ ಸಲ್ಲಿಸಿದ್ದಾರೆ.

ಪೋಷಕರು, ವಿದ್ಯಾರ್ಥಿಗಳು, ಸಹಶಿಕ್ಷಕರು, ಗ್ರಾಮಸ್ಥರು, ಎಸ್‌ಡಿಎಂಸಿ ಹಾಗೂ ಶಿಕ್ಷಣ ಇಲಾಖೆಯ ಸಹಕಾರವನ್ನು ಪಡೆದುಕೊಂಡು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಸಿ.ಎಸ್. ಸುಮಿತ್ರ ಅವರ ಸೇವೆಯನ್ನು ಇಲಾಖೆ ಗುರುತಿಸಿ ಈ ಬಾರಿಯ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಯಲ್ಲಿ ವಿಶೇಷ ಪುರಸ್ಕಾರ ನೀಡಿರುವುದು ಅಂಬಳೆ ಶಾಲೆ ಸೇರಿದಂತೆ ಸರ್ಕಾರಿ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತದಲ್ಲಿದ್ದ ಶಾಲೆಗಳನ್ನು ಉಳಿಸಿ, ಅವುಗಳಿಗೆ ಮೂಲಸೌಕರ್ಯ ಕಲ್ಪಿಸಿ, ದಾಖಲಾತಿ ಹೆಚ್ಚಿಸಿ, ಗುಣಮಟ್ಟದ ಶಿಕ್ಷಣದ ಜತೆಗೆ ಕ್ರೀಡೆ ಹಾಗೂ ಸಹಪಠ್ಯ ಚಟುವಟಿಕೆಗಳಿಗೆ ಒತ್ತು ನೀಡಿರುವ ಸುಮಿತ್ರ ಅವರ ಸೇವೆ ಸರ್ಕಾರಿ ಶಾಲೆಗಳ ಪುನರುಜ್ಜೀವನಕ್ಕೆ ಮಾದರಿಯಾಗಿದೆ.

C.S. Sumitra gets special award for best teacher at district level

Share

Leave a comment

Leave a Reply

Your email address will not be published. Required fields are marked *

Don't Miss

ಮನೆಯ ಹಿಂಭಾಗದಲ್ಲಿ ಬೆಳೆದಿದ್ದ 12.250 ಕೆ.ಜಿ. ಹಸಿ ಗಾಂಜಾ ವಶ

ತರೀಕೆರೆ: ತಾಲ್ಲೂಕಿನ ಬೆಟ್ಟತಾವರೆಕೆರೆ ಗ್ರಾಮದ ನಿವಾಸಿ ದಿನೇಶ್ ಎಂಬುವವರು ತಮ್ಮ ಮನೆಯ ಹಿಂಭಾಗದಲ್ಲಿ ಬೆಳೆದಿದ್ದ ಸುಮಾರು ೧೨.೨೫೦ ಕೆ.ಜಿ. ತೂಕದ ಹಸಿ ಗಾಂಜಾವನ್ನು ತರೀಕೆರೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಿಎಸ್‌ಐ ಆನಂದ್ ಡಿ....

ಪತ್ನಿ ಕೊಲೆ ಮಾಡಿದ ಗಂಡನಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು: ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು ₹75 ಸಾವಿರ ದಂಡ...

Related Articles

ದೇಶವಿರೋಧಿ ಮನಸ್ಥಿತಿ ವಿರುದ್ಧ ಕಠಿಣ ಕ್ರಮ ಅಗತ್ಯ

ಮೂಡಿಗೆರೆ : ಕಾಫಿನಾಡಿನ ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ಹಾಕಿ ವೈರಲ್ ಮಾಡಿದ್ದ ಪ್ರಕರಣಕ್ಕೆ...

ಕೆಎಸ್‌ಆರ್‌ಟಿಸಿ ಬಸ್‌ಗಾಗಿ ರಸ್ತೆಗಿಳಿದ ವಿದ್ಯಾರ್ಥಿಗಳು-ಗ್ರಾಮಸ್ಥರು

ಕಡೂರು: ಗ್ರಾಮೀಣ ಭಾಗದ ಕುಗ್ರಾಮಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು...

ವಿಶೇಷ ಅಧಿವೇಶನದಲ್ಲಿ ಪಕ್ಷಭೇದ ಮರೆತು ಮಲೆನಾಡಿನ ಸಮಸ್ಯೆ ಚರ್ಚಿಸಲು ಒತ್ತಾಯ

ಚಿಕ್ಕಮಗಳೂರು: ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಸೆ.21, 22 ಮತ್ತು 23ರಂದು ಮೂರು...

ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ಪಲ್ಟಿ-ಮಹಿಳೆ ಸಾವು

ಎನ್.ಆ‌ರ್.ಪುರ : ಅನಾರೋಗ್ಯದಿಂದ ಬಳಲುತ್ತಿದ್ದ ಸಂಬಂಧಿಕರನ್ನು ಮಾತನಾಡಿಸಿಕೊಂಡು ಊರಿಗೆ ಮರಳುತ್ತಿದ್ದ ಕುಟುಂಬಕ್ಕೆ ಮಾರ್ಗಮಧ್ಯೆಯೇ ಭೀಕರ ವಿಧಿ...