ಚಿಕ್ಕಮಗಳೂರು: ಅಪರೂಪದ ವನ್ಯಜೀವಿಯಾದ ಮಣ್ಣುಮುಕ್ಕ ಹಾವು (Red Sand Boa) ಮಾರಾಟಕ್ಕೆ ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ನಗರದ ವಾಜಪೇಯಿ ಬಡಾವಣೆಯ ಜೋಡು ರಸ್ತೆಯ ಬಳಿ ಮಣ್ಣುಮುಕ್ಕ ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರಿಗೆ ದೊರಕಿತ್ತು. ಮಾಹಿತಿ ಆಧರಿಸಿ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು, ನೀಲಿ ಬಣ್ಣದ ಸ್ವಿಫ್ಟ್ ಕಾರು ಹಾಗೂ ಬಿಳಿ ಬಣ್ಣದ ವ್ಯಾಗನ್ಆರ್ ಕಾರಿನಲ್ಲಿ ಇದ್ದ ಐವರು ಆರೋಪಿಗಳನ್ನು ಬಂಧಿಸಿದರು.
ಬಂಧಿತರಿಂದ ಒಂದು ಮಣ್ಣುಮುಕ್ಕ ಹಾವು (Red Sand Boa) ವಶಪಡಿಸಿಕೊಳ್ಳಲಾಗಿದ್ದು, ಸುಮಾರು ₹5 ಲಕ್ಷ ಮೌಲ್ಯದ ಸ್ವಿಫ್ಟ್ ಕಾರು ಹಾಗೂ ₹3.5 ಲಕ್ಷ ಮೌಲ್ಯದ ವ್ಯಾಗನ್ಆರ್ ಕಾರನ್ನು ಸಹ ಜಪ್ತಿ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತರನ್ನು ಯತೀಶ (32), ವಂಶಿ ಕೃಷ್ಣ (42), ಆರಿಫ್ ಬಾಷಾ, ಷಫಿ (32) ಹಾಗೂ ನವಾಜ್ ಪಾಷಾ (38) ಎಂದು ಗುರುತಿಸಲಾಗಿದೆ. ಇವರು ಶಿವಮೊಗ್ಗ, ದಾವಣಗೆರೆ, ತುಮಕೂರು ಹಾಗೂ ಆಂಧ್ರ ಪ್ರದೇಶದ ಅನಂತಪುರ ಮೂಲದವರಾಗಿದ್ದಾರೆ.
ಈ ಕಾರ್ಯಾಚರಣೆ ಮಾನ್ಯ ಪೊಲೀಸ್ ಉಪ ಮಹಾನಿರೀಕ್ಷಕರಾದ ಶ್ರೀಮತಿ ಸಂಗೀತಾ ಜಿ, ಸಿಐಡಿ ಅರಣ್ಯ ಘಟಕ, ಬೆಂಗಳೂರು ಹಾಗೂ ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಶ್ರೀ ಪವನ್ ನೆಟ್ಟೂರು, ಐಪಿಎಸ್ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರಾದ ಬಾಬುದ್ದೀನ್ ಹಾಗೂ ಸಿಬ್ಬಂದಿಗಳಾದ ದೇವರಾಜ್, ಕೃಷ್ಣರಾಜ್ ಅರಸ್, ದಿಲೀಪ್, ನಟರಾಜ್, ಹಾಲೇಶ್ ಮತ್ತು ಚಾಲಕ ತಿಮ್ಮಶೆಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಅರಣ್ಯ ಕಾಯ್ದೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ಸಂಬಂಧಿಸಿದ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರ ಕಚೇರಿ (9480800220) ಹಾಗೂ ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಕಚೇರಿ (8277949809)ಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
Five arrested for attempting to sell a snake covered in mud
Leave a comment