ಚಿಕ್ಕಮಗಳೂರು: ಖಾಕಿ ಸಮವಸ್ತ್ರವು ಜನರ ವಿಶ್ವಾಸದ ಸಂಕೇತವಾಗಿದ್ದು, ದೇಶದ ಗಡಿ ರಕ್ಷಣೆ, ಆಂತರಿಕ ಭದ್ರತೆ ಹಾಗೂ ವಿಪತ್ತು ನಿರ್ವಹಣೆಯಲ್ಲಿ ಪೊಲೀಸ್ ಪಡೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಯಶ್ ಪಾಲ್ ಕ್ಷೀರಸಾಗರ್ ಹೇಳಿದರು.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವತಿಯಿಂದ ಮಂಗಳವಾರ ನಗರದ ರಾಮನಹಳ್ಳಿಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿರುವ ಹುತಾತ್ಮರ ಸ್ಮಾರಕದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದ ರಕ್ಷಣೆ ಮತ್ತು ಶಾಂತಿ ಸ್ಥಾಪನೆಗಾಗಿ ಪ್ರಾಣತ್ಯಾಗ ಮಾಡಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸೇವೆಯನ್ನು ಸ್ಮರಿಸಿದರು.
1959ರ ಅಕ್ಟೋಬರ್ 21ರಂದು ಲಡಾಖ್ನ ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ ಭಾರತದ ಗಡಿಯನ್ನು ರಕ್ಷಿಸುವ ಸಂದರ್ಭದಲ್ಲಿ ಚೀನಾದ ಪಡೆಗಳೊಂದಿಗೆ ನಡೆದ ಸಂಘರ್ಷದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ಗುಪ್ತಚರ ವಿಭಾಗದ ಸಿಬ್ಬಂದಿ ಎದುರಿಸಿದ ಸವಾಲುಗಳನ್ನು ಅವರು ಉಲ್ಲೇಖಿಸಿದರು. ಸಂಖ್ಯಾಬಲದಲ್ಲಿ ಹಿನ್ನಡೆಯಿದ್ದರೂ ದೇಶದ ಗಡಿ ರಕ್ಷಣೆಗಾಗಿ ಹತ್ತು ಮಂದಿ ಪೊಲೀಸ್ ಸಿಬ್ಬಂದಿ ಪ್ರಾಣಾರ್ಪಣೆ ಮಾಡಿದರು. ಈ ಘಟನೆಯ ಸ್ಮರಣಾರ್ಥ 1960ರಿಂದ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮ ದಿನವನ್ನು ಆಚರಿಸುವ ಸಂಪ್ರದಾಯ ಆರಂಭವಾಯಿತು ಎಂದು ತಿಳಿಸಿದರು.
ದೇಶದ ವಿವಿಧ ಭಾಗಗಳಲ್ಲಿ ಗಡಿ ಭದ್ರತೆ, ಭಯೋತ್ಪಾದನೆ, ನಕ್ಸಲ್ ಚಟುವಟಿಕೆಗಳ ನಿಯಂತ್ರಣ ಹಾಗೂ ಆಂತರಿಕ ಶಾಂತಿ ಕಾಪಾಡುವ ಕಾರ್ಯಗಳಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ದೇಶದ ರಕ್ಷಣೆ ಹಾಗೂ ಜನರ ಸುರಕ್ಷತೆಗಾಗಿ ಇದುವರೆಗೆ ಸಾವಿರಾರು ಪೊಲೀಸರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರ ಬಲಿದಾನವನ್ನು ಸದಾ ಗೌರವದಿಂದ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಖಾಕಿ ಸಮವಸ್ತ್ರ ವಿಶ್ವಾಸದ ಸಂಕೇತ
ಖಾಕಿ ಸಮವಸ್ತ್ರವು ಜನರಲ್ಲಿ ವಿಶ್ವಾಸ ಮೂಡಿಸುವ ಸಂಕೇತವಾಗಿದೆ. ಪೊಲೀಸ್ ಪಡೆಗಳಿಲ್ಲದೆ ಆಂತರಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಕಷ್ಟಸಾಧ್ಯ. ಪೊಲೀಸ್ ಸಿಬ್ಬಂದಿಯ ಸೇವೆ ಕೇವಲ ಅಪರಾಧ ನಿಯಂತ್ರಣಕ್ಕೆ ಸೀಮಿತವಾಗಿಲ್ಲ. ಪ್ರಕೃತಿ ವಿಕೋಪಗಳು ಹಾಗೂ ತುರ್ತು ಸಂದರ್ಭಗಳಲ್ಲಿ ವಿಪತ್ತು ನಿರ್ವಹಣೆಯಲ್ಲಿಯೂ ಪೊಲೀಸ್ ಪಡೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ನಂತಹ ಪಡೆಗಳ ಕಾರ್ಯಾಚರಣೆಗಳಲ್ಲಿಯೂ ಭದ್ರತಾ ಸಿಬ್ಬಂದಿಯ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು.
ಹುತಾತ್ಮರ ಸ್ಮಾರಕಕ್ಕೆ ವರ್ಷಕ್ಕೊಮ್ಮೆ ಭೇಟಿ ನೀಡಿ ಗೌರವ ಸಲ್ಲಿಸುವುದಕ್ಕೆ ಮಾತ್ರ ಸೀಮಿತವಾಗದೆ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರರ ತ್ಯಾಗವನ್ನು ಪ್ರತಿಯೊಬ್ಬರೂ ಸದಾ ಸ್ಮರಿಸಬೇಕು. ಅವರ ಸೇವೆ ಮುಂದಿನ ಪೀಳಿಗೆಗೆ ದೇಶಪ್ರೇಮ ಮತ್ತು ಕರ್ತವ್ಯನಿಷ್ಠೆಯ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಇಂದಿನ ಕಾಲಘಟ್ಟದಲ್ಲಿ ಅಪರಾಧಿಗಳು ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಇಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಪೊಲೀಸ್ ಇಲಾಖೆಯೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪೊಲೀಸ್ ಹುತಾತ್ಮರನ್ನು ಸ್ಮರಿಸಿ ಗೌರವ ಸಲ್ಲಿಸಿದ ಅವರು, ದೇಶದ ಶಾಂತಿ ಮತ್ತು ಭದ್ರತೆಗಾಗಿ ಪ್ರಾಣತ್ಯಾಗ ಮಾಡಿದ ಎಲ್ಲ ವೀರರಿಗೆ ನಮನ ಸಲ್ಲಿಸಿ, ಜೈ ಹಿಂದ್, ಜೈ ಕರ್ನಾಟಕ ಎಂದು ತಮ್ಮ ಮಾತು ಮುಗಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ್ ಅವರು ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹೆಸರುಗಳನ್ನು ಸ್ಮರಿಸಿ ಗೌರವ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಫೀಲ್ಡ್ ಡೈರೆಕ್ಟರ್ ಪುಲ್ಕಿತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜೈಕುಮಾರ್, ಡಿಸಿಎಫ್ ಬುರಯ್ಯ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹುತಾತ್ಮ ಪೊಲೀಸರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
The sacrifices made by the police for the peace and security of the nation are memorable.
Leave a comment