ಬೀರೂರು: ಧರ್ಮ, ಪರಂಪರೆ ನಮ್ಮ ನಾಡನ್ನು ನಿರ್ಮಿಸಿವೆ. ಧರ್ಮ ಮತ್ತು ಜಾತಿಯ ನಡುವೆ ಸಂಘರ್ಷ ಹುಟ್ಟಿಸುವ ರಾಜಕೀಯ ಹಸ್ತಕ್ಷೇಪ ಒಳಿತಲ್ಲ ಎಂದು ರಂಭಾ ಪುರಿ ಪೀಠದ ವೀರಸೋಮೇಶ್ವರ ಶಿವಾ ಚಾರ್ಯ ಸ್ವಾಮೀಜಿ ನುಡಿದರು.
ಬೀರೂರಿನ ಗಣಪತಿ ಪೆಂಡಾಲ್ ಮೈದಾನದಲ್ಲಿ ಸೋಮವಾರ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪಂಚಪೀಠಗಳು ಸಕಲರಿಗೂ ಲೇಸನ್ನೇ ಬಯಸುವುದಾಗಿದ್ದು, ಗುರು ಗಳು ಜನರಲ್ಲಿ ಧರ್ಮಶ್ರದ್ಧೆ ಉಳಿಸುವಲ್ಲಿ ನಿರತರಾಗಿದ್ದಾರೆ. ಜಾತಿ, ಮತ, ಪಂಥಗಳ ಗಡಿ ಮೀರಿ ಸಮಾಜದಲ್ಲಿ ಭಾವೈಕ್ಯ ಮೂಡಿಸುವುದೇ ನಮ್ಮ ಧ್ಯೇಯವಾಗಿದೆ. ಧರ್ಮವನ್ನು ಪಾಲಿಸುವ, ಬೋಧಿಸುವ ಕೆಲಸವನ್ನು ಗುರು ಮಾಡಬೇಕು. ರಾಜಕಾರಣಿಗಳು ಧರ್ಮ-ಧರ್ಮಗಳ ನಡುವೆ ಸಂಘರ್ಷ ಮೂಡಿಸುವ ಕೆಲಸ ಮಾಡಬಾರದು ಎನ್ನುವುದು ನಮ್ಮ ಕಳಕಳಿಯ ಸಂದೇಶವಾ ಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿದ್ದು, ಬೀರೂರು ಶ್ರೀಗಳ ನೇತೃತ್ವದಲ್ಲಿ ಎಲ್ಲರ ಶ್ರಮ ಸಾರ್ಥಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ‘ಪಂಚಪೀಠಗಳು ಜಾತಿಯ ಬದಲಾಗಿ ಜ್ಯೋತಿಯಂತೆ ಸರ್ವಧರ್ಮ ಸಮನ್ವಯದ ಪ್ರತೀಕವಾಗಿವೆ. ಇಂದಿನ ಕಾರ್ಯಕ್ರಮದಲ್ಲಿ ಈ ಊರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಸಾಬೀತಾಗಿದೆ. ನಾವೆಲ್ಲರೂ ಭಾರತೀಯರು ಎಂಬ ಹೆಮ್ಮೆ, ಸರ್ವರಲ್ಲಿ ಸಮಭಾವ, ಸಮನ್ವಯ, ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಮೂಡಿಬರಲಿ. 2026ರ ಜನವರಿ 7ರಂದು ಸಮೀಪದ ಬುಕ್ಕಾಂಬುಧಿಯಲ್ಲಿ ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಅದಕ್ಕೆ ಪಾದಯಾತ್ರೆಯ ಮೂಲಕ ಬುಕ್ಕಾಂಬುಧಿ ತಲುಪುವುದಾಗಿ ತಿಳಿಸಿದರು.
ಕಾಶೀ ಪೀಠದ ಕಿರಿಯ ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸನಾತನ ಧರ್ಮಕ್ಕೆ ಅಂತ್ಯವಿಲ್ಲ, ಸೃಷ್ಟಿಯ ಆರಂಭದಿಂದಲೂ ಇರುವ ಧರ್ಮವನ್ನು ಅಂತ್ಯ ಮಾಡಲು ಹೊರಟವರೇ ಅಂತ್ಯವಾಗಿದ್ದಾರೆ. ಇದರಿಂದ ಧರ್ಮದ ನಾಶ ಯಾರಿಂದಲೂ ಸಾಧ್ಯವಿಲ್ಲ ಎಂದು ಅರ್ಥವಾಗುತ್ತದೆ ಎಂದು ತಿಳಿಸಿದರು.
ಕಾಶೀ ಪೀಠದ ಹಿರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಪ್ರಕೃತಿಯೇ ಪಂಚಪೀಠಗಳ ತತ್ವವಾಗಿದ್ದು ಸಮೃದ್ಧಿ, ತ್ಯಾಗ, ವೈಶಾಲ್ಯ, ಸ್ವಚ್ಛತೆ, ಪರಿಪಕ್ವತೆ ಇದರ ಸಂಕೇತವಾಗಿದೆ. ಬೀರೂರು ಧರ್ಮದ ಬೇರನ್ನು ಗಟ್ಟಿಗೊ ಳಿಸಿದ ‘ಬೇರೂರು’ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಆನಂದ್, ಶೈವ ಪರಂಪರೆ ಉಳಿಸುವಲ್ಲಿ ಪಂಚಪೀಠಗಳ ಪಾತ್ರ ಮಹತ್ವದ್ದಾಗಿದ್ದು, ಅವರ ತತ್ವಾದರ್ಶ ದೇಶಕ್ಕೆ ಅಗತ್ಯವಿದೆ. ಕಡೂರಿನಲ್ಲಿಯೂ ಮತ್ತೊಮ್ಮೆ ಶೀಘ್ರವಾಗಿ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಸಲು ಅನುಮತಿ ನೀಡಬೇಕು ಎಂದು ಕೋರಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್, ಧರ್ಮನಿಷ್ಠರಾಗಿ ದುಡಿಯೋಣ, ಕರ್ಮ ಹಿಂತಿರುಗುತ್ತದೆ, ಧರ್ಮ ಕಾಯುತ್ತದೆ ಎನ್ನುವ ಅರಿವು ಇರಲಿ. ಎಲ್ಲರಿಗೂ ಹೃದಯ ವೈಶಾಲ್ಯ ಇರಲಿ, ಶಾಸಕರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ. ಎದುರಾಳಿಗ ಳನ್ನೂ ಗೌರವಿಸುವ ಹೃದಯ ಶ್ರೀಮಂತಿಕೆ ಇರಲಿ ಎಂದು ಸಲಹೆ ನೀಡಿದರು.
ಆಶಯ ನುಡಿ ಆಡಿದ ವೈ.ಎಸ್.ವಿ. ದತ್ತ, ಪಂಚಪೀಠಾಧೀಶರು ಇಲ್ಲಿ ಬಂದಿ ದ್ದು ಬಾಯಾರಿದವನ ಬಳಿಗೆ ಬಾವಿಯೇ ಬಂದಂತಾಯ್ತು. ನಿಮ್ಮ ಕಾರುಣ್ಯದಿಂದ ದ್ವೇಷ, ಸಿಟ್ಟು, ಅಸೂಯೆ ಅಳಿದು ಮನುಷ್ಯ ಸಂಬಂಧಗಳು ಗಟ್ಟಿಯಾಗಲಿ. ಕಡೂರು ಶಾಂತಿ, ನೆಮ್ಮದಿ, ಸೌಹಾರ್ದಕ್ಕೆ ನೆಲೆಯಾಗಲಿ ಎಂದರು.
ಸಮಾರಂಭದ ನೇತೃತ್ವವನ್ನು ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಎಡೆಯೂರು, ಹುಲಿಕೆರೆ, ಹುಣಸಘಟ್ಟ, ಕೆ.ಬಿದರೆ, ಚಿಕ್ಕಮಗಳೂರು, ಬಿಳಕಿ, ಹೊನ್ನವಳ್ಳಿ ಸೇರಿದಂತೆ ವಿವಿಧ ಶಾಖಾಮಠಗಳ ಶಿವಾಚಾರ್ಯರು ಇದ್ದರು.
Political interference that creates conflict between religion and caste is not good.
Leave a comment