ಚಿಕ್ಕಮಗಳೂರು: ನಗರದಲ್ಲಿ ಏಪ್ರಿಲ್ ೧೪ ರಂದು ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಹಾಗೂ ಏಪ್ರಿಲ್ ೫ ರಂದು ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಣೆ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏಪ್ರಿಲ್ ೫ ರಂದು ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ನಗರದ ಕುವೆಂಪು ಕಲಾಮಂದಿರದಲ್ಲಿ ಆಚರಿಸಲಾಗುವುದು. ಈ ಮಹಾನ್ ನಾಯಕನ ಜೀವನ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗುವುದು ಎಂದರು.
ಏಪ್ರಿಲ್ ೧೪ ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗುವುದು. ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ರವರ ಪ್ರತಿಮೆಗೆ ಗಣ್ಯರಿಂದ ಮಾಲಾರ್ಪಣೆ ಮಾಡಲಾಗುವುದಲ್ಲದೆ, ಈ ಇಬ್ಬರು ಮಹನೀಯರ ಜಯಂತಿ ಪ್ರಯುಕ್ತ ನಗರದ ತಹಸೀಲ್ದಾರ್ ಕಚೇರಿಯಿಂದ ಕುವೆಂಪು ಕಲಾಮಂದಿರದವರೆಗೆ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಸ್ವಚ್ಛತೆ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತರಿಗೆ ತಿಳಿಸಿದರು.
ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರದ ಶಿಷ್ಠಾಚಾರದಂತೆ ಕಾರ್ಯಕ್ರಮಗಳನ್ನು ಆಯೋಜಿಸಿ, ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರನ್ನು ಆಹ್ವಾನಿಸಬೇಕು. ಯುವಜನತೆಗೆ ಮಹನೀಯರ ಆದರ್ಶಗಳು, ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳ ಕುರಿತು ಅರಿವು ಮೂಡಿಸಲು ಉಪನ್ಯಾಸಗಳು, ಪ್ರಬಂಧ, ಭಾಷಣ ಸ್ಪರ್ಧೆಗಳನ್ನು ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಯೋಜಿಸುವಂತೆ ಸಭೆಯಲ್ಲಿ ಭಾಗವಹಿಸಿದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಹನೀಯರ ಜಯಂತಿ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೆ, ಎಲ್ಲ ಜನಾಂಗದವರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಂತಿಯನ್ನು ಯಶಸ್ವಿಗೊಳಿಸುವಂತೆ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲತಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.
Preparations for the celebration of Dr. B.R. Ambedkar Jayanti
Leave a comment