ಮೂಡಿಗೆರೆ : ವಾರಾಂತ್ಯದ ಮಜಾ ಕಳೆಯಲು ಬೆಟ್ಟಗುಡ್ಡಗಳತ್ತ ಮುಖ ಮಾಡಿದ ಚಾರಣಪ್ರಿಯರಿಗೆ ನಿರಾಶೆಯ ಜೊತೆಗೆ ಕಾಡಿನ ನಡುವೆ ದಿಕ್ಕು ತೋಚದ ಪರಿಸ್ಥಿತಿ ಎದುರಾಗಿದೆ.
ಕಳೆದ ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಪ್ರಸಿದ್ಧ ಎತ್ತಿನಭುಜ ಚಾರಣವನ್ನು ಯಾವುದೇ ಪೂರ್ವ ಸಿದ್ಧತೆ ಹಾಗೂ ಕನಿಷ್ಠ ಮುಂಜಾಗ್ರತಾ ಕ್ರಮಗಳಿಲ್ಲದೆ ಅರಣ್ಯ ಇಲಾಖೆ ಪುನರಾರಂಭಿಸಿರುವುದು ಪ್ರವಾಸಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಆನ್ಲೈನ್ ಮೂಲಕ ಮುಂಗಡ ಶುಲ್ಕ ಪಾವತಿಸಿ ಉತ್ಸಾಹದಿಂದ ಬಂದಿದ್ದ ನೂರಾರು ಪ್ರವಾಸಿಗರು, ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಅರಣ್ಯ ಸಿಬ್ಬಂದಿಯ ಬೇಜವಾಬ್ದಾರಿತನವನ್ನು ಎದುರಿಸುವಂತಾಗಿದೆ. ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (SOP) ಸಂಪೂರ್ಣವಾಗಿ ಗಾಳಿಗೆ ತೂರಿರುವ ಇಲಾಖೆಯು, 5 ಕಿಲೋಮೀಟರ್ ಚಾರಣಕ್ಕೆ 300 ರೂಪಾಯಿ ಪ್ರವೇಶ ಶುಲ್ಕ ಹಾಗೂ ಪ್ರತಿ ಗೈಡ್ಗೆ 75 ರೂಪಾಯಿ ಪ್ರತ್ಯೇಕ ದರವನ್ನು ಕಡ್ಡಾಯವಾಗಿ ವಸೂಲಿ ಮಾಡುತ್ತಿದೆ.
ಆದರೆ, ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು ಸ್ಥಳದಲ್ಲಿ ಗೈಡ್ ಇಲ್ಲದಿರುವುದು ಮತ್ತು ಮಾರ್ಗದುದ್ದಕ್ಕೂ ಬಿದ್ದಿರುವ ಬೃಹತ್ ಮರಗಳು ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ದಟ್ಟ ಕಾನನದ ನಡುವೆ ಯಾವ ದಾರಿಯಲ್ಲಿ ಸಾಗಬೇಕೆಂದು ತಿಳಿಯದೆ, ಯಾವುದೇ ಸುರಕ್ಷತಾ ವ್ಯವಸ್ಥೆಯೂ ಇಲ್ಲದೆ ಕಂಗಾಲಾದ ಚಾರಣಿಗರು ಅರ್ಧ ಹಾದಿಯಲ್ಲೇ ನಿರಾಶೆಯಿಂದ ವಾಪಸ್ ಹೆಜ್ಜೆ ಹಾಕಬೇಕಾಯಿತು.
ಮೂಡಿಗೆರೆ ತಾಲೂಕು ವ್ಯಾಪ್ತಿಯ ಈ ಪ್ರವಾಸಿ ತಾಣದಲ್ಲಿ ಕೇವಲ ಹಣ ಗಳಿಕೆಗೆ ಒತ್ತು ನೀಡಿ, ಪ್ರವಾಸಿಗರ ಸುರಕ್ಷತೆಯನ್ನು ಕಡೆಗಣಿಸಿರುವ ಕಾಫಿನಾಡಿನ ಅರಣ್ಯ ಇಲಾಖೆಯ ಕಾರ್ಯವೈಖರಿ ವಿರುದ್ಧ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
Tourists facing problems while trekking on Yettinabhuja trek
Leave a comment