ಚಿಕ್ಕಮಗಳೂರು: ನಗರದ ಹೊರವಲಯದ ಬೀಕನಹಳ್ಳಿ ಕೆರೆ ಏರಿಯ ಮೇಲೆ ದನಗಳನ್ನು ಹೊಡೆದುಕೊಂಡು ಬರಲು ತೆರಳಿದ್ದ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ತಾಳಿಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಅ. 10ರಂದು ಸಂಜೆ ನಡೆದಿದೆ.
ಬೀಕನಹಳ್ಳಿ ಜ್ಯೋತಿನಗರದ ನಿವಾಸಿ ಯಶೋಧ ಸಿ.ಬಿ. (ಷಣ್ಮುಖ ಅವರ ಪತ್ನಿ) ಸರ ಕಳೆದುಕೊಂಡವರು. ಅ. 10ರಂದು ಸಂಜೆ 6ರಿಂದ 6.20ರ ನಡುವಿನ ಅವಧಿಯಲ್ಲಿ ಅವರು ಬೀಕನಹಳ್ಳಿ ಕೆರೆ ಏರಿಯ ಮೇಲೆ ದನಗಳನ್ನು ಹೊಡೆದುಕೊಂಡು ಬರುತ್ತಿದ್ದಾಗ ಎದುರಿನಿಂದ ಬೈಕ್‌ನಲ್ಲಿ ಇಬ್ಬರು ಬಂದಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಹೆಲ್ಮೆಟ್ ಧರಿಸಿರಲಿಲ್ಲ. ಹಿಂಬದಿ ಕುಳಿತಿದ್ದ ವ್ಯಕ್ತಿ ಹೆಲ್ಮೆಟ್ ಹಾಕಿಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆಯ ಸಮೀಪಕ್ಕೆ ಬಂದಾಗ ಬೈಕ್‌ನ ವೇಗವನ್ನು ಕಡಿಮೆ ಮಾಡಿದ ಹಿಂಬದಿ ಸವಾರ, ಏಕಾಏಕಿ ಅವರ ಕುತ್ತಿಗೆಗೆ ಕೈಹಾಕಿ ತಾಳಿಸರವನ್ನು ಕಿತ್ತುಕೊಂಡಿದ್ದಾನೆ. ಈ ವೇಳೆ ಯಶೋಧ ಅವರು ಸರವನ್ನು ಹಿಡಿದುಕೊಂಡಿದ್ದರಿಂದ ಅದರ ಅರ್ಧ ಭಾಗ ಕೈಯಲ್ಲಿ ಉಳಿದಿದೆ. ಉಳಿದ ಭಾಗವನ್ನು ಕಿತ್ತುಕೊಂಡ ಆರೋಪಿಗಳು ಬೈಕ್ ನಿಲ್ಲಿಸದೆ ಪರಾರಿಯಾಗಿದ್ದಾರೆ.
ಸುಮಾರು 18 ವರ್ಷಗಳ ಹಿಂದೆ ಮಾಡಿಸಿದ್ದ 27 ಗ್ರಾಂ ತೂಕದ ಬಲ್ಬ್ ವಿನ್ಯಾಸದ ತಾಳಿಸರದಲ್ಲಿ ಚಿನ್ನದ ಸುತ್ತುಗಳು ಮತ್ತು ಕರಿಮಣಿಗಳಿದ್ದವು. ಕಳ್ಳರು ಕಿತ್ತುಕೊಂಡು ಹೋದ ಭಾಗದಲ್ಲಿ ಐದು ಚಿನ್ನದ ಸುತ್ತುಗಳು ಹಾಗೂ ಐದು ಕರಿಮಣಿ ಸುತ್ತುಗಳಿದ್ದು, ಕಳವಾದ ಚಿನ್ನದ ಅಂದಾಜು ತೂಕ 15 ಗ್ರಾಂ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಳವಾದ ಆಭರಣದ ಅಂದಾಜು ಮೌಲ್ಯ ₹1.95 ಲಕ್ಷ ಎಂದು ಅಂದಾಜಿಸಲಾಗಿದೆ.
ಸರ ಕಿತ್ತುಕೊಳ್ಳುವ ಸಂದರ್ಭದಲ್ಲಿ ಮಹಿಳೆಯ ಕುತ್ತಿಗೆಯ ಬಳಿ ಗಾಯವಾಗಿದೆ. ಕಳವಾದ ಆಭರಣವನ್ನು ಪತ್ತೆಹಚ್ಚಿ, ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಯಶೋಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Woman’s *thali* chain snatched in Beekanahalli; miscreant flees.
Leave a comment