ಚಿಕ್ಕಮಗಳೂರು: ಸಂಘ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಾಥಮಿಕ ಸದಸ್ಯತ್ವದಿಂದ ಸಂಘದ ತಾಲೂಕು ಅಧ್ಯಕ್ಷ ವೈ.ಸಿ.ಸುನಿಲ್ಕುಮಾರ್ ಮತ್ತು ಮಲ್ಲುಂಡಪ್ಪ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ೪೫ ವರ್ಷದಿಂದ ರೈತರ ಸಮಸ್ಯೆಗಳ ಬಗ್ಗೆ ಹೋರಾಡುತ್ತಿರುವ ನೂರಾರು ಕಾರ್ಯಕರ್ತರು ಲಾಠಿಏಟು, ಗೋಲಿಬಾರ್, ಜೈಲುವಾಸ ಅನುಭವಿಸಿದ್ದಾರೆ. ಆದಾಗ್ಯೂ ತಮ್ಮ ಸೈದ್ಧಾಂತಿಕ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗದೆ ಜಾತ್ಯತೀತ ತಳಹದಿಯಲ್ಲಿ ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ಅನೇಕ ವಿಘಟನೆಗಳ ಮಧ್ಯೆಯೂ ಹಿರಿಯರ ತ್ಯಾಗಬಲಿದಾನದಲ್ಲಿ ಕಟ್ಟಿದ ಸಂಘಟನೆಯಲ್ಲಿ ಅಶಿಸ್ತಿಗೆ ಜಾಗವಿಲ್ಲ ಎಂದು ಹೇಳಿದರು.
ತಾಲೂಕು ಶಾಖೆಗೆ ಇತ್ತೀಚೆಗೆ ನೇಮಕವಾದ ವೈ.ಸಿ.ಸುನೀಲ್ ಅವರು ಜಯಬಸವಾನಂದ ಸ್ವಾಮಿಗಳ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದಲ್ಲದೆ, ಸ್ವಯಂಘೋಷಿತ ಜಿಲ್ಲಾಧ್ಯಕ್ಷ ಎಂದು ಬಿಂಬಿಸಿಕೊಂಡಿದ್ದಾರೆ. ಅಧ್ಯಕ್ಷರಾದ ನಂತರ ಸಂಘದ ಕಟ್ಟುಪಾಡುಗಳಿಗೆ ವಿರುದ್ಧವಾಗಿ ನಡೆದುಕೊಳುತ್ತಿದ್ದಾರೆ. ರೈತ ಸಂಘದ ಯಾವುದೇ ಜನಪರ ಹೋರಾಟಗಳಲ್ಲಿ ಭಾಗವಹಿಸದೆ ರಿಯಲ್ ಎಸ್ಟೇಟ್ ದಂಧಗೆ ಸಂಘದ ಕಚೇರಿ ಮತ್ತು ಹಸಿರು ಶಾಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ ಎಂದರು.
ರೈತರು ಸಮಸ್ಯೆ ಮುಂದಿಟ್ಟುಕೊಂಡು ಬಂದರೆ ಹಣಕಾಸಿನ ವ್ಯವಹಾರ ಮಾಡಿಕೊಂಡು ರೈತರ ಕೆಲಸ ಮಾಡಿಕೊಡದೆ ನಿರ್ಲಕ್ಷಿಸುತ್ತಿದ್ದಾರೆ ಎಂಬ ದೂರುಗಳ ಕೇಳಿಬಂದಿವೆ. ಈವರೆಗೂ ಒಂದೇ ಒಂದು ತಾಲೂಕು ಸಮಿತಿ ಸಭೆ ಕರೆದಿಲ್ಲ. ಜಾತ್ಯಾತೀತ ನಿಲುವಿಗೆ ವಿರುದ್ಧವಾಗಿ ಹಿಂದೂ ಮಹಾಸಭಾ ಗಣಪತಿ ಕಾರ್ಯಕ್ರಮದಲ್ಲಿ ಸ್ವಾಗತ ಬ್ಯಾನರ್ ಹಾಕಿದ್ದು, ಧರ್ಮಸ್ಥಳ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಇದು ಸಂಘಟನೆಯ ವಿರೋಧಿ ನಡವಳಿಕೆಗಳಾಗಿವೆ. ಈ ಹಿನ್ನೆಲೆಯಲ್ಲಿ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘದ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಲಾಗಿದೆ ಎಂದು ಹೇಳಿದರು.
ಮುಖಂಡರಾದ ಎಂ.ಸಿ.ಬಸವರಾಜು, ಎಂ.ಬಿ.ಚಂದ್ರಶೇಖರ್, ಕುಮಾರಸ್ವಾಮಿ, ದೇವರಾಜ್, ಶಿವಕುಮಾರ್, ಲೋಕೇಶ್, ಶಿವಣ್ಣ, ಗುರುಶಾಂತಪ್ಪ ಮತ್ತಿತರರಿದ್ದರು.
Taluk President YC Sunilkumar expelled from primary membership
Leave a comment