ಚಿಕ್ಕಮಗಳೂರು: ಕೇರಳ ಲಾಟರಿಯಲ್ಲಿ ₹8 ಲಕ್ಷ ಬಹುಮಾನ ಬಂದಿದೆ ಎಂದು ನಂಬಿಸಿ ಮಹಿಳೆಯೊಬ್ಬರಿಂದ ₹2.34 ಲಕ್ಷಕ್ಕೂ ಅಧಿಕ ಹಣವನ್ನು ವಿವಿಧ ಶುಲ್ಕಗಳ ಹೆಸರಿನಲ್ಲಿ ಪಡೆದು ಸೈಬರ್ ವಂಚನೆ ಮಾಡಿರುವ ಘಟನೆ ನಡೆದಿದೆ. ನಗರದ ಹರಿಯಪ್ಪ ಸ್ಟ್ರೀಟ್, ಎಂಜಿ ರಸ್ತೆಯ ನಿವಾಸಿ ಸೀಮಾ ಬಾನು ವಂಚನೆಗೊಳಗಾದವರು. ಈ ಸಂಬಂಧ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಜುಲೈ 20ರಂದು ಬೆಳಿಗ್ಗೆ ಅಪರಿಚಿತ ವ್ಯಕ್ತಿಯೊಬ್ಬರು ಸೀಮಾ ಬಾನು ಅವರ ಮೊಬೈಲ್ಗೆ ಕರೆ ಮಾಡಿ, ತಾನು ಕೇರಳ ಲಾಟರಿ ಕಡೆಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾನೆ. ಲಾಟರಿ ಖರೀದಿಸುವಂತೆ ತಿಳಿಸಿ, ವಾಟ್ಸ್ಆ್ಯಪ್ ಮೂಲಕ ಸುಮಾರು 30 ಲಾಟರಿ ಸಂಖ್ಯೆಗಳ ಮಾಹಿತಿಯನ್ನು ಕಳುಹಿಸಿದ್ದಾನೆ. ಇದರಲ್ಲಿ KL336699 ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡ ಸೀಮಾ ಬಾನು, ಟಿಕೆಟ್ ಶುಲ್ಕವೆಂದು ₹99 ಪಾವತಿಸಿದ್ದಾರೆ.
ನಂತರ ಅದೇ ದಿನ ಮಧ್ಯಾಹ್ನ ಕರೆ ಮಾಡಿದ ಆರೋಪಿಗಳು, ಲಾಟರಿ ಡ್ರಾ ನಡೆದಿದ್ದು ₹8 ಲಕ್ಷ ಬಹುಮಾನ ಬಂದಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಲಿಂಕ್ ಕಳುಹಿಸಿ ಗೂಗಲ್ನಲ್ಲಿ ಪರಿಶೀಲಿಸುವಂತೆ ಸೂಚಿಸಿದ್ದಾರೆ. ಲಿಂಕ್ನಲ್ಲಿ ₹8 ಲಕ್ಷ ಬಹುಮಾನ ಬಂದಿರುವುದಾಗಿ ತೋರಿಸಿದ್ದರಿಂದ ಸೀಮಾ ಬಾನು ಅದನ್ನು ನಂಬಿದ್ದಾರೆ ಎನ್ನಲಾಗಿದೆ.
ಬಹುಮಾನ ಹಣ ಪಡೆಯಲು ಪ್ರೊಸೆಸಿಂಗ್ ಚಾರ್ಜ್, ಜಿಎಸ್ಟಿ, ಟಿಡಿಎಸ್, ಎನ್ಒಸಿ ಹಾಗೂ ಆರ್ಬಿಐ ಶುಲ್ಕಗಳ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಾವತಿಸುವಂತೆ ಆರೋಪಿಗಳು ಸೂಚಿಸಿದ್ದಾರೆ. ಇದನ್ನು ನಂಬಿದ ಸೀಮಾ ಬಾನು, ಫೋನ್ಪೇ ಮೂಲಕ ಆರೋಪಿಗಳು ಕಳುಹಿಸಿದ ಸ್ಕ್ಯಾನರ್ಗಳಿಗೆ ವಿವಿಧ ಹಂತಗಳಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ.
ಜುಲೈ 21ರಿಂದ 29ರವರೆಗೆ ವಿವಿಧ ದಿನಗಳಲ್ಲಿ ₹8 ಸಾವಿರ, ₹31,500, ₹49,800, ₹35,600, ₹35 ಸಾವಿರ ಸೇರಿದಂತೆ ಹಲವು ಮೊತ್ತಗಳನ್ನು ಪಾವತಿಸಿದ್ದಾರೆ. ಅಲ್ಲದೆ, ಇತರ ಸಂಖ್ಯೆಗಳಿಗೂ ₹17,800 ಹಾಗೂ ₹32 ಸಾವಿರ ವರ್ಗಾವಣೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಒಟ್ಟು ₹2,34,200 ಹಣವನ್ನು ವಂಚಕರು ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆದರೆ ಯಾವುದೇ ಬಹುಮಾನ ಹಣವನ್ನು ಅವರ ಖಾತೆಗೆ ಜಮಾ ಮಾಡದ ಆರೋಪಿಗಳು, ಮತ್ತಷ್ಟು ₹1 ಲಕ್ಷ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಇದರಿಂದ ಅನುಮಾನಗೊಂಡ ಸೀಮಾ ಬಾನು ಕುಟುಂಬದವರಲ್ಲಿ ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ.
ತಕ್ಷಣವೇ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ, ಸ್ವೀಕೃತಿ ಸಂಖ್ಯೆ 31608260135664ರಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ವಂಚಕರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
₹2.34 lakh fraud by claiming to have won a lottery prize
Leave a comment