ಚಿಕ್ಕಮಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.೨೨ ರಿಂದ ನಡೆಯುವ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಕಲಂ ೯ ಮತ್ತು ೧೦ ರಲ್ಲಿ ಇರುವಂತೆ ಈಡಿಗ ಮತ್ತು ಬಿಲ್ಲವ ಎಂದು ಬರೆಸಲು ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜಸೇವಾ ಸಂಘಗಳ ಒಕ್ಕೂಟ ಮನವಿ ಮಾಡಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಎಂ.ಸತೀಶ್ ಮಾತನಾಡಿ, ಸೆ.೨೨ ರಿಂದ ಅ.೭ ರವರೆಗೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಯಲಿದ್ದು ಕಲಂ-೯ ರಲ್ಲಿ ಇರುವಂತೆ ಈಡಿಗ ಹಾಗೂ ಕಲಂ ೧೦ ರಲ್ಲಿರುವಂತೆ ಬಿಲ್ಲವ (ಪೂಜಾರಿ) ಎಂದು ಸಮುದಾಯದವರು ಬರೆಸಬೇಕು. ಸಮಾಜಕ್ಕೆ ಸೇರಿರುವ ಇತರೆ ಉಪಪಂಗಡಗಳು ಕೂಡ ಈಡಿಗ, ಬಿಲ್ಲವ ಎಂದೇ ಬರೆಸಬೇಕು. ಯಾವುದೇ ಕಾರಣಕ್ಕೂ ಕೋಟ್ಯಾನ್, ಅಂಚನ್, ಸಾಲಿಯಾನ್, ಬಂಗೇರ, ಸುವರ್ಣ, ಆಮೀನ್, ಕರ್ಕೆರ ಮತ್ತಿತರೆ ಹೆಸರನ್ನು ನಮೂದಿಸಬಾರದು ಎಂದು ಹೇಳಿದರು.
ಈಡಿಗ ಉಪಪಂಗಡಗಳಾದ ನಾಮದಾರಿಗಳು, ದೇವರ ಮಕ್ಕಳು ಈಡಿಗ ಎಂದು ನಮೂದಿಸಬೇಕು. ಈ ರೀತಿ ಮಾಡದೆ ಬರಿ ಗೋತ್ರಗಳನ್ನು ನಮೂದಿಸಿದಲ್ಲಿ ಒಂದೊಂದೇ ಉಪಪಂಗಡಗಳು ತಮ್ಮ ಮೂಲ ಹೆಸರಿನಿಂದ ಬೇರ್ಪಟ್ಟು ಸಮೀಕ್ಷೆಯಲ್ಲಿ ನಮ್ಮ ಜನಸಂಖ್ಯೆಯು ಕಡಿಮೆಯಾಗುವ ಸಾಧ್ಯತೆ ಇದೆ ಎಂದರು.
ನಮ್ಮಲ್ಲಿ ಬಿಲ್ಲವ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್ ಎಂಬ ಜಾತಿಗಳಿಲ್ಲ. ಹೀಗಾಗಿ ಸಮಾಜ ಬಾಂಧವರು ಈ ಮೇಲಿನ ವಿಷಯ ಮನವರಿಕೆ ಮಾಡಿಕೊಂಡು ಜಾತಿ ಸಮೀಕ್ಷೆಗೆ ಬಂದಾಗ ಬಿಲ್ಲವರು ಬಿಲ್ಲವ ಎಂದೇ, ಈಡಿಗರು ಈಡಿಗ ಎಂದೇ ನಮೂದಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುಪೂಜಾರಿ, ಮುಖಂಡರಾದ ಕೆ.ಸಿ.ಗುಣಶೇಖರ್, ಕೆ.ರಾಜಣ್ಣ, ಕೃಷ್ಣಪ್ಪ ಉಪಸ್ಥಿತರಿದ್ದರು
Request to mention Billava-Eediga in the survey
Leave a comment