ಚಿಕ್ಕಮಗಳೂರು: ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದವರಿಗೆ ನಮ್ಮ ಸಾಧನೆಯೇ ಉತ್ತರವಾಗಿದ್ದು, ಕೇಂದ್ರ ಸರ್ಕಾರಕ್ಕಿಂತಲೂ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಇಂದು ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಾದಿಸಿದರು.
ನರಸಿಂಹರಾಜಪುರ ತಾಲ್ಲೂಕಿನ ಹಿಳುವಳ್ಳಿ ಗ್ರಾಮದ ಟಿ.ಬಿ.ಸರ್ಕಲ್ ಬಳಿ ಮೈದಾನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಹಂದೂರು ಗ್ರಾಮದಿಂದ ನರಸಿಂಹರಾಜಪುರಕ್ಕೆ ಸಂಪರ್ಕಿಸುವ ಭದ್ರ್ರಾ ಹಿನ್ನೀರಿನಲ್ಲಿ ನಿರ್ಮಿಸಿರುವ ಸೇತುವೆ ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸವಲತ್ತುಗಳ ವಿತರಣಾ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದದರು.
೨೦೨೩ರ ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದ್ದು, ಈ ಯೋಜನೆಗಳಿಗಾಗಿ ಇದುವರೆಗೆ ಸುಮಾರು ೧,೩೧,೦೦೦ ಕೋಟಿ ರೂಪಾಯಿಗಳನ್ನು ನೇರವಾಗಿ ಜನರಿಗೆ ತಲುಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿಗಳಿಂದ ಖಜಾನೆ ಖಾಲಿಯಾಗುತ್ತದೆ ಎಂದು ಪ್ರಧಾನಿ ಮೋದಿ ಸೇರಿದಂತೆ ಹಲವರು ಟೀಕಿಸಿದ್ದರು. ಆದರೆ ಯೋಜನೆಗಳು ಜಾರಿಯಾಗಿ ಮೂರು ವರ್ಷಗಳಾದರೂ ರಾಜ್ಯದ ಆರ್ಥಿಕತೆ ಭದ್ರವಾಗಿದೆ. ಕರ್ನಾಟಕವನ್ನು ನೋಡಿ ಇಂದು ಗುಜರಾತ್, ಮಧ್ಯಪ್ರದೇಶ, ಬಿಹಾರದಂತಹ ರಾಜ್ಯಗಳೂ ಗ್ಯಾರಂಟಿ ಮಾದರಿಯನ್ನು ಅನುಸರಿಸುತ್ತಿವೆ ಎಂದು ಸಿಎಂ ಹೇಳಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಆದರೆ, ಗ್ಯಾರಂಟಿ ಯೋಜನೆಗಳೇ ನಿಜವಾದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳು ಎಂಬ ಕನಿಷ್ಠ ಜ್ಞಾನವೂ ಟೀಕೆ ಮಾಡುವವರಿಗೆ ಇಲ್ಲದಿರುವುದು ವಿಷಾದನೀಯ ಎಂದು ತಿಳಿಸಿದ ಅವರು, ನಮ್ಮ ಸಂವಿಧಾನದ ಮುಖ್ಯ ಉದ್ದೇಶ ಸಮಸಮಾಜ ನಿರ್ಮಾಣ ಮಾಡುವುದಾಗಿದೆ. ಸಮಾಜದಲ್ಲಿ ಬದಲಾವಣೆ ತರಲು ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ತುಂಬುವುದು ಅತ್ಯಗತ್ಯ. ಇದೇ ಕಾರಣಕ್ಕಾಗಿ ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಭದ್ರತೆ ನೀಡುವ ಕೆಲಸ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದ ೫,೩೦೦ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡದೆ ರಾಜ್ಯಕ್ಕೆ ದ್ರೋಹ ಎಸಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಭದ್ರಾ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಈ ಸೇತುವೆ ನಿರ್ಮಾಣದ ಹಿಂದೆ ಮಾಜಿ ಸಚಿವ ಸರೋವರ ಶ್ರೀನಿವಾಸ್ ಅವರ ಶ್ರಮವಿದೆ. ಹಿಂದೆ ತಾನು ಸರ್ಕ್ಯೂಟ್ ಹೌಸ್ ಉದ್ಘಾಟನೆಗೆ ಬಂದಾಗ, ಅವರು ಮೈಸೂರು ಮಹಾರಾಜರ ಕಾಲದ ಇತಿಹಾಸವನ್ನು ನೆನಪಿಸಿ ಈ ಭಾಗಕ್ಕೆ ಸೇತುವೆಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದರು. ಅವರ ಸತತ ಬೆನ್ನಟ್ಟುವಿಕೆಯಿಂದ ಇಂದು ಸುಮಾರು ೩೫ ಕೋಟಿ ರೂ. ವೆಚ್ಚದ ಈ ಯೋಜನೆ ಸಾಕಾರಗೊಂಡಿದೆ ಎಂದು ಶ್ಲಾಘಿಸಿದರು.
ನರಸಿಂಹರಾಜಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಗೆ ಹೆಚ್ಚುವರಿಯಾಗಿ ೫ ಕೋಟಿ ರೂ. ಅನುದಾನ ನೀಡಲಾಗಿದ್ದು, ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರು ಹಾಗೂ ರೈತರು ಭೂಮಿ ಬಿಟ್ಟುಕೊಡುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ೨೦೨೩-೨೪ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ, ೫,೩೦೦ ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ನಂತರದ ನಾಲ್ಕು ಬಜೆಟ್‌ಗಳು ಕಳೆದರೂ ಒಂದು ಪೈಸೆ ಹಣವನ್ನೂ ಬಿಡುಗಡೆ ಮಾಡಿಲ್ಲ. ಇದು ರಾಜ್ಯದ ಜನತೆಗೆ ಮಾಡುತ್ತಿರುವ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ಈ ಭಾಗದಲ್ಲಿ ’ಬ್ಯಾರೇಜ್ ಕಮ್ ಬ್ರಿಡ್ಜ್’ ನಿರ್ಮಿಸಿಕೊಡುವಂತೆ ಕೇಳಿರುವ ಸಾರ್ವಜನಿಕರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ, ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
೧೫ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕರ್ನಾಟಕಕ್ಕೆ ಬರಬೇಕಿದ್ದ ೫,೪೯೫ ಕೋಟಿ ರೂ.ಗಳ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ನೀಡಿಲ್ಲ. ಅಷ್ಟೇ ಅಲ್ಲದೆ, ಕೆರೆಗಳ ಅಭಿವೃದ್ಧಿಗೆ ೩,೦೦೦ ಕೋಟಿ ರೂ. ಹಾಗೂ ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್ ಅಭಿವೃದ್ಧಿಗೆ ಘೋಷಿಸಿದ್ದ ೩,೦೦೦ ಕೋಟಿ ರೂ. ಸೇರಿದಂತೆ ಒಟ್ಟು ೧೧,೪೯೫ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಈವರೆಗೆ ಬಿಡುಗಡೆ ಮಾಡಿಲ್ಲ. ಇದು ಕನ್ನಡಿಗರಿಗೆ ಮತ್ತು ನರಸಿಂಹರಾಜಪುರದ ಜನತೆಗೆ ಮಾಡಿದ ದ್ರೋಹವಲ್ಲವೇ ಎಂದು ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ ನುಡಿದಂತೆ ನಡೆಯುವ ಸರ್ಕಾರವಿದ್ದರೆ ಅದು ಸಿದ್ದರಾಮಯ್ಯ ಸರ್ಕಾರ ಎಂದು ಹೇಳಿದ ಅವರು, ಜನತೆ ಸತ್ಯವನ್ನು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಜಿಲ್ಲೆಯ ಸವಾರ್ಂಗೀಣ ಅಭಿವೃದ್ಧಿಗೆ ಬದ್ಧವಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟು ೪೧ ಪ್ರಮುಖ ಸೇತುವೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದ್ದು, ಈ ಪೈಕಿ ೩೧ ಸೇತುವೆಗಳು ಈಗಾಗಲೇ ಲೋಕಾರ್ಪಣೆಗೊಂಡಿವೆ. ಬಾಕಿ ಉಳಿದಿರುವ ೧೦ ಸೇತುವೆಗಳ ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗಾಗಿ ಸರ್ಕಾರವು ದೊಡ್ಡ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಿದೆ. ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ೬.೧೦ ಕೋಟಿ ರೂ. ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಸುಧಾರಣೆಗಾಗಿ ೧೬ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇದರ ಜೊತೆಗೆ, ರಾಜ್ಯ ಹೆದ್ದಾರಿಯಲ್ಲಿ ಎರಡು ಸೇತುವೆಗಳ ನಿರ್ಮಾಣಕ್ಕೆ ೭.೫ ಕೋಟಿ ರೂ. ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಮೂರು ಸೇತುವೆಗಳಿಗಾಗಿ ೧೦.೪೦ ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ, ಕ್ಷೇತ್ರದ ವಿವಿಧ ಭಾಗಗಳಲ್ಲಿ ೨.೮೦ ಕೋಟಿ ರೂ. ವೆಚ್ಚದಲ್ಲಿ ಕಿರು ಸೇತುವೆಗಳ ನಿರ್ಮಾಣಕ್ಕೂ ಒಪ್ಪಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕರ ಮನವಿಗೆ ಸ್ಪಂದಿಸಿದ ಅವರು, ನೂತನ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ೨,೦೦೦ ಕೋಟಿ ರೂ.ಗಳ ಅನುದಾನದಲ್ಲಿ ಶೃಂಗೇರಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚುವರಿಯಾಗಿ ೫೦ ಕೋಟಿ ರೂ.ಗಳನ್ನು ಒದಗಿಸುವುದಾಗಿ ಘೋಷಿಸಿದರು. ಕಳೆದ ೨೦ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ನಮ್ಮ ಸರ್ಕಾರ ಜೀವ ತುಂಬುತ್ತಿದೆ ಎಂದು ಹೇಳಿದರು.
ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ರಾಜ್ಯದ ಜನತೆಗೆ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ೨೦೧೩ ರಿಂದ ೨೦೧೮ ರವರೆಗಿನ ಅವಧಿಯಲ್ಲಿಯೂ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿತ್ತು. ಈಗಿನ ಐದು ಗ್ಯಾರಂಟಿ ಯೋಜನೆಗಳ ಹಿಂದೆ ರಾಹುಲ್ ಗಾಂಧಿ ಅವರ ಆಶಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಶ್ರಮವಿದೆ. ಕೋವಿಡ್ ನಂತರದ ಆರ್ಥಿಕ ಸಂಕಷ್ಟದ ಕಾಲದಲ್ಲಿ ಮಹಿಳೆಯರು ಮತ್ತು ಬಡವರ ನೆರವಿಗೆ ಬರಬೇಕೆಂಬ ಉದ್ದೇಶದಿಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಈ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಸ್ಮರಿಸಿದರು.
ಸಿದ್ದರಾಮಯ್ಯ ಅವರು ಹಣಕಾಸಿನ ಶಿಸ್ತಿನೊಂದಿಗೆ ಬಜೆಟ್‌ನಲ್ಲಿ ಸೂಕ್ತ ಅನುದಾನ ಮೀಸಲಿರಿಸಿ ಈ ಯೋಜನೆಗಳನ್ನು ಯಶಸ್ವಿಗೊಳಿಸಿದ್ದಾರೆ. ಇಂಧನ ಇಲಾಖೆಯೊಂದರಲ್ಲೇ ಸುಮಾರು ೨.೬೪ ಕೋಟಿ ಫಲಾನುಭವಿಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕಾಗಿ ವಾರ್ಷಿಕ ಸುಮಾರು ೧೦,೦೦೦ ಕೋಟಿ ರೂ.ಗಳ ಸಬ್ಸಿಡಿಯನ್ನು ಸರ್ಕಾರ ಭರಿಸುತ್ತಿದೆ. ಗೃಹಲಕ್ಷ್ಮಿ, ಶಕ್ತಿ ಸೇರಿದಂತೆ ಎಲ್ಲಾ ಯೋಜನೆಗಳಿಂದ ಇಂದು ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸರಾಸರಿ ೫,೦೦೦ ರೂ.ಗಳಷ್ಟು ಆರ್ಥಿಕ ನೆರವು ಸಿಗುತ್ತಿದೆ. ಇದರಿಂದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದ್ದು, ರಾಜ್ಯದ ತಲಾ ಆದಾಯ ಹೆಚ್ಚಳವಾಗಲು ಈ ಯೋಜನೆಗಳು ಪೂರಕವಾಗಿವೆ ಎಂದು ಸಚಿವರು ವಿವರಿಸಿದರು.
ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸಿನಂತೆ ಸಮಾಜದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗದವರನ್ನು ಮೇಲೆತ್ತಲು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ಕರೋನಾ ಕಾಲದಲ್ಲಿ ಆಮ್ಲಜನಕ, ಔಷಧಿ ಮತ್ತು ಬೆಡ್‌ಗಳಿಲ್ಲದೆ ಜನರು ಅನುಭವಿಸಿದ ಸಂಕಷ್ಟಗಳನ್ನು ನಾವು ನೋಡಿದ್ದೇವೆ. ಅಂತಹ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಜನರ ಹಿತದೃಷ್ಟಿಯಿಂದ ಬಾಗಿಲುಗಳನ್ನು ತೆರೆಯುವ ಮೂಲಕ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಆರಂಭದಲ್ಲಿ ಅನೇಕರಲ್ಲಿ ಅನುಮಾನವಿತ್ತು. ಸುಮಾರು ೬೦ ರಿಂದ ೭೦ ಸಾವಿರ ಕೋಟಿ ರೂ.ಗಳನ್ನು ಸರ್ಕಾರ ಹೇಗೆ ಭರಿಸುತ್ತದೆ ಎಂಬ ಪ್ರಶ್ನೆಗಳಿದ್ದವು. ಆದರೆ, ಇಂದು ಆ ಎಲ್ಲಾ ಸವಾಲುಗಳನ್ನು ನಿಭಾಯಿಸಿ ಸರ್ಕಾರ ಯಶಸ್ವಿಯಾಗಿ ಜನರ ಮನೆಬಾಗಿಲಿಗೆ ನೆರವು ತಲುಪಿಸುತ್ತಿದೆ. ಈ ಕೀರ್ತಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ನಮ್ಮ ಸರ್ಕಾರಕ್ಕೆ ಸಲ್ಲುತ್ತದೆ. ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ವಾರ್ಷಿಕವಾಗಿ ಸುಮಾರು ೨೦೦ ರಿಂದ ೨೫೦ ಕೋಟಿ ರೂ.ಗಳನ್ನು ಸರ್ಕಾರ ನೀಡುತ್ತಿದೆ ಎಂದು ವಿವರಿಸಿದರು.
ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವಿನ ಗಡಿ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಟಾಸ್ಕ್ ಫೋರ್ಸ್ ರಚಿಸಿದೆ. ಇದರಿಂದ ಹಕ್ಕುಪತ್ರ ವಂಚಿತರಾದ ಸುಮಾರು ೩.೨೫ ಲಕ್ಷ ಜನರಿಗೆ ನ್ಯಾಯ ಸಿಗಲಿದೆ. ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಜಂಟಿ ಸರ್ವೆ ಕಾರ್ಯ ಈಗಾಗಲೇ ಆರಂಭವಾಗಿದ್ದು, ಎರಡು ವರ್ಷಗಳೊಳಗೆ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಿಸುವ ಗುರಿ ಹೊಂದಲಾಗಿದೆ ಎಂದು ಭರವಸೆ ನೀಡಿದರು.
ಕಾಡಾನೆ ಹಾವಳಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ ೧೨.೫ ಕೋಟಿ ರೂ. ಹಾಗೂ ಎನ್.ಆರ್.ಪುರ ಭಾಗಕ್ಕೆ ೧೦೧.೨೬ ಕೋಟಿ ರೂ. ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಮಾನವ-ವನ್ಯಜೀವಿ ಸಂಘರ್ಷ ನಿವಾರಣೆಗೆ ಬಜೆಟ್‌ನಲ್ಲಿ ೧,೫೦೦ ಕೋಟಿ ರೂ. ಘೋಷಿಸಲಾಗಿದ್ದು, ಈಗಾಗಲೇ ೨೪೯ ಕೋಟಿ ರೂ. ಬಿಡುಗಡೆಯಾಗಿದೆ. ಅಡಿಕೆ ಬೆಳೆಗೆ ಬಾಧಿಸುತ್ತಿರುವ ಎಲೆಚುಕ್ಕೆ ಮತ್ತು ಹಳದಿ ರೋಗದ ಸಂಶೋಧನೆಗಾಗಿ ಈ ಬಾರಿ ಬಜೆಟ್‌ನಲ್ಲಿ ೧೦ ಕೋಟಿ ರೂ. ಮೀಸಲಿಡಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಮೃತ ಕುಟುಂಬಗಳಿಗೆ ನೀಡಲಾಗುತ್ತಿದ್ದ ಪರಿಹಾರ ಧನವನ್ನು ೫ ಲಕ್ಷದಿಂದ ೨೦ ಲಕ್ಷ ರೂ.ಗೆ ಏರಿಸಲಾಗಿದೆ. ಕಂದಾಯ ಗ್ರಾಮಗಳ ರಚನೆ ಹಾಗೂ ಜನರ ಸಮಸ್ಯೆಗಳಿಗೆ ಕಾನೂನಾತ್ಮಕವಾಗಿ ಸ್ಪಂದಿಸುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಮಲೆನಾಡು ಮತ್ತು ಕರಾವಳಿ ಭಾಗದ ಅಭಿವೃದ್ಧಿಗೆ ಪೂರಕವಾಗಿ ಈಗಾಗಲೇ ಸುಮಾರು ೩೦೦ಕ್ಕೂ ಹೆಚ್ಚು ಕಾಲುಸಂಕಗಳನ್ನು ಸರ್ಕಾರ ಘೋಷಣೆ ಮಾಡಿದೆ ಎಂದು ಅವರು ಹೇಳಿದರು.
ಮಲೆನಾಡು ಭಾಗದಲ್ಲಿ ವಿದ್ಯಾರ್ಥಿಗಳು ಮತ್ತು ವಯೋವೃದ್ಧರು ಶಾಲೆ ಹಾಗೂ ಆಸ್ಪತ್ರೆಗಳಿಗೆ ತೆರಳುವಾಗ ಕಾಲುಜಾರಿ ಹಳ್ಳಕ್ಕೆ ಬೀಳುವ ಅಪಾಯವಿತ್ತು. ಈ ಸಮಸ್ಯೆಯನ್ನು ನೀಗಿಸಲು ಲೋಕೋಪಯೋಗಿ ಸಚಿವರ ಸಹಕಾರದೊಂದಿಗೆ ಕಾಲುಸಂಕಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಶೃಂಗೇರಿಯಲ್ಲಿ ೩೨.೬೫ ಕೋಟಿ ರೂ. ವೆಚ್ಚದಲ್ಲಿ ೧೦೦ ಬೆಡ್‌ಗಳ ಆಸ್ಪತ್ರೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಇದಕ್ಕೆ ಈಗಾಗಲೇ ಭೂಮಿಪೂಜೆ ನೆರವೇರಿಸಿದ್ದಾರೆ. ಜಯಪುರ ಆಸ್ಪತ್ರೆಗೆ ೧೨.೪೦ ಕೋಟಿ ರೂ. ನೀಡಲಾಗಿದ್ದು, ಅದು ಲೋಕಾರ್ಪಣೆಗೆ ಸಿದ್ಧವಾಗಿದೆ ಎಂದು ಮಾಹಿತಿ ನೀಡಿದರು.
ನರಸಿಂಹರಾಜಪುರ ಪಟ್ಟಣದ ರಸ್ತೆ ಅಗಲೀಕರಣಕ್ಕಾಗಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ೬೫ ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಲ್ಲಿ ಶೇ. ೮೦ರಷ್ಟು ಮಂದಿಗೆ ವೈಯಕ್ತಿಕ ಒಪ್ಪಿಗೆ ಮೇರೆಗೆ ಪರಿಹಾರ ನೀಡುವ ಕೆಲಸ ಮಾಡಲಾಗಿದೆ. ಸಂಕಷ್ಟದಲ್ಲಿರುವ ಬಡವರು ಸ್ವಯಂಪ್ರೇರಿತರಾಗಿ ಜಾಗ ಬಿಟ್ಟುಕೊಡಲು ಒಪ್ಪಿದ್ದಾರೆ. ಪಟ್ಟಣದ ಆರ್ಥಿಕ ಪ್ರಗತಿಗೆ ಈ ರಸ್ತೆ ಅಗಲೀಕರಣ ಪೂರಕವಾಗಲಿದೆ. ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನದಡಿ ಪ್ರತಿ ಶಾಸಕರಿಗೂ ೫೦ ಕೋಟಿ ರೂ. ನೀಡಲಾಗುತ್ತಿದೆ. ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸ್ಪಂದಿಸಿ ಸುಮಾರು ೬೦ ಕೋಟಿ ರೂ. ಮಂಜೂರು ಮಾಡಿದ್ದಾರೆ.
ಶಿವಮೊಗ್ಗ-ಹುಮ್ಮಡ್ಲು ಅಂತರ ೭೦ ಕಿ.ಮೀ ಇದ್ದು, ಇದಕ್ಕೆ ೭೦ ಕೋಟಿ ರೂ. ಅನುದಾನ ಒದಗಿಸಿದರೆ ಸಾವಿರಾರು ಜನರಿಗೆ ವಿಮಾನ ನಿಲ್ದಾಣಕ್ಕೆ ಹೋಗಲು ಮತ್ತು ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ. ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಅಡಿಕೆ ಎಪಿಎಂಸಿಯಲ್ಲಿ ೧೩-೧೪ ಕೋಟಿ ರೂ. ಡೆಪಾಸಿಟ್ ಇದ್ದು, ಈ ಹಣವನ್ನು ರಸ್ತೆ ಅಭಿವೃದ್ಧಿಗೆ ಬಳಸಿಕೊಳ್ಳಲು ಮನವಿ ಮಾಡಲಾಗಿದೆ. ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಹಾನಿಯಾದ ೨,೭೪೦ ಕಿ.ಮೀ ಗ್ರಾಮೀಣ ರಸ್ತೆಗಳ ಪೈಕಿ ಶೇ. ೯೦ರಷ್ಟು ರಸ್ತೆಗಳ ಮರುಸ್ಥಾಪನೆಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಗ್ರಾಮೀಣ ರಸ್ತೆಗಳ ಜಂಗಲ್ ಕಟಿಂಗ್ ಮತ್ತು ಚರಂಡಿ ಸ್ವಚ್ಛತೆಗೆ ಸರ್ಕಾರದಿಂದ ಕನಿಷ್ಠ ೧೦೦ ಕೋಟಿ ರೂ. ಅನುದಾನ ನೀಡಬೇಕು ಎಂದು ಅವರು ಮನವಿ ಮಾಡಿದರು.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ, ತರೀಕೆರೆ ಶಾಸಕರಾದ ಜಿ.ಹೆಚ್.ಶ್ರೀನಿವಾಸ್, ಕಡೂರು ಶಾಸಕರಾದ ಕೆ.ಎಸ್.ಆನಂದ್, ವಿಧಾನ ಪರಿಷತ್ ಸದಸ್ಯರಾದ ಡಾ.ಆರತಿ ಕೃಷ್ಣ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಂ.ಶ್ರೀನಿವಾಸ್, ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್.ಹರೀಶ್, ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಜಿಲ್ಲಾ ಗ್ಯಾರಂಟಿಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಕಂದಾಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಸತ್ಯನಾರಾಯಣ್, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Siddaramaiah Bridge on Bhadra backwater inaugurated
Leave a comment