ಚಿಕ್ಕಮಗಳೂರು: ಕನಿಷ್ಟ ವೇತನ ಕಾಯ್ದೆಯಡಿಯಲ್ಲಿ ೮೨ ಉದ್ಯಮಗಳನ್ನು ಸೇರಿಸಲಾಗಿದೆ ಆದರೆ ೧೯ ಉದ್ಯಮಗಳನ್ನು ಕೈಬಿಡಲಾಗಿದೆ. ಈ ಉದ್ಯಮಗಳನ್ನು ಕನಿಷ್ಟ ವೇತನ ಕಾಯ್ದೆ ವ್ಯಾಪ್ತಿಗೆ ತರಲು ಎಐಟಿಯೂಸಿ ಮುಂದಿನ ಹೋರಾಟ ರೂಪಿಸಲಿದೆ ಎಂದು ಎಐಟಿಯೂಸಿ ರಾಜ್ಯಾಧ್ಯಕ್ಷ ಬಾಬು ಮ್ಯಾಥ್ಯು ಹೇಳಿದರು.
ಭಾನುವಾರ ನಗರದ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯಮಗಳ ಮಾಲೀಕರು ಕಾರ್ಮಿಕರ ಜತೆ ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಕಾರ್ಮಿಕರ ಹಕ್ಕುಗಳಿಗೆ ಆಡಳಿತರೂಢ ಸರ್ಕಾರ ಮಾನ್ಯತೆ ನೀಡಬೇಕು ಎಂಬ ಉದ್ದೇಶದಿಂದ ೧೯೪೮ ರಲ್ಲಿ ಕನಿಷ್ಟ ವೇತನ ಕಾಯ್ದೆ ಜಾರಿಗೆ ತರಲಾಯಿತು. ಕಾರ್ಮಿಕರ ರಕ್ಷಣೆಗಾಗಿ ಕನಿಷ್ಟ ವೇತನ ಕಾಯ್ದೆಯ ಜತೆಗೆ ಅನೇಕ ಕಾಯ್ದೆಗಳು ಜಾರಿಗೆ ಬಂದವೂ ಎಂದು ತಿಳಿಸಿದರು.
ಕಾರ್ಮಿಕರ ಪರವಾದ ಅನೇಕ ಕಾಯ್ದೆ ಕಾನೂನುಗಳು ಇದ್ದರು ಸಹ. ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದ ಅವರು, ಎಲ್ಲಿಯವರೆಗೂ ಟ್ರೇಡ್ ಯೂನಿಯನ್ ಇರುತ್ತದೆ. ಅಲ್ಲಿಯವರೆಗೆ ಕಾರ್ಮಿಕರ ಸಮಸ್ಯೆಗಳನ್ನು ಕಂಡು ಹಿಡಿದು ಹೋರಾಟ ಮಾಡಬೇಕು ಎಂದು ಲೆನಿನ್ ಹೇಳಿದ್ದಾರೆ ಎಂದರು.
೨೦೧೯ ರಲ್ಲಿ ಅಂದಿನ ಬಿಜೆಪಿ ಸರ್ಕಾರ ಕಾರ್ಮಿಕ ಕಾಯ್ದೆ ಹೊಸ ನೀತಿಯನ್ನು ಜಾರಿಗೊಳಿಸಿದೆ. ಆದರೆ, ಕನಿಷ್ಟ ವೇತನ ಕಾಯ್ದೆ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ ಅದು ಕಾನೂನು ಬಾಹೀರವಾಗುತ್ತದೆ ಎಂದು ಸರ್ಕಾರ ವಾದಿಸುತ್ತಿದೆ. ಹೊಸ ಕಾಯ್ದೆಯ ಸೆಕ್ಷನ್ ೬೯ ರಲ್ಲಿ ಹಿಂದಿನ ಕನಿಷ್ಟ ವೇತನ ಕಾಯ್ದೆಯಲ್ಲಿ ಕನಿಷ್ಟ ವೇತನ ಪರಿಷ್ಕರಣೆ ಮಾಡುವ ಪ್ರಯತ್ನ ಪ್ರಾರಂಭವಾಗಿದ್ದರೇ ಮುಂದೂವರೆಸಬಹುದು ಎಂದಿದೆ. ಆದರೆ, ಸರ್ಕಾರ ಕುಂಟು ನೆಪ ಹೇಳುತ್ತಿದೆ. ಈ ನೀತಿ ವ್ಯಾಪ್ತಿಯಿಂದ ೧೯ ಉದ್ಯಮಗಳು ಬಿಟ್ಟು ಹೋಗಿವೆ. ಒಂದು ವೇಳೆ ಈ ನೀತಿಯಡಿಯಲ್ಲಿ ಈ ಉದ್ಯಮಗಳು ಸೇರಿಕೊಂಡಲ್ಲಿ ಎಲ್ಲಾರಿಗೂ ಕನಿಷ್ಠ ವೇತನ ಕಾಯ್ದೆ ಅನ್ವಯವಾಗಲಿದೆ ಈ ಕಾರಣಕ್ಕಾಗಿ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ತಿಳಿಸಿದರು.
೨೦ ಸಾವಿರ ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ನೌಕರರಿಗೆ ೭ನೇ ವೇತನ ಜಾರಿಗೊಳಿಸಿ ಅವರ ವೇತನವನ್ನು ಪರಿಷ್ಕರಣೆ ಮಾಡಲಾಗಿದೆ. ಕಾರ್ಮಿಕರ ವೇತನ ಹೆಚ್ಚಳಕ್ಕೆ ಇಷ್ಟು ದೊಡ್ಡಮಟ್ಟದ ಹಣಕಾಸಿನ ಅಗತ್ಯವಿಲ್ಲ. ಬಡಜನರ, ಬಡಕಾರ್ಮಿಕರ ಅಲ್ಪ ಪ್ರಮಾಣದ ವೇತನ ಹೆಚ್ಚಳ ಮಾಡಲು ನಮ್ಮನಾಳುವ ಸರ್ಕಾರ ಮೀನಾಮೇಷ ಎಣಿಸುತ್ತಿವೆ. ಈ ನಿಟ್ಟಿನಲ್ಲಿ ಎಐಟಿಯೂಸಿ ದೊಡ್ಡಮಟ್ಟದ ಹೋರಾಟಕ್ಕೆ ಮುಂದಾಗಬೇಕಿದ್ದು, ಜಿಲ್ಲಾ ಸಮಿತಿಗಳ ಮೇಲೆ ದೊಡ್ಡ ಜವಬ್ದಾರಿ ಇದೆ ಎಂದು ಹೇಳಿದರು.
ಸಿಪಿಐ ಮುಖಂಡ ಎಸ್.ವಿಜಯಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದ ತೋಟ ಕಾರ್ಮಿಕರಿಗೆ ಕನಿಷ್ಠ ವೇತನ ಸಿಗಲು ಕಾರಣವಾಗಿದ್ದು ಸಿಪಿಐ ಹಿರಿಯ ಮುಖಂಡರ ಹೋರಾಟದಿಂದ ಎಂದು ಅವರು, ಬಿ.ಕೆ.ಸುಂದರೇಶ್ ಅವರ ಹೋರಾಟವನ್ನು ಮೆಲುಕು ಹಾಕಿದರು. ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೂ ಪಕ್ಷದ ಮುಖಂಡರ ಚಳವಳಿಗಳು ಕಾರಣವಾಗಿದೆ ಎಂದರು.
ಕಾರ್ಮಿಕರ ಬದುಕಿನ ಸುಧಾರಣೆಯೊಂದಿಗೆ ಸಮಾಜದ ಪರಿವರ್ತನೆಯಲ್ಲಿ ಪಕ್ಷದ ಹೋರಾಟ, ಚಳವಳಿಗಳು ಕಾರಣವಾಗಿವೆ. ಎಐಟಿಯುಸಿ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಸಂಘಟನೆಯಾಗಿದ್ದು, ಪ್ರತಿಯೊಬ್ಬ ಕಾರ್ಮಿಕರೂ ಈ ಸಂಘಟನೆಯ ಸದಸ್ಯರಾಗುವ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ರಘು ಮಾತನಾಡಿ, ದೇಶದಲ್ಲಿ ಶೇ.೯೦ರಷ್ಟು ಕಾರ್ಮಿಕರು ಮತ್ತು ರೈತರಿದ್ದಾರೆ. ಶೇ.೧೦ರಷ್ಟು ಇರುವ ನಮ್ಮನಾಳುವ ಜನರು ಕಾಯ್ದೆಗಳಿಗೆ ತಿದ್ದುಪಡಿ ತಂದು ಕಾರ್ಮಿಕ ವಿರೋಧಿಗಳಾಗಿ ನಡೆದುಕೊಳ್ಳು ತ್ತಿದ್ದಾರೆ ಎಂದ ಅವರು, ರೈತರು ಮತ್ತು ಕಾರ್ಮಿಕರು ರಾಜಕೀಯ ಚುಕ್ಕಾಣಿ ಹಿಡಿಯಬೇಕು. ಆಗ ರೈತ ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಜಿ.ಉಮೇಶ್, ಎಐಟಿಯೂಸಿ ಉಪಾಧ್ಯಕ್ಷ ಧರ್ಮರಾಜ್, ಅಂಗನವಾಡಿ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಮ್ಮ, ಕಟ್ಟಡ ಕಾರ್ಮಿಕರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಗಿರೀಶ್, ಶಾಂತರಾಜ್ ಜೈನ್, ಹನುಮಂತಪ್ಪ, ಜಯಕುಮಾರ್, ವಸಂತ್ಕುಮಾರ್, ಜಿ. ರಮೇಶ್ ಸೇರಿದಂತೆ ಇತರರು ಇದ್ದರು.
AITUC fights to bring some industries under the purview of the Minimum Wage Act
Leave a comment