ಚಿಕ್ಕಮಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಿಂತಲೂ ಮಿಗಿಲಾದ ಕಾರ್ಯಕ್ರಮಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುತ್ತಿದೆ. ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೇಳಿದರು.
ಅವರು ಶನಿವಾರ ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಹಮ್ಮಿಕೊಳ್ಳಲಳಾಗಿದ್ದ ಬಿಜೆಪಿ ನಗರ ಮಂಡಲದ ಪ್ರಶಿಕ್ಷಾ ವರ್ಗವನ್ನು ಉದ್ಘಾಟಿ ಮಾತನಾಡಿ ಕಾಂಗ್ರೆಸಿಗರು ಬರೇ ಪಂಚ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆ. ೩ ವರ್ಷದಲ್ಲಿ ಪಂಚ ಗ್ಯಾರಂಟಿಯ ಜಾಹಿರಾತಿಗಾಗಿ ೫೩೨ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ವೆಚ್ಚಮಾಡಿದೆ. ಆದರೆ ಅನ್ನಭಾಗ್ಯ ಯೋಜನೆಯ ೫ ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ನಮ್ಮ ಕಾರ್ಯಕರ್ತರು ಇದನ್ನು ಜನರಿಗೆ ಹೇಳುವುದಿಲ್ಲ ಎಂದು ವಿಷಾಧಿಸಿದರು.
ಯುವನಿಧಿ ಯೋಜನೆಯಡಿ ನಿರುದ್ಯೋಗಿ ವಿದ್ಯಾವಂತರಿಗೆ ಮಾಸಿಕ ೩೦೦೦ ಸಾವಿರ ರೂ. ಲೆಕ್ಕದಲ್ಲಿ ವಾರ್ಷಿಕ ೬೫೦ ಕೋಟಿ ಮೀಸಲಿಡುವುದಾಗಿ ರಾಜ್ಯ ಹೇಳುತ್ತಿದೆ. ಆದರೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆಯಡಿ ಪ್ರತಿ ವರ್ಷ ೫೫೦ ಕೋಟಿ ರೂ. ಅನುದಾನ ನೀಡುತ್ತಿದೆ. ೧.೬೦ ಲಕ್ಷ ಜನರಿಗೆ ಕೆಲಸ ಸಿಗುತ್ತಿದೆ ಎಂದು ವಿವರಿಸಿದರು.
ಮಾತೃವಂದನಾ ಯೋಜನೆಯಡಿ ಮೊದಲ ಹೆರಿಗೆ ಸಂದರ್ಭದಲ್ಲಿ ಮಹಿಳೆಗೆ ೫ ಸಾವಿ ರೂ. ಹಣ ಕೇಂದ್ರದಿಂದ ಬರುತ್ತದೆ. ಇದಕ್ಕಾಗಿ ಪ್ರತಿ ವರ್ಷ ೩೫೦ ಕೋಟಿ ರೂ.ಗಳನ್ನು ರಾಜ್ಯಕ್ಕೆ ನೀಡುತ್ತಿದೆ. ಇದನ್ನು ನಮ್ಮ ಬೂತ್ ಮಟ್ಟದಲ್ಲಿ ತಿಳಿಸುವ ಕೆಲಸ ಮಾಡಬೇಕಿದೆ ಎಂದರು. ಹೃದಯಾಘಾತಕ್ಕೊಳಗಾದವರಿಗೆ ಸ್ಟೆಂಟ್ ಅಳವಡಿಸಲು ಆಯುಷ್ಮಾನ್ ಯೋಜನೆಯಡಿ ೧.೫೦ ಲಕ್ಷ ರೂ. ವರೆಗೆ ನೆರವು ಸಿಗುತ್ತಿದೆ. ಇದರಿಂದಲೇ ೧೮೦೦ ಕೋಟಿ ರೂ. ಹಣ ಈ ವರೆಗೆ ಉಳಿತಾಯವಾಗಿದೆ ಎಂದು ವಿವರಿಸಿದರು.
ಸೂರ್ಯೋದಯ ಯೊಜನೆಯಡಿ ಜಮೀನು ಹೊಂದಿದವರಿಗೆ ಸೋಲಾರ್ ಪಂಪ್‌ಸೆಟ್ ಅಳವಡಿಸಲು ೫ ಲಕ್ಷ ರೂ.ವರೆಗಿನ ಸಲಕರಣೆಗಳನ್ನು ಕೊಡುತ್ತಿದೆ. ಸೂರ್ಯೋದಯ ಯೋಜನೆಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲು ೬೦ ರಿಂದ ೭೦ ಸಾವಿರ ರೂ. ಸಹಾಯಧನ ಹಾಗೂ ಸಾಲ ಸೌಲಭ್ಯ ಸಿಗುತ್ತಿದೆ. ಚೀಲಕ್ಕೆ ೧೮೦೦ ರೂ. ಯೂರಿಯಾ ಗೊಬ್ಬರ ಈಗ ೩೦೦ ರೂ.ಗೆ ಸಿಗುತ್ತಿದೆ. ಡಿ.ಎ.ಪಿ. ಗೊಬ್ಬರಕ್ಕೂ ಸಹಾಯಧನವನ್ನು ಕೇಂದ್ರ ಕೊಡುತ್ತಿದೆ. ಇಡೀ ದೇಶದಲ್ಲಿ ಯೂರಿಯಾ ಗೊಬ್ಬರಕ್ಕೆ ವಾರ್ಷಿಕ ೧.೧೦ ಲಕ್ಷ ಕೋಟಿ ಹಾಗೂ ಡಿ.ಎ.ಪಿ.ಗೆ ಸುಮಾರು ೭೦ ಸಾವಿರ ಕೋಟಿ ಸಹಾಯಧನ ನೀಡುತ್ತಿದ್ದು, ಇದರಲ್ಲಿ ಕರ್ನಾಟಕ ರಾಜ್ಯಕ್ಕೆ ೧೦.೧೨ ಸಾವಿರ ಕೋಟಿ ರೂ. ದೊರೆಯುತ್ತಿದೆ ಎಂದರು.
ಹೀಗಿದ್ದರೂ ಹುಟ್ಟಿನಿಂದ ಸಾವಿನವರೆಗೆ, ಹಾಲಿನಿಂದ ಆಲ್ಕೋಹಾಲ್‌ವರೆಗೆ, ಅಗರಬತ್ತಿಯಿಂದ ಬೀಡಿ, ಸಿಗರೇಟ್‌ವರೆಗೆ, ವಿದ್ಯುತ್‌ನಿಂದ ಟ್ರಾನ್ಸ್‌ಫಾರ್ಮರ್‌ವರೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆಲೆ ಹೆಚ್ಚಿಸಿದೆ. ಆದರೂ ಕೇವಲ ಗ್ಯಾರಂಟಿ ಗ್ಯಾರಂಟಿ ಎನ್ನುತ್ತಾರೆ ಎಂದು ಟೀಕಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗದ ಮಕ್ಕಳ ಶಿಕ್ಷಣಕ್ಕೆ ಕೇಂದ್ರದಿಂದ ಸಹಾಯಧನ ಸಿಗುತ್ತಿದೆ. ಇಷ್ಟಾದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವ ಕೊಡುಗೆಯನ್ನು ಕೊಟ್ಟಿಲ್ಲ ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಾರೆ. ಹಿಂದೆ ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ ೧೦ ವರ್ಷದ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ನೀಡಿದ ಅನುದಾನ ಕೇವಲ ೬೩ ಸಾವಿರ ಕೋಟಿ ರೂ. ಆದರೆ ಕಳೆದ ೧೦ ವರ್ಷದ ಅವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಾಜ್ಯಕ್ಕೆ ಮೂರೂವರೆ ಪಟ್ಟು ಹೆಚ್ಚು ಅಂದರೆ ೨.೩೭ ಲಕ್ಷ ಕೋಟಿ ರೂ.ಗಳನ್ನು ನೀಡಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ಮಾತನಾಡಿ, ಬಿಜೆಪಿ ಬೇರೆಲ್ಲಾ ಪಕ್ಷಕ್ಕಿಂತ ವಿಭಿನ್ನ. ಇಲ್ಲಿ ವ್ಯಕ್ತಿ ಪೂಜೆ ಇಲ್ಲ. ಸದ್ಯದಲ್ಲೇ ಗ್ರಾ.ಪಂ. ನಿಂದ ಹಿಡಿದು ವಿಧಾನಸಭೆಯವರೆಗೆ ಚುನಾವಣೆಗಳು ಬರಲಿವೆ. ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಹಿಂದೆ ಗಳಿಸಿದ ಮತಗಳಿಗಿಂತ ಹೆಚ್ಚು ಮತಗಳನ್ನು ಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಪುಷ್ಪರಾಜ್ ಅಧ್ಯಕ್ಷತೆ ವಹಿಸಿದ್ದರು. ನಗರ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಶೆಟ್ಟಿ ಉಪಸ್ಥಿತರಿದ್ದರು. ನಗರ ಕಾರ್ಯದರ್ಶಿ ಬಸವರಾಜ್ ಸ್ವಾಗತಿಸಿದರು.
Rs 532 crore spent on advertising Pancha Garanti in 3 years
Leave a comment