ಚಿಕ್ಕಮಗಳೂರು: ಸ್ವಾತಂತ್ರ್ಯದ ೮೦ನೇ ವರ್ಷದ ಸಂಭ್ರಮ ಕೇವಲ ಹಬ್ಬದ ಆಚರಣೆಯಾಗದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ, ದೇಶದ ಸಾಧನೆಗಳನ್ನು ಸ್ಮರಿಸುವ, ಸ್ವಾತಂತ್ರ್ಯದ ಮೌಲ್ಯಗಳನ್ನು ಅರಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು ಎಂದು ಇಂಧನ, ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಆಶಯ ವ್ಯಕ್ತಪಡಿಸಿದರು.
ನಗರದ ನೇತಾಜಿ ಸುಭಾಷ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ನಡೆದ ೮೦ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಅವರು, ‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಪ್ರತಿಯೊಬ್ಬರೂ ರಾಷ್ಟ್ರೀಯ ಹಿತಾಸಕ್ತಿಯನ್ನು ಬೆಳೆಸಿಕೊಂಡು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ಸ್ವಾತಂತ್ರ್ಯದ ನಿಜವಾದ ಅರ್ಥ ಸಾಕಾರಗೊಳ್ಳಲಿದೆ ಎಂದು ಹೇಳಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ವೈಯಕ್ತಿಕ ಸುಖ, ಸಂತೋಷ ಹಾಗೂ ನೆಮ್ಮದಿಯನ್ನು ತ್ಯಾಗ ಮಾಡಿ ಹೋರಾಡಿದ ಸಾವಿರಾರು ದೇಶಭಕ್ತರು ಮತ್ತು ಹುತಾತ್ಮರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಶೋಷಣೆ ಹಾಗೂ ದಮನಕಾರಿ ನೀತಿಗಳು ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದವು. ಇದರ ಪರಿಣಾಮವಾಗಿ ದೇಶದ ಜನರು ದೀರ್ಘಕಾಲದ ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜಾದರು. ರಾಷ್ಟ್ರೀಯತೆ ಮತ್ತು ಸ್ವಾಭಿಮಾನದ ಭಾವನೆಯೊಂದಿಗೆ ಜಾತಿ, ಧರ್ಮದ ಎಲ್ಲೆಗಳನ್ನು ಮೀರಿ ಭಾರತೀಯರು ಒಗ್ಗಟ್ಟಾದದ್ದು ಬ್ರಿಟಿಷರ ವಿಭಜಿಸಿ ಆಳುವ ನೀತಿಗೆ ಬಲವಾದ ಪೆಟ್ಟು ನೀಡಿತು ಎಂದು ಹೇಳಿದರು.
೧೮೮೫ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ಬಳಿಕ ಸ್ವಾತಂತ್ರ್ಯ ಚಳವಳಿಗೆ ಭದ್ರ ವೇದಿಕೆ ದೊರೆಯಿತು. ಮಹಾತ್ಮ ಗಾಂಧೀಜಿಯವರ ಆಗಮನದೊಂದಿಗೆ ಹೋರಾಟ ಜನಸಾಮಾನ್ಯರ ಚಳವಳಿಯಾಗಿ ರೂಪುಗೊಂಡಿತು. ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಹಾಗೂ ಕ್ವಿಟ್ ಇಂಡಿಯಾ ಚಳವಳಿಗಳು ದೇಶಾದ್ಯಂತ ನಡೆದವು. ಲಕ್ಷಾಂತರ ದೇಶಪ್ರೇಮಿಗಳ ತ್ಯಾಗ ಮತ್ತು ಹೋರಾಟದ ಫಲವಾಗಿ ಭಾರತ ಸ್ವತಂತ್ರ ರಾಷ್ಟ್ರವಾಯಿತು ಎಂದರು.
ಮಹಾತ್ಮ ಗಾಂಧೀಜಿಯವರ ‘ಮಾಡು ಇಲ್ಲವೇ ಮಡಿ’ ಹಾಗೂ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ‘ಗಿವ್ ಮಿ ಬ್ಲಡ್ ಅಂಡ್ ಐ ವಿಲ್ ಗಿವ್ ಫ್ರೀಡಂ’ ಎಂಬಂತಹ ರೋಮಾಂಚನಕಾರಿ ಸಂದೇಶಗಳು ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಚೈತನ್ಯ ನೀಡಿದವು. ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯವನ್ನು ಸಂರಕ್ಷಿಸಿ ಅದರ ಮಹತ್ವವನ್ನು ಅರಿತು ರಾಷ್ಟ್ರೀಯ ಹಿತಾಸಕ್ತಿಯನ್ನು ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಮೂಲಭೂತ ಕರ್ತವ್ಯ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ
ಮಹಾತ್ಮ ಗಾಂಧೀಜಿ, ಗೋಪಾಲಕೃಷ್ಣ ಗೋಖಲೆ, ಲಾಲಾ ಲಜಪತ್ ರಾಯ್, ಭಗತ್ ಸಿಂಗ್, ಅರವಿಂದ ಘೋಷ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರ ಪಾಲ್, ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ.ಬಿ.ಆರ್.ಅಂಬೇಡ್ಕರ್, ಮೌಲಾನಾ ಅಬುಲ್ ಕಲಾಂ ಆಜಾದ್, ಸುಭಾಷ್ಚಂದ್ರ ಬೋಸ್, ಅನಿಬೆಸೆಂಟ್ ಸೇರಿದಂತೆ ಅನೇಕ ಮಹನೀಯರ ತ್ಯಾಗವನ್ನು ಸ್ಮರಿಸಿದ ಸಚಿವರು, ಕರ್ನಾಟಕದ ಕಿತ್ತೂರು ರಾಣಿ ಚೆನ್ನಮ್ಮ, ಆಲೂರು ವೆಂಕಟರಾಯರು, ಮೈಲಾರ ಮಹದೇವಪ್ಪ, ಕಾರ್ನಾಡ್ ಸದಾಶಿವರಾವ್, ಶ್ರೀನಿವಾಸರಾವ್ ಕೌಜಲಗಿ ಸೇರಿದಂತೆ ಹಲವು ಹೋರಾಟಗಾರರ ಕೊಡುಗೆಯನ್ನು ಕೊಂಡಾಡಿದರು.
ಈ ಜಿಲ್ಲೆಯ ಹೊಸಕೊಪ್ಪ ಕೃಷ್ಣರಾಯರು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಹಲವು ರೀತಿಯಲ್ಲಿ ಸಂಘಟಿಸಿ ಬಲಪಡಿಸಿದ್ದರು. ಸಾಮಾಜಿಕ ಅಸಮಾನತೆ ವಿರುದ್ಧದ ಹೋರಾಟ, ವಿದೇಶಿ ವಸ್ತುಗಳ ಬಹಿಷ್ಕಾರ, ಸ್ವದೇಶಿ ವಸ್ತುಗಳ ಬಳಕೆಗೆ ಪ್ರೋತ್ಸಾಹ, ಚರಕದಿಂದ ನೂಲು ತೆಗೆಯುವುದು, ಖಾದಿ ಬಳಕೆ ಹಾಗೂ ಕಾನೂನು ಭಂಗ ಚಳವಳಿ ಸೇರಿದಂತೆ ಹಲವು ಹೋರಾಟಗಳು ಜಿಲ್ಲೆಯಲ್ಲಿ ನಡೆದಿವೆ ಎಂದು ಅವರು ಹೇಳಿದರು.
೧೯೪೭ರ ಆಗಸ್ಟ್ ೧೫ರಂದು ದೇಶ ಸ್ವಾತಂತ್ರ್ಯ ಪಡೆದ ಸಂಭ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಡುಗೆಯೂ ಸೇರಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರಿಗೂ ಈ ಸಂದರ್ಭದಲ್ಲಿ ಗೌರವ ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ಟಿ.ಡಿ. ರಾಜೇಗೌಡ ಭಾಗವಹಿಸಿದ್ದರು. ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್. ಹರೀಶ್, ಶಾಸಕರಾದ ಸಿ.ಟಿ. ರವಿ ಹಾಗೂ ಎ.ವಿ. ಗಾಯತ್ರಿ ಶಾಂತೇಗೌಡ, ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದ ಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ನಗರಸಭಾ ಅಧ್ಯಕ್ಷೆ ಭವ್ಯ ಮಂಜುನಾಥ್, ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಾಯ್ಮಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಕೀರ್ತನ, ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ, ನಗರಸಭಾ ಆಯುಕ್ತ ಬಸವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪಥ ಸಂಚಲನದಲ್ಲಿ ಉತ್ತಮ ಪ್ರದರ್ಶನ ನೀಡಿದ ಐಡಿಎಸ್ಜಿ ಕಾಲೇಜಿನ ಎನ್ಸಿಸಿ ತಂಡ ಪ್ರಥಮ, ಡಾ.ಎಪಿಜೆ ಅಬ್ದುಲ್ ಕಲಾಂ ಶಾಲೆಯ ಸೇವಾದಳ ವಿಭಾಗ ದ್ವಿತೀಯ, ಸೈಂಟ್ ಜೋಸೆಫರ ಶಾಲೆಯ ಸ್ಕೌಟ್ಸ್ ಅಂಡ್ ಗೈಡ್ಸ್ ತಂಡ ತೃತೀಯ ಹಾಗೂ ಟೈಮ್ಸ್ ಇಂಟರ್ನ್ಯಾಷನಲ್ ಶಾಲಾ ತಂಡ ನಾಲ್ಕನೇ ಬಹುಮಾನಕ್ಕೆ ಭಾಜನವಾದವು. ಉಳಿದಂತೆ ಸರ್ಕಾರಿ ಬಾಲಕ, ಬಾಲಕಿಯರ ಬಾಲಮಂದಿರ ತಂಡ ಹಾಗೂ ಆಶಾಕಿರಣ ಅಂಧ ಮಕ್ಕಳ ಶಾಲೆಯ ತಂಡ ವಿಶೇಷ ಬಹುಮಾನಕ್ಕೆ ಪಾತ್ರವಾದವು.
Perform your duties with the spirit of ‘country first’
Leave a comment