ಚಿಕ್ಕಮಗಳೂರು: ಪರವಾನಗಿ ಇಲ್ಲದೆ ಹಳ್ಳದಿಂದ ಮರಳನ್ನು ತೆಗೆದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಆಲ್ದೂರು ಪೊಲೀಸರು ಟ್ರ್ಯಾಕ್ಟರ್ ಮತ್ತು ಟ್ರೇಲರ್‌ನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಆಗಸ್ಟ್ 14ರಂದು ಮಧ್ಯಾಹ್ನ 2.30ರ ಸುಮಾರಿಗೆ ಪೊಲೀಸರು ಚಂಡಗೋಡು ಭಾಗದಲ್ಲಿ ಗಸ್ತು ಮುಗಿಸಿಕೊಂಡು ಆಲ್ದೂರು ಕಡೆಗೆ ಇಲಾಖಾ ಜೀಪಿನಲ್ಲಿ ವಾಪಸಾಗುತ್ತಿದ್ದಾಗ ವಗ್ಗಾರ್ ರಸ್ತೆಯ ಶ್ರೀ ವರಲಕ್ಷ್ಮಿ ಕಾಫಿ ಲಿಂಕ್ಸ್ ಬಳಿ ದೋಣಗುಡಿಗೆ ಕಡೆಯಿಂದ ಮರಳು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್‌ನ್ನು ಗಮನಿಸಿದ್ದಾರೆ. ಪೊಲೀಸರು ಟ್ರ್ಯಾಕ್ಟರ್‌ನ್ನು ನಿಲ್ಲಿಸಿ ಪರಿಶೀಲಿಸಿದಾಗ ಟ್ರೇಲರ್‌ನಲ್ಲಿ ಮರಳು ತುಂಬಿರುವುದು ಕಂಡುಬಂದಿದೆ.
ಮರಳು ಸಾಗಾಟಕ್ಕೆ ಗ್ರಾಮ ಪಂಚಾಯಿತಿ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಇದೆಯೇ ಎಂದು ಚಾಲಕನನ್ನು ವಿಚಾರಿಸಿದಾಗ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದಾನೆ. ವಿಚಾರಣೆ ವೇಳೆ ಟ್ರ್ಯಾಕ್ಟರ್ ಮಾಲೀಕರ ಸೂಚನೆಯಂತೆ ಹಳ್ಳದಿಂದ ಮರಳನ್ನು ತುಂಬಿಸಿಕೊಂಡು ಆಲ್ದೂರಿಗೆ ಸಾಗಿಸುತ್ತಿರುವುದಾಗಿ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.
ಪಂಚಾಯ್ತುದಾರರ ಸಮ್ಮುಖದಲ್ಲಿ ಟ್ರ್ಯಾಕ್ಟರ್ ಪರಿಶೀಲಿಸಿದಾಗ *KA-18 TB-3347* ನೋಂದಣಿ ಸಂಖ್ಯೆಯ ಜಾನ್ ಡೀರ್ ಕಂಪನಿಯ 5045D ಮಾದರಿಯ ಟ್ರ್ಯಾಕ್ಟರ್ ಇಂಜಿನ್ ಹಾಗೂ *KA-18 TB-5569* ನೋಂದಣಿ ಸಂಖ್ಯೆಯ ತಿಳಿ ನೀಲಿ ಬಣ್ಣದ ಟ್ರೇಲರ್ ಪತ್ತೆಯಾಗಿದೆ. ಟ್ರೇಲರ್‌ನಲ್ಲಿ ಬಾಡಿ ಲೆವೆಲ್‌ವರೆಗೆ ಮರಳು ತುಂಬಲಾಗಿದ್ದು, ಅದರ ಅಂದಾಜು ಮೌಲ್ಯ ಸುಮಾರು *₹4,000* ಎಂದು ಪಂಚಾಯ್ತುದಾರರು ಅಭಿಪ್ರಾಯಪಟ್ಟಿದ್ದಾರೆ.
ಪೊಲೀಸರ ಪ್ರಕಾರ, ಸರ್ಕಾರದ ಸ್ವತ್ತಾದ ಮರಳನ್ನು ಹಳ್ಳದಿಂದ ಅಕ್ರಮವಾಗಿ ತೆಗೆದು, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮರಳು ತುಂಬಿದ್ದ ಟ್ರ್ಯಾಕ್ಟರ್ ಮತ್ತು ಟ್ರೇಲರ್‌ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ *ಠಾಣಾ ಮೊ.ನಂ.164/2026ರಂತೆ **ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2)* ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
Illegal sand transportation: Tractor-trailer seized
Leave a comment