ಚಿಕ್ಕಮಗಳೂರು: ಕಡೂರಿನ ಖಾಸಗಿ ಶಾಲೆಯೊಂದರಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಶಾಲೆಯಿಂದ ಮನೆಗೆ ಮರಳಿದ ಬಾಲಕಿ ಅಳುತ್ತಿದ್ದು, ಪೋಷಕರು ವಿಚಾರಿಸಿದಾಗ ಶಾಲೆಯ ಶೌಚಾಲಯದ ಬಳಿ ಕೆಂಪು ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿರುವುದಾಗಿ ತಿಳಿಸಿದ್ದಾಳೆ. ಈ ಬಗ್ಗೆ ಪೋಷಕರು ಶಾಲೆಯ ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಿ ವಿಚಾರಿಸಿದಾಗ, ಆರೋಪಿ ರಾಜು ಎಂಬಾತ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪೋಷಕರು ಪೊಲೀಸರಿಗೆ ದೂರು ನೀಡಲು ಮುಂದಾಗುವಷ್ಟರಲ್ಲಿ ಆರೋಪಿ ಶಾಲಾ ಆವರಣದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಬೀರೂರು ಪೊಲೀಸರು ಪೋಕ್ಸೋ ಕಾಯ್ದೆಯ ಕಲಂ ೯(ಈ), ೯(ಒ), ೧೦ ಮತ್ತು ೧೨ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Sexual assault on a four-year-old girl
Leave a comment