ಚಿಕ್ಕಮಗಳೂರು: ಉಪಲೋಕಾಯುಕ್ತರು ಸೆಪ್ಟಂಬರ್ 24 ರಿಂದ 25ರವರೆಗೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸುವುದರಿಂದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಹೇಳಿದರು.
ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ಸೆಪ್ಟೆಂಬರ್ ೨೪ ರಂದು ಬೆಳಗ್ಗೆ ೧೧ ಗಂಟೆಗೆ ಕುವೆಂಪು ಕಲಾಮಂದಿರದಲ್ಲಿ ಗೌರವಾನ್ವಿತ ನ್ಯಾಯಮೂರ್ತಿಗಳು ಹಾಗೂ ಉಪಲೋಕಾಯುಕ್ತರಾದ ಶ್ರೀ ಕೆ.ಎನ್. ಫಣೀಂದ್ರ ಅವರ ಉಪಸ್ಥಿತಿಯಲ್ಲಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಅಲ್ಲಿಯೇ ಜಿಲ್ಲಾಮಟ್ಟ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಹೇಳಿದರು.
ಸೆಪ್ಟೆಂಬರ್ ೨೫ ರಂದು ಬೆಳಿಗ್ಗೆ ೯.೪೫ ರಿಂದ ೧೦.೪೫ ಗಂಟೆಯವರೆಗೆ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಬಾರ್ ಅಸೋಸಿಯೇಶನ್ ಸಭಾಂಗಣದಲ್ಲಿ ಬಾರ್ ಅಸೋಸಿಯೇಶನ್ ಸದಸ್ಯರೊಂದಿಗೆ ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರದ ಕುರಿತು ಸಂವಾದ ನಡೆಸುವರು. ಬೆಳಿಗ್ಗೆ ೧೧ ರಿಂದ ೧೧೩೦ರವರೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
೧೧.೩೦ ರಿಂದ ಮಧ್ಯಾಹ್ನ ೧.೩೦ರವರೆಗೆ ಬಾಕಿ ಇರುವ ಪ್ರಕರಣಗಳ ಕುರಿತು ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಈಗಾಗಲೇ ಲೋಕಾಯುಕ್ತರಿಗೆ ನಮ್ಮ ಜಿಲ್ಲೆಯಿಂದ ಸಲ್ಲಿಕೆಯಾಗಿ ಪಟ್ಟಿ ಮಾಡಲಾಗಿರುವ ೮೪ ಪ್ರಕರಣಗಳ ಬಗ್ಗೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ವಿಚಾರಣೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಸೆಪ್ಟೆಂಬರ್ ೨೬ ರಂದು ಬೆಳಿಗ್ಗೆ ೯ ರಿಂದ ೧೦ ಗಂಟೆಯವರೆಗೆ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಸಭಾಂಗಣದಲ್ಲಿ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ನಡೆಸುವರಲ್ಲದೆ, ಸಂವಾದ ನಡೆಸುವರು. ಉಪಲೋಕಾಯುಕ್ತರ ಜೊತೆಗೆ ನಾಲ್ವರು ನ್ಯಾಯಾಧೀಶರ ತಂಡ ಮತ್ತು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಲೋಕಾಯುಕ್ತ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸ್ಥಳಿಯ ಮಟ್ಟದಲ್ಲಿ ಹಲವಾರು ವರ್ಷಗಳಿಂದ ಬಗೆಹರಿಯದೇ ಇರುವ ಸಣ್ಣ ಪುಟ್ಟ ಸಮಸ್ಯೆಗಳಿಗೆ ಈ ಸಂದರ್ಭದಲ್ಲಿ ಪರಿಹಾರ ದೊರೆಯಲಿದೆ. ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಂಡು ತಮ್ಮ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಉಪವಿಭಾಗಾಧಿಕಾರಿ ಸುದರ್ಶನ್ ಇದ್ದರು.
Receipt of reports from Upalokayukta from September 24
Leave a comment