ಅಜ್ಜಂಪುರ: ಪತಿಯ ಬೈಕ್ನಲ್ಲಿ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಆಯತಪ್ಪಿ ರಸ್ತೆಗೆ ಬಿದ್ದು ಮೃತಪಟ್ಟಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೌರಾಪುರ–ಕಾಟಿಗನೆರೆ ನಡುವಿನ ರಸ್ತೆಯಲ್ಲಿ ಅ.20ರಂದು ನಡೆದಿದೆ.
ಮೃತರನ್ನು ಅಮೃತಾಪುರ ಗ್ರಾಮದ ಎಚ್.ಆರ್. ಈರಮ್ಮ (50) ಎಂದು ಗುರುತಿಸಲಾಗಿದೆ.
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅ.20ರಂದು ಈರಮ್ಮ ಅವರು ತಮ್ಮ ತವರು ಮನೆಯಾದ ಚೌಳಹಿರಿಯೂರಿಗೆ ತೆರಳಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಪುತ್ರ ಎ.ಎಂ. ಪ್ರದೀಪ್ ಅವರು ಸ್ನೇಹಿತನಿಗೆ ಸೇರಿದ ಕೆಎ-66-ಹೆಚ್-2938 ಸಂಖ್ಯೆಯ ಬೈಕ್ ಅನ್ನು ತಂದೆ ಎ.ಪಿ. ಮುರುಗೇಂದ್ರಯ್ಯ ಅವರಿಗೆ ನೀಡಿದ್ದರು. ಬಳಿಕ ಬೆಳಿಗ್ಗೆ ಸುಮಾರು 11 ಗಂಟೆಗೆ ಮುರುಗೇಂದ್ರಯ್ಯ ಅವರು ಪತ್ನಿ ಈರಮ್ಮ ಅವರನ್ನು ಹಿಂಬದಿ ಕೂರಿಸಿಕೊಂಡು ಅಮೃತಾಪುರದಿಂದ ಪ್ರಯಾಣ ಆರಂಭಿಸಿದ್ದರು.
ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಗೌರಾಪುರ–ಕಾಟಿಗನೆರೆ ನಡುವಿನ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿದ್ದಾಗ, ಹಿಂಬದಿಯಲ್ಲಿ ಕುಳಿತಿದ್ದ ಈರಮ್ಮ ಅವರು ರಸ್ತೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಅವರ ತಲೆ ಹಾಗೂ ಕಿವಿಗೆ ಗಾಯಗಳಾಗಿದ್ದು, ತಕ್ಷಣ ಆಂಬುಲೆನ್ಸ್ ಮೂಲಕ ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಷಯ ತಿಳಿದು ಆಸ್ಪತ್ರೆಗೆ ಬಂದ ಪುತ್ರ ಪ್ರದೀಪ್ ಅವರು ತಾಯಿಯ ಎಡ ಕಿವಿಯಿಂದ ರಕ್ತಸ್ರಾವವಾಗಿರುವುದನ್ನು ಗಮನಿಸಿದ್ದಾರೆ. ತಂದೆಯ ವಿಚಾರಣೆಯಲ್ಲಿ, ಬೈಕ್ ಅನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಪತ್ನಿ ಕೆಳಗೆ ಬಿದ್ದಿದ್ದಾರೆ ಎಂದು ತಿಳಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಪುತ್ರ ಎ.ಎಂ. ಪ್ರದೀಪ್ ಅವರು ಅಜ್ಜಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಠಾಣೆಯಲ್ಲಿ ಮೊ.ನಂ. 269/2026ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Woman dies after falling from bike in Ajjampura
Leave a comment