ಕಡೂರು: ಕಷ್ಟದ ಸಮಯದಲ್ಲಿ ಒಡವೆಗಳನ್ನು ಅಡವಿಟ್ಟು ಹಣ ಪಡೆದು ಬಳಿಕ ಬಿಡಿಸಿಕೊಡುವುದಾಗಿ ನಂಬಿಸಿ ಮಹಿಳೆಯಿಂದ ₹93,500 ಮೌಲ್ಯದ 17 ಗ್ರಾಂ ಚಿನ್ನಾಭರಣ ಪಡೆದು ವಾಪಸ್ ನೀಡದೆ ವಂಚಿಸಿರುವ ಆರೋಪದ ಮೇಲೆ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಾಸೂರು ಗ್ರಾಮದ ಶ್ವೇತಾ (30) ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಮೈಸೂರು ಮೂಲದ ಸುರೇಶ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಏಪ್ರಿಲ್ 2026ರಲ್ಲಿ ಶ್ವೇತಾ ಅವರಿಗೆ ಮೊಬೈಲ್ನ ಫ್ರೆಂಡ್ ಆಪ್ ಮೂಲಕ ಸುರೇಶ್ ಪರಿಚಯವಾಗಿದ್ದು, ಬಳಿಕ ಆತ ಆಗಾಗ್ಗೆ ದೂರವಾಣಿ ಮೂಲಕ ಮಾತನಾಡುತ್ತಿದ್ದ. ತನ್ನ ತಂದೆಗೆ ಅಪಘಾತವಾಗಿ ಕಾಲು ಮುರಿದಿದ್ದು, ತಾಯಿಯ ಆರೋಗ್ಯವೂ ಸರಿಯಿಲ್ಲ. ಹೀಗಾಗಿ ಹಣದ ಅಗತ್ಯವಿದೆ ಎಂದು ಸುರೇಶ್ ಹೇಳಿದ್ದಾನೆ ಎನ್ನಲಾಗಿದೆ.
ತಮ್ಮ ಬಳಿ ಹಣವಿಲ್ಲ ಎಂದು ಶ್ವೇತಾ ತಿಳಿಸಿದಾಗ, ಒಡವೆಗಳನ್ನು ನೀಡಿದರೆ ಅವುಗಳನ್ನು ಅಡವಿಟ್ಟು ಹಣ ಪಡೆದು, ಬಳಿಕ ತಾನೇ ಒಡವೆಗಳನ್ನು ಬಿಡಿಸಿಕೊಡುವುದಾಗಿ ಸುರೇಶ್ ಭರವಸೆ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಮಾತನ್ನು ನಂಬಿದ ಶ್ವೇತಾ ಅವರು ಮೇ 15ರಂದು ಸುರೇಶ್ ಕಳುಹಿಸಿದ್ದ ಆತನ ಸಹೋದರನಿಗೆ ಚಿಕ್ಕಬಾಸೂರು ಗೇಟ್ ಬಳಿ 11 ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆಗಳನ್ನು ನೀಡಿದ್ದರು ಎನ್ನಲಾಗಿದೆ. ಮರುದಿನ ಸುರೇಶ್ ತನ್ನ ಸಹೋದರನಿಂದ ಒಡವೆಗಳನ್ನು ಪಡೆದಿರುವುದಾಗಿ ಮೊಬೈಲ್ ಸಂದೇಶ ಕಳುಹಿಸಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸುಮಾರು ಒಂದು ವಾರದ ಬಳಿಕ ಮತ್ತೆ ಕರೆ ಮಾಡಿದ ಸುರೇಶ್, ತಾನು ಕುಕ್ಕರ್ ಫ್ಯಾಕ್ಟರಿ ನಡೆಸುತ್ತಿದ್ದು ಹಣದ ಅಗತ್ಯವಿದೆ. ಇನ್ನಷ್ಟು ಒಡವೆಗಳಿದ್ದರೆ ನೀಡುವಂತೆ ಕೇಳಿಕೊಂಡಿದ್ದಾನೆ ಎನ್ನಲಾಗಿದೆ. ಮೊದಲೇ ಪಡೆದ ಒಡವೆಗಳನ್ನೂ ಒಟ್ಟಿಗೆ ಬಿಡಿಸಿಕೊಡುವುದಾಗಿ ಭರವಸೆ ನೀಡಿದ್ದರಿಂದ ಶ್ವೇತಾ ಅವರು ಮೇ 22ರಂದು ಮತ್ತೊಮ್ಮೆ ಸುರೇಶ್ನ ಸಹೋದರನಿಗೆ 6 ಗ್ರಾಂ ತೂಕದ ಎರಡು ಜೊತೆ ಚಿನ್ನದ ಓಲೆಗಳನ್ನು ನೀಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದಾದ ಬಳಿಕ 15–20 ದಿನಗಳ ಕಾಲ ಸುರೇಶ್ ಸಂಪರ್ಕದಲ್ಲಿದ್ದ. ಒಡವೆಗಳನ್ನು ಬಿಡಿಸಿಕೊಡುವಂತೆ ಶ್ವೇತಾ ಕೇಳಿದಾಗ, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಹಲವು ಬಾರಿ ಕರೆ ಮಾಡಿದರೂ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಮ್ಮಿಂದ ಒಟ್ಟು 17 ಗ್ರಾಂ ತೂಕದ, ಸುಮಾರು ₹93,500 ಮೌಲ್ಯದ ಚಿನ್ನಾಭರಣ ಪಡೆದು ವಾಪಸ್ ನೀಡದೆ ಮೋಸ ಮಾಡಿರುವ ಸುರೇಶ್ನನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಶ್ವೇತಾ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನ ಮೇರೆಗೆ ಯಗಟಿ ಪೊಲೀಸ್ ಠಾಣೆಯಲ್ಲಿ ಮೊ.ನಂ. 96/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ
Woman cheated by taking 17 grams of gold jewellery worth ₹93500
Leave a comment