ಚಿಕ್ಕಮಗಳೂರು: ಕೇಂದ್ರದಲ್ಲಿ 11 ವರ್ಷ ಆಡಳಿತ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅದಕ್ಕೂ ಹಿಂದಿನ ದಶಕಗಳಲ್ಲಿ ಇದ್ದ ಜಡತ್ವ ಮುರಿದು, ದಿಟ್ಟ ನಿರ್ಧಾರಗಳ ಮೂಲಕ ‘ವಿಕಸಿತ ಭಾರತ’ಕ್ಕೆ ಭದ್ರ ಬುನಾದಿ ಹಾಕಿದ್ದಾರೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೇಂದ್ರ ಸರ್ಕಾರದ ಆಡಳಿತವು ಸಮೃದ್ಧ, ಸ್ವಾಭಿಮಾನಿ, ಶಕ್ತಿಶಾಲಿ ಆಡಳಿತ ನೀಡಿದೆ. ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲ. ಅಮೆರಿಕ ನಡೆಸಿದ ಸಮೀಕ್ಷೆಯಲ್ಲಿ ಜಗತ್ತಿನ 50 ಭ್ರಷ್ಟಾಚಾರ ರಹಿತ ಮುಖಂಡರ ಪಟ್ಟಿಯಲ್ಲಿ ನರೇಂದ್ರ ಮೋದಿ ಅವರ ಹೆಸರು ಮೊದಲ ಸ್ಥಾನದಲ್ಲಿ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಕರ್ನಾಟಕಕ್ಕೆ ಆರ್ಥಿಕ ಸಹಾಯ ಮತ್ತು ನಿಷ್ಪಕ್ಷಪಾತವಾದ ತೆರಿಗೆ ಹಂಚಿಕೆ ಮಾಡಿದೆ. ಒಟ್ಟು ₹2.36 ಲಕ್ಷ ಕೋಟಿ ಕರ್ನಾಟಕಕ್ಕೆ ನೀಡಿದೆ. 2004ರಿಂದ 2014ರ ವರೆಗೆ ಯುಪಿಎ ಸರ್ಕಾರ ನೀಡಿದ್ದ ₹60 ಸಾವಿರ ಕೋಟಿಗೆ ಹೋಲಿಸಿದರೆ ಶೇ 243ರಷ್ಟು ಅಧಿಕ. ಇದು ಐತಿಹಾಸಿಕ ದಾಖಲೆ’ ಎಂದರು.
ಯುಪಿಎ ಸರ್ಕಾ ರದ 10 ವರ್ಷಗಳ ಅವಧಿಯಲ್ಲಿ ಶೇ 8.2ರಷ್ಟಿದ್ದ ಸರಾಸರಿ ಹಣದುಬ್ಬರ, ಎನ್ಡಿಎ ಸರ್ಕಾರದ 11 ವರ್ಷಗಳ ಅವಧಿಯಲ್ಲಿ ಶೇ 5ಕ್ಕೆ ಇಳಿಕೆಯಾಗಿದೆ. ಯುಪಿಎ 2 ಕೋಟಿ ಉದ್ಯೋಗ ಸೃಷ್ಟಿಸಿದ್ದರೆ, ಎನ್ಡಿಎ 17 ಕೋಟಿ ಉದ್ಯೋಗ ಸೃಷ್ಟಿಸಿದೆ ಎಂದು ಮಾಹಿತಿ ನೀಡಿದರು.
ಯುಪಿಎ ಅವಧಿಯಲ್ಲಿ ಬಡತನ ಶೇ 29.2ರಷ್ಟಿದ್ದರೆ, ಎನ್ಡಿಎ ಅವಧಿಯಲ್ಲಿ ಶೇ 11.3ಕ್ಕೆ ಇಳಿಕೆಯಾಗಿದೆ. ಆದಾಯ ತೆರಿಗೆ ಸಂಗ್ರಹದಲ್ಲೂ ಎನ್ಡಿಎ ಅಧಿಕಾರದಲ್ಲಿ ಹೆಚ್ಚಳ ಆಗಿದೆ. ಯುಪಿಎ ಅವಧಿಯಲ್ಲಿ 5 ನಗರಗಳಲ್ಲಿ 248 ಕಿ.ಮೀ ಮೆಟ್ರೊ ರೈಲು ಮಾರ್ಗ ನಿರ್ಮಾಣವಾಗಿದ್ದರೆ, ಎನ್ಡಿಎ ಅವಧಿಯ 11 ವರ್ಷಗಳಲ್ಲಿ 29 ನಗರಗಳಲ್ಲಿ 1,013 ಕಿ.ಮೀ. ಮೆಟ್ರೊ ರೈಲು ಮಾರ್ಗ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಗೆ ₹8,408 ಕೋಟಿ ಮತ್ತು ಬೆಂಗಳೂರಿನ ಸೆಟಲೈಟ್ ಟೌನ್ ರಿಂಗ್ ರಸ್ತೆಗೆ ₹27 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ನೈಋತ್ಯ ರೈಲ್ವೆಗೆ ವಾರ್ಷಿಕ ಸರಾಸರಿ ಅನುದಾನ ₹3,424 ಕೋಟಿಗೆ ಏರಿಕೆಯಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ₹835 ಕೋಟಿ ಇತ್ತು ಎಂದು ವಿವರಿಸಿದರು.
‘ಜಾತಿ ಗಣತಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯ ಕೊಡಿಸುತ್ತಾರೆ ಎಂದು ಹಿಂದುಳಿದ ವರ್ಗದವರು ನಂಬಿದ್ದರು. ಆದರೆ, ಈಗ ಪಲಾಯನ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಈ ವಿಷಯದಲ್ಲಿ ನಿಮ್ಮ ಹೈಕಮಾಂಡ್ ಹೇಳಿದ ಕಾರಣಕ್ಕೆ ವಾಪಸ್ ಪಡೆಯಲು ಹೊರಟಿದ್ದೀರಿ. ಇದಕ್ಕಿಂತ ಹಾಸ್ಯಸ್ಪದ ವಿಷಯ ಮತ್ತೊಂದಿಲ್ಲ’ ಎಂದರು.
‘ಸಿದ್ದರಾಮಯ್ಯ ಅವರು ದೇವರಾಜು ಅರಸು ಮಾದರಿಯಲ್ಲಿ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಿಸುತ್ತಾರೆ ಎಂದು ನಂಬಿದ್ದೆವು. ಈ ನಿರ್ಧಾರದಲ್ಲಿ ಸಿದ್ದರಾಮಯ್ಯ ಅವರ ಸ್ವಂತಿಕೆ ಇಲ್ಲವಾಗಿದೆ. ನಿಮ್ಮ ಗೌರವ, ಘನತೆ, ನಿಮ್ಮ ಸಾರ್ವಜನಿಕ ಜೀವನದ ಒಟ್ಟು ಮೌಲ್ಯಗಳಿಗೆ ಈ ನಿರ್ಧಾರ ಸೆಡ್ಡು ಹೊಡೆದಿದೆ. ಶಸ್ತ್ರ ತ್ಯಾಗ ಮಾಡಿರುವ ಅಸಹಾಯಕ ಯೋಧನಂತೆ ಕಾಣಿಸುತ್ತಿದ್ದೀರಿ’ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್. ದೇವರಾಜ ಶೆಟ್ಟಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ, ಬೆಳವಾಡಿ ರವಿಂದ್ರ, ರಂಗನಾಥ್, ಈಶ್ವರಹಳ್ಳಿ ಮಹೇಶ, ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಭಾಗವಹಿಸಿದ್ದರು.
Prime Minister Narendra Modi’s administration lays a solid foundation for a developed India
Leave a comment