ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವ ಹುಚ್ಚಾಟಕ್ಕೆ ಪ್ರವಾಸಿಗರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ರಾಣಿ ಝರಿ ಪ್ರವಾಸಿ ತಾಣದಲ್ಲಿ ನಡೆದಿದೆ.
ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಣಿ ಝರಿ ವ್ಯೂ ಪಾಯಿಂಟ್‌ನಲ್ಲಿ ಬೆಂಗಳೂರು ಮೂಲದ ಪ್ರವಾಸಿಗರು ಸುಮಾರು 3,000 ಅಡಿ ಆಳದ ಪ್ರಪಾತದ ಅಂಚಿನವರೆಗೂ ಕಾರು ಚಲಾಯಿಸಿಕೊಂಡು ಹೋಗಿದ್ದು, ಪ್ರಪಾತದ ಬಾಯಿಗೆ ಬಂದು ನಿಂತ ಕಾರಿನ ದೃಶ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ರೀಲ್ಸ್‌ಗಾಗಿ ಪ್ರವಾಸಿಗರು ಅಪಾಯಕಾರಿ ಡೇರ್‌ಡೆವಿಲ್ ಸ್ಟಂಟ್ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕೃತಿಯ ಸೌಂದರ್ಯ ಸವಿಯುವ ನೆಪದಲ್ಲಿ ಪ್ರವಾಸಿಗರು ತಮ್ಮ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕಳಸ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಅರಣ್ಯ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ KA-01-MX-2647 ನೋಂದಣಿ ಸಂಖ್ಯೆಯ ಕಾರನ್ನು ಸೀಜ್ ಮಾಡಿ ಪ್ರಕರಣ ದಾಖಲಿಸಲಾಗಿದೆ.
ಪ್ರವಾಸಿ ತಾಣಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಅಪಾಯಕಾರಿ ಸಾಹಸ ಮಾಡದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದಾರೆ. ಪ್ರವಾಸ ಎಂದರೆ ಹುಚ್ಚಾಟವಲ್ಲ. ತಮ್ಮ ಹಾಗೂ ಇತರರ ಸುರಕ್ಷತೆಗೆ ಆದ್ಯತೆ ನೀಡಿ, ಪ್ರವಾಸಿ ತಾಣಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದ್ದಾರೆ.
ಕೆಲವೇ ಕ್ಷಣಗಳ ರೀಲ್ಸ್‌ಗಾಗಿ ಜೀವವನ್ನೇ ಅಪಾಯಕ್ಕೆ ಸಿಲುಕಿಸುವ ಸಾಹಸಗಳಿಗೆ ಮುಂದಾಗದಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ಪ್ರವಾಸಿಗರ ಇಂತಹ ನಿರ್ಲಕ್ಷ್ಯದ ವರ್ತನೆಗೆ ಕಡಿವಾಣ ಹಾಕಲು ಪ್ರವಾಸಿ ತಾಣಗಳಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ.
The craze of making reels at the Rani Zari tourist spot
Leave a comment