ಚಿಕ್ಕಮಗಳೂರು: ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಅಧಿಕಗೊಳ್ಳುತ್ತಿದ್ದು, ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ ಆರೋಪಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಟ್ಟದಮಳಲಿಯ ಮೇಲ್ವರ್ಗದ ವ್ಯಕ್ತಿಯೊಬ್ಬರ ಕಾಫಿತೋಟದ ಲೈನಿನಲ್ಲಿ ಉಳಿದುಕೊಂಡು ಚೆಲುವ ಮತ್ತು ಅವರ ಪತ್ನಿ ಲಕ್ಷ್ಮೀ ಕೂಲಿ ಕೆಲಸ ಮಾಡಿಕೊಂಡಿದ್ದರು. ತನ್ನ ಮಗಳನ್ನು ನೋಡಲು ಕೆಲಸಕ್ಕೆ ರಜೆ ಕೇಳಿದ್ದು, ತೋಟದ ಮಾಲೀಕರು ಬೆತ್ತದಿಂದ ಥಳಿಸಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆಂದು ದೂರಿದರು.
ಈ ಕಾರ್ಮಿಕರ ಆಧಾರ್‌ಕಾರ್ಡ್ ಮತ್ತು ಬ್ಯಾಂಕ್‌ಪಾಸ್ ಪುಸ್ತಕಗಳನ್ನು ತೋಟದ ಮಾಲೀಕರು ತೆಗೆದುಕೊಂಡಿದ್ದಾರೆ. ಅವುಗಳನ್ನು ಹಿಂದಿರುಗಿಸುವಂತೆ ಮನವಿ ಮಾಡಿದರೂ ಕೊಡುತ್ತಿಲ್ಲ. ಪೊಲೀಸರ ಸಹಾಯದಿಂದ ಇವರುಗಳನ್ನು ಕೂಲಿಲೈನಿನಿಂದ ಹೊರಗೆ ತರಬೇಕಾಗಿದೆ ಎಂದು ತಿಳಿಸಿದರು.
ಮಲ್ಲಂದೂರು ಪೊಲೀಸರಿಗೆ ದೂರು ನೀಡಿದ್ದರೂ ತಪ್ಪಿತ್ಥರನ್ನು ಬಂಧಿಸಲು ಮುಂದಾಗಿಲ್ಲ, ದೌರ್ಜನ್ಯ ನಡೆಸಿರುವ ವ್ಯಕ್ತಿ ಬಹಿರಂಗವಾಗಿ ತಿರುಗಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಎರಡು ದಿನದೊಳಗೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಕಚೇರಿ ಎದುರು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರ ದುಡಿಯುವ ವರ್ಗದ ಪರವಾಗಿದೆ. ಹಸಿವು ಮುಕ್ತ ಕರ್ನಾಟಕವನ್ನಾಗಿಸುವುದು ನಮ್ಮ ಗುರಿ ಎಂದು ಹೇಳುತ್ತಿದೆ. ಆದರೆ, ಸರ್ಕಾರದಲ್ಲಿರುವವರು ಹೇಳುವುದೊಂದು, ನಡೆದುಕೊಳ್ಳುವುದು ಮತ್ತೊಂದು ರೀತಿಯಲ್ಲಿ ಎಂದು ಆರೋಪಿಸಿದರು.
ಬಸವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಪ್ರಕರಣ ದಾಖಲಾಗಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿಲ್ಲ, ಕಾಂಗ್ರೆಸ್ ಮುಖಂಡರೊಬ್ಬರು ಈ ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಿದ್ದಾರೆಂದು ದೂರಿದರು.
ಬಾಲಕಾರ್ಮಿಕರು: ಜಿಲ್ಲೆಯ ಕೆಲವು ಕಾಫಿತೋಟದಲ್ಲಿ ಕಾಫಿಹಣ್ಣು ಕೊಯ್ಲಿಗೆ ಬಾಲಕಾರ್ಮಿಕರು ಮುಂದಾಗಿದ್ದಾರೆ. ಕಾಫಿ ತೋಟದಲ್ಲಿ ಅಡ್ಡಾಡಿದರೆ ಬೆಳಿಗ್ಗೆ ಬಾಲಕರು ಕೆಲಸಕ್ಕೆ ತೆರಳುವುದು ಗೊತ್ತಾಗುತ್ತದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲವೆಂದು ಅಂಬೇಡ್ಕರ್ ವಿಚಾರ ವೇದಿಕೆ ಮುಖಂಡ ಮಂಜುನಾಥ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂವಿಧಾನ ರಕ್ಷಣಾ ವೇದಿಕೆ ಮುಖಂಡ ಕೃಷ್ಣಮೂರ್ತಿ, ದಲಿತ ಸಂಘರ್ಷ ಸಮಿತಿ(ಸಾಗರ ಬಣದ) ಜಿಲ್ಲಾ ಸಂಚಾಲಕ ಬಾಲಕೃಷ್ಣ ಭೀಮ್ ಆರ್ಮಿಯ ರಾಕೇಶ್, ಹೇಮಂತ್ ಇದ್ದರು
Police department fails to take action in case of atrocities on Dalits
Leave a comment