ಕಡೂರು: ತಾಲೂಕಿನ ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾಪುರ ಗ್ರಾಮದ ಶಿವಗನಾಯ್ಕ ಅವರ ತೋಟದಲ್ಲಿ ಅಕ್ರಮವಾಗಿ ಅಂದರ್–ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ನಾಲ್ವರನ್ನು ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಆ.25ರಂದು ಮಧ್ಯರಾತ್ರಿ ಯಗಟಿ ಠಾಣೆ ಪಿಎಸ್ಐ ಶಾಹಿದ್ ಅಫ್ರಿದಿ ಅವರಿಗೆ ಸೀತಾಪುರ ಗ್ರಾಮದ ತೋಟವೊಂದರಲ್ಲಿ 3–4 ಮಂದಿ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಇಸ್ಪೀಟ್ ಆಡುತ್ತಿರುವ ಕುರಿತು ಖಚಿತ ಮಾಹಿತಿ ದೊರೆತಿತ್ತು. ಮಾಹಿತಿ ಆಧರಿಸಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು, ಪಂಚರ ಸಮ್ಮುಖದಲ್ಲಿ ತೋಟದ ಬಳಿ ಮರೆಯಲ್ಲಿ ನಿಂತು ಪರಿಶೀಲಿಸಿದಾಗ ನಾಲ್ವರು ಟಾರ್ಚ್ ಬೆಳಕಿನಲ್ಲಿ ಇಸ್ಪೀಟ್ ಆಟವಾಡುತ್ತಿರುವುದು ಕಂಡುಬಂದಿದೆ.
ಪೊಲೀಸರು ದಾಳಿ ನಡೆಸಿ ಸೀತಾಪುರ ಗ್ರಾಮದ ಮಹಲಿಂಗನಾಯ್ಕ (50), ಪ್ರದೀಪ (32), ಮುಗುಳಿಕಟ್ಟೆ ಗ್ರಾಮದ ರಂಗಪ್ಪ (32) ಹಾಗೂ ಸೀತಾಪುರ ಗ್ರಾಮದ ಚಂದನ್ (26) ಅವರನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳ ಪರಿಶೀಲನೆ ವೇಳೆ ಕಪ್ಪು ಬಣ್ಣದ ಪ್ಲಾಸ್ಟಿಕ್ ಟಾರ್ಪಲ್, ಟಾರ್ಚ್, ಇಸ್ಪೀಟ್ ಎಲೆಗಳು ಹಾಗೂ ನಗದು ಹಣ ಪತ್ತೆಯಾಗಿದೆ. ಆರೋಪಿಗಳ ಬಳಿಯಿಂದ ಒಟ್ಟು ₹35,590 ನಗದು, 52 ಇಸ್ಪೀಟ್ ಎಲೆಗಳು, ಒಂದು ಟಾರ್ಚ್ ಹಾಗೂ ಕಪ್ಪು ಬಣ್ಣದ ಪ್ಲಾಸ್ಟಿಕ್ ಟಾರ್ಪಲ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಯಾವುದೇ ಪರವಾನಗಿ ಇಲ್ಲದೆ ಹಣವನ್ನು ಪಣವಾಗಿಟ್ಟು ಅಂದರ್–ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದುದಾಗಿ ಪೊಲೀಸರ ವಿಚಾರಣೆಯಲ್ಲಿ ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪಂಚರ ಸಮಕ್ಷಮದಲ್ಲಿ ರಾತ್ರಿ 12.30ರಿಂದ 1.15ರವರೆಗೆ ಮಹಜರು ನಡೆಸಿ, ವಶಪಡಿಸಿಕೊಂಡ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಬಳಿಕ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ, ವಶಪಡಿಸಿಕೊಂಡ ಮಾಲುಗಳೊಂದಿಗೆ ಪೊಲೀಸರು ಯಗಟಿ ಠಾಣೆಗೆ ಮರಳಿದ್ದಾರೆ.
ಈ ಸಂಬಂಧ ಯಗಟಿ ಪೊಲೀಸ್ ಠಾಣೆಯಲ್ಲಿ ಮೊ.ನಂ.100/2026, ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
Four arrested in illegal ispeet gambling in Sitapur
Leave a comment