ಚಿಕ್ಕಮಗಳೂರು: ಜಾತ್ಯತೀತ ಜನತಾದಳ ಪಕ್ಷವು ಅಸ್ತಿತ್ವಕ್ಕೆ ಬಂದು ೨೫ ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ೨೦೨೬ ರ ಜನವರಿಯಲ್ಲಿ ರಜತ ಮಹೋತ್ಸವ ಹಮ್ಮಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಇದೇ ನವೆಂಬರ್ ೨೨ ರಂದು ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯ ಕಚೇರಿ ಬೆಂಗಳೂರಿನ ಜೆಪಿ ಭವನದಲ್ಲಿ ನಡೆಯುವ ಪೂರ್ವಭಾವಿ ಸಭೆಯಲ್ಲಿ ಮಾಜಿ ಪ್ರಧಾನಿ, ಪಕ್ಷದ ಧುರೀಣ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಹಾಗೂ ಹಾಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇತರರು ಭಾಗವಹಿಸಲಿದ್ದು, ರಜತ ಮಹೋತ್ಸವದ ದಿನಾಂಕವನ್ನು ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಮುಂದಿನ ಜನವರಿಯಲ್ಲಿ ನಡೆಯುವ ರಜತ ಮಹೋತ್ಸವದಲ್ಲಿ ಪಕ್ಷದ ರಾಷ್ಟ್ರ ಮತ್ತು ರಾಜ್ಯಮಟ್ಟದ ವಿವಿಧ ಪದಾಧಿಕಾರಿಗಳು, ಶಾಸಕರು, ಸಂಸದರು ಮತ್ತಿತರೆ ಪ್ರಮುಖರು ಭಾಗವಹಿಸಲಿದ್ದಾರೆ. ಈ ಸದರ್ಭದಲ್ಲಿ ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ, ಕಿರು ಚಿತ್ರ ಹಾಗೂ ಪಕ್ಷ ಬೆಳೆದುಬಂದ ಹಾದಿಯ ಪ್ರದರ್ಶಿನಿಯ ಉದ್ಘಾಟನೆ ನಡೆಯಲಿದೆ ಎಂದು ಹೇಳಿದರು.
ಪ್ರಾದೇಶಿಕ ಪಕ್ಷವೊಂದು ೨೫ನೇ ವರ್ಷಾಚರಣೆ ಆಚರಿಸಿಕೊಳ್ಳುತ್ತಿರುವುದು ಇದೇ ಮೊದಲು. ರಾಜ್ಯ ರಾಜಕೀಯದ ಇತಿಹಾಸದಲ್ಲಿ ಕನ್ನಡಿಗರ ಧ್ವನಿಯಾಗಿ ೨೫ ವರ್ಷಗಳಿಂದ ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧವಾಗಿ ಜೆ.ಡಿ.ಎಸ್ ಹೋರಾಟ ಮಾಡುತ್ತಾ ಬಂದಿದೆ ಎಂದರು.
ಮಾಜಿ ಪ್ರಧಾನಿ ಹಾಗೂ ಪಕ್ಷದ ಸ್ಥಾಪಕರಾದ ಹೆಚ್.ಡಿ. ದೇವೇಗೌಡ ಅವರ ಅವಿರತ ಪರಿಶ್ರಮವು ಪಕ್ಷ ೨೫ವರ್ಷ ಪೂರೈಸಲು ಕಾರಣೀಭೂತವಾಗಿದೆ. ಪಕ್ಷವು ಅನೇಕ ಸವಾಲುಗಳನ್ನು ಎದುರಿಸಿ ಅನೇಕ ರಾಜಕೀಯ ಕುತಂತ್ರಗಳನ್ನು ಮೆಟ್ಟಿನಿಂತು, ಬಲಿಷ್ಟ ಪ್ರಾದೇಶಿಕ ಪಕ್ಷವಾಗಿ ಬೆಳೆದಿದೆ. ಇದಕ್ಕೆ ಪೂರಕವಾಗಿ ಅನೇಕ ನಾಯಕರು ಪಕ್ಷ ಕಟ್ಟುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ನಿಷ್ಠಾವಂತ ಕಾರ್ಯಕರ್ತರು ಅತ್ಯಂತ ನಿಷ್ಟೆಯಿಂದ ಸ್ವಾಭಿಮಾನಿಗಳಾಗಿ ಹಗಲಿರುಳೆನ್ನದೆ ನಾಯಕರ ಹೆಗಲಿಗೆ ಹೆಗಲು ಕೊಟ್ಟು ನಿಸ್ವಾರ್ಥವಾಗಿ ದುಡಿದಿದ್ದಾರೆ ಎಂದರು.
ರಾಜ್ಯದಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಉದಯವಾಗಿ ಚುನಾವಣೆಗೆ ಸ್ವರ್ದಿಸದೇ ಇಲ್ಲವೆ ಒಂದೇ ಚುನಾವಣೆಯ ನಂತರ ವಿಸರ್ಜನೆಗೊಂಡ ಉದಾಹರಣೆ ನಮ್ಮೆಲ್ಲರ ಮುಂದಿದೆ. ನಮ್ಮ ದೇಶದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಮೊದಲಿನಿಂದಲೂ ಪ್ರಾದೇಶಿಕ ಪಕ್ಷಗಳದ್ದೇ ಹಿಡಿತವಿದ್ದರೂ ಕರ್ನಾಟಕದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಹೋರಾಟದ ನಡುವೆಯೂ ಅತ್ಯಂತ ಗಟ್ಟಿಯಾಗಿ ನಿಂತಿರುವುದು ಜೆಡಿಎಸ್‌ನ ಹಮ್ಮೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ನಗರಸಭೆ ಸದಸ್ಯ ಗೋಪಿ ಇದ್ದರು.
Nov. 22: Janata Dal Secular’s preliminary meeting in Bengaluru
Leave a comment