ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು ಗುಂಪುಗಳ ನಡುವಿನ ಗಲಾಟೆಯನ್ನು ತಡೆದ ಗಸ್ತು ಪೊಲೀಸರು ಮೂವರನ್ನು ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರತ್ನಗಿರಿ ರಸ್ತೆಯ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಎರಡು ಗುಂಪುಗಳ ನಡುವೆ ರಸ್ತೆಯಲ್ಲೇ ದೊಡ್ಡ ಮಟ್ಟದ ಹೊಡೆದಾಟ ಹಾಗೂ ಗಲಾಟೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಪೊಲೀಸರಿಗೆ ಮಾಹಿತಿ ಬಂದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಇಲಾಖೆಯ ಜೀಪ್ನಲ್ಲಿ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡೊಡನೆ ಗಲಾಟೆ ಮಾಡುತ್ತಿದ್ದ ಪುಂಡರು ಚೆಲ್ಲಾಪಿಲ್ಲಿಯಾಗಿ ಓಡಿಹೋಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಜಾಗರೂಕತೆಯಿಂದ ಸುತ್ತುವರೆದು ಗೌರಿಕಾಲುವೆ ನಿವಾಸಿಗಳಾದ ಮನೋಜ್, ಉಮೇಶ್ ಹಾಗೂ ಚಂದನ್ ಎಂಬ ಮೂವರನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಕೈಗೆ ಸಿಗದೆ ಗಿರೀಶ್, ದೀಕ್ಷಿತ್ ಸೇರಿದಂತೆ ಇತರರು ಕಾಲ್ಕಿತ್ತಿದ್ದಾರೆ. ನಡುರಸ್ತೆಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿ ನೆಮ್ಮದಿಗೆ ಶಾಂತಿಭಂಗ ಉಂಟುಮಾಡಿದ ಹಿನ್ನೆಲೆಯಲ್ಲಿ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
Clashes between two groups in the city
Leave a comment